ಬೆಂಗಳೂರು: ಕೋವಿಡ್ ಲಾಕ್ಡೌನ್ನಿಂದ ತೀವ್ರ ಆದಾಯ ಕೊರತೆ ಎದುರಿಸುತ್ತಿರುವ ರಾಜ್ಯ ಸರ್ಕಾರ ಇದೀಗ ವೆಚ್ಚ ಕಡಿತದ ಕ್ರಮಕ್ಕೆ ಮುಂದಾಗಿದೆ. ವಿಜಯ ಭಾಸ್ಕರ್ ನೇತೃತ್ವದ ಆಡಳಿತಾ ಸುಧಾರಣಾ ಆಯೋಗದ ವರದಿ ಶಿಫಾರಸು ಹಾಗೂ ಸಂಪುಟ ಉಪಸಮಿತಿಯ ವೆಚ್ಚ ಕಡಿತದ ಇತರೆ ಕಠಿಣ ಕ್ರಮಗಳನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುತ್ತಿದೆ. ಅದರ ಅನುಷ್ಠಾನ ಪ್ರಗತಿಯ ವರದಿ ಇಲ್ಲಿದೆ.
ಕೋವಿಡ್ ಹೇರಿದ ಆರ್ಥಿಕ ಸಂಕಷ್ಟ ರಾಜ್ಯದ ಹಣಕಾಸು ಸ್ಥಿತಿಗತಿಯನ್ನೇ ಬುಡಮೇಲಾಗಿಸಿದೆ. ಆದಾಯ ಕೊರತೆ ಎದುರಿಸುತ್ತಿರುವ ಸರ್ಕಾರ ಆಡಳಿತ ಸುಧಾರಣೆ ಮೂಲಕ ವೆಚ್ಚ ಕಡಿತದ ಮೊರೆ ಹೋಗಿದೆ. ವಿಜಯ ಭಾಸ್ಕರ್ ನೇತೃತ್ವದ ಆಡಳಿತ ಸುಧಾರಣಾ ಆಯೋಗದ ವರದಿ ಜಾರಿ ಜೊತೆಗೆ ಹುದ್ದೆ ಕಡಿತ ಹಾಗೂ ಇಲಾಖೆ ವಿಲೀನದ ಕ್ರಮಗಳ ಜಾರಿ ಬಗ್ಗೆನೂ ಕ್ರಮ ವಹಿಸಲು ಸೂಚಿಸಲಾಗಿದೆ.
ವಿಜಯ ಭಾಸ್ಕರ್ ಆಯೋಗ ವರದಿ ಜಾರಿ ಪ್ರಗತಿ:
ಆಯೋಗವು ಅಟಲ್ ಜಿ ಜನಸ್ನೇಹಿ ಕೇಂದ್ರಗಳು (AJSK) ನಾಗರಿಕರಿಗಾಗಿ ಏಕ ಗವಾಕ್ಷಿ ಸೇವಾ ಸೌಲಭ್ಯಗಳಾಗಿರಬೇಕೆಂದು ಶಿಫಾರಸ್ಸು ಮಾಡಿದ್ದು, ಎಲ್ಲಾ ಸರ್ಕಾರ ನಾಗರಿಕ ಆನ್ಲೈನ್ ಸೇವೆಗಳನ್ನು AJSK ಕೇಂದ್ರಗಳಲ್ಲಿ ಒದಗಿಸಲು ಕ್ರಮಕೈಗೊಳ್ಳಬೇಕು. ಈ ಸಂಬಂಧ ತಗಲುವ ವೆಚ್ಚಕ್ಕೆ 25 ರೂ. ಶುಲ್ಕವನ್ನು ವಿಧಿಸಿ ಅರ್ಜಿದಾರರಿಂದ ಪಡೆಯಲು ಕ್ರಮವಹಿಸುವಂತೆ ಸೂಚಿಸಲಾಗಿದೆ.
ಅರ್ಜಿದಾರನು ಸಲ್ಲಿಸಿದ ದಾಖಲೆಗಳನ್ನು AJSK ತಂತ್ರಾಂಶದಲ್ಲಿ ಸಂಗ್ರಹಿಸಿಕೊಂಡು ನೀಡಲಾಗುವ ಪ್ರಮಾಣ ಪತ್ರವನ್ನು ಅರ್ಜಿದಾರನ ಡಿಜಿ ಲಾಕರ್‌ಗೆ ಕಳುಹಿಸಬೇಕು. ಡಿಜಿ ಲಾಕರಿನಿಂದ ಪ್ರಮಾಣ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳುವ ಸಂದರ್ಭದಲ್ಲಿ ಶುಲ್ಕವನ್ನು ವಿಧಿಸುವ ಬಗ್ಗೆ ಕ್ರಮವಹಿಸುವಂತೆ ಸೂಚನೆ ನೀಡಲಾಗಿದೆ. ಕಂದಾಯ ಇಲಾಖೆಯ ಎಲ್ಲಾ ಸೇವೆಗಳನ್ನು ಬಳಕೆದಾರರಿಗೆ ಮೊಬೈಲ್ ಆಪ್ ಮೂಲಕ ಲಭ್ಯವಾಗುವಂತೆ ಕ್ರಮವಹಿಸಬೇಕು. ಈ ಸಂಬಂಧ ಇ-ಆಡಳಿತ ಇಲಾಖೆ ಮೊಬೈಲ್ ಆ್ಯಪ್‌ನ್ನು ಪುನರಾಭಿವೃದ್ಧಿಗೊಳಿಸಲು ಕ್ರಮ ವಹಿಸುವಂತೆ ತಿಳಿಸಲಾಗಿದೆ. ಜೊತೆಗೆ ಕಂದಾಯ ಇಲಾಖೆಯ ಎಲ್ಲಾ ಸೇವೆಗಳನ್ನು AJSKಯಿಂದ ಸ್ಥಾಪಿಸಲಾಗಿರುವ ಸಂಯೋಜನೆ ಆ್ಯಪ್ ಅಡಿಯಲ್ಲಿ ತರುವಂತೆ ತಿಳಿಸಲಾಗಿದೆ.
ಮೊದಲಿಗೆ ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲಾ ಪಿಂಚಣಿ ಸೇವೆಗಳನ್ನು ನವೋದಯ ಆ್ಯಪ್ ಅಡಿಯಲ್ಲಿ ತರಬೇಕು. ನಂತರ, ವಿವಿಧ ಇಲಾಖೆಗಳ ಎಲ್ಲಾ ಪಿಂಚಣಿ ಯೋಜನೆಗಳನ್ನು (ಕಂದಾಯೇತರ ಸೇರಿದಂತೆ) ನವೋದಯ ಆ್ಯಪ್ ಅಡಿಯಲ್ಲಿ ತರಲು ಕ್ರಮವಹಿಸಬೇಕು. ಈ ಸಂಬಂಧ ಒಂದು ತಿಂಗಳ ಕಾಲಾವಧಿ ನೀಡಲಾಗಿದೆ.
(ಇದನ್ನೂ ಓದಿ: ಕರ್ನಾಟಕ, ಗುಜರಾತ್ ಆಯ್ತು, ಇದೀಗ ಮಹಾರಾಷ್ಟ್ರದಲ್ಲೂ ಒಮಿಕ್ರಾನ್ ಪತ್ತೆ)
ನಾಗರಿಕರ ಎಲ್ಲಾ ಆನ್‌ಲೈನ್ ಸೇವೆಗಳಿಗೆ ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಗೂಗಲ್ ಪೇ, ಫೋನ್ ವೇ ಮೂಲಕ ಪಾವತಿಸಲು ಅವಕಾಶ ಕಲ್ಪಿಸಲು ಕ್ರಮ ವಹಿಸುವಂತೆ ಸೂಚಿಸಲಾಗಿದೆ. ಅರ್ಜಿದಾರರಿಗೆ ಅರ್ಜಿಯ ವಸ್ತುಸ್ಥಿತಿ, ಅನುಮೋದನೆ, ತಿರಸ್ಕರಣೆ ಮತ್ತು ಅಗತ್ಯವಿರುವ ಹೆಚ್ಚುವರಿ ದಾಖಲೆಗಳ ಕುರಿತು SMS ಸೌಲಭ್ಯ ಅಥವಾ ದೂರವಾಣಿ ಕರೆ ಸೌಲಭ ಕಲ್ಪಿಸುವಂತೆ ತಿಳಿಸಲಾಗಿದೆ.
ಮೊಬೈಲ್ ಆ್ಯಪ್ ಅಥವಾ ಡಿಜಿಲಾಕರ್ ಮೂಲಕ ಪ್ರಮಾಣ ಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಬೇಕು. ಮತ್ತು ಪ್ರಮಾಣ ಪತ್ರದ ಸಾಫ್ಟ್ ಪ್ರತಿಯನ್ನು ಇ-ಮೇಲ್ ಮೂಲಕ PDF ರೂಪದಲ್ಲಿ ಅರ್ಜಿದಾರರ ಮೊಬೈಲ್ ಸಂಖ್ಯೆಗೆ SMS ಹಾಗೆ ಜೋಡಿಸಿ ಕಳುಹಿಸುವ ಬಗ್ಗೆ ಕ್ರಮವಹಿಸುವಂತೆ ಸೂಚಿಸಲಾಗಿದೆ. ಒಂದು ತಿಂಗಳ ಒಳಗೆ ಈ ಎಲ್ಲಾ ಪ್ರಮುಖ ಆಡಳಿತ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲು ಮುಖ್ಯ ಕಾರ್ಯದರ್ಶಿ ಪಿ.ರವಿ ಕುಮಾರ್ ತಿಳಿಸಿದ್ದಾರೆ.
ಸಂಪುಟ ಉಪಸಮಿತಿಯಿಂದ ಹುದ್ದೆ ಕಡಿತ, ವಿಲೀನದ ನಿರ್ಧಾರ:
ಇತ್ತ ವೆಚ್ಚ ಕಡಿತದ ಸಂಬಂಧ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ರಚನೆಯಾಗಿರುವ ಸಂಪುಟ ಉಪಸಮಿತಿ ಹಲವು ಹುದ್ದೆ ಕಡಿತ ಹಾಗೂ ಇಲಾಖೆಗಳ ವಿಲೀನದ ಬಗ್ಗೆ ತೀರ್ಮಾನ ಕೈಗೊಂಡಿದ್ದು, ಈ ಸಂಬಂಧ ಕಾಲಮಿತಿಯೊಳಗೆ ಕ್ರಮ ಕೈಗೊಳ್ಳುವಂತೆ ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ. ನವೆಂಬರ್ನಲ್ಲಿ ಸಭೆ ನಡೆಸಿರುವ ಸಂಪುಟ ಉಪಸಮಿತಿ ಆದಷ್ಟು ಬೇಗ ವೆಚ್ಚ, ಹುದ್ದೆ ಕಡಿತದ ಸಂಬಂಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ.
- ಸಂಪುಟ ಉಪಸಮಿತಿ ಬೆಂಗಳೂರು, ಮೈಸೂರು, ಕಲಬುರ್ಗಿ ಮತ್ತು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರ ಹುದ್ದೆ ರದ್ದುಗೊಳಿಸಲು ನಿರ್ಧಾರ ಕೈಗೊಂಡಿದೆ. ಈ ಸಂಬಂಧ ಪ್ರಕ್ರಿಯೆ ಪ್ರಗತಿಯಲ್ಲಿದೆ.
- ಇ-ಆಡಳಿತ ಜಾರಿಯಾದ ಹಿನ್ನೆಲೆ ಸಚಿವಾಲಯದಲ್ಲಿನ 378 ಕಿರಿಯ ಸಹಾಯಕರ ಹುದ್ದೆ ಕಡಿತಕ್ಕೆ ತೀರ್ಮಾನ
- ಅರಣ್ಯ ಇಲಾಖೆಯಲ್ಲಿನ ಸಾಮಾಜಿಕ ಅರಣ್ಯಾಧಿಕಾರಿ (ಎಸ್ಎಫ್ಒ) ಹುದ್ದೆಯನ್ನು ವಲಯ ಅರಣ್ಯಾಧಿಕಾರಿ ಹುದ್ದೆಗೆ ವಿಲೀನ ಮಾಡಲು ನಿರ್ದೇಶನ
- ಕರ್ನಾಟಕ ಸರ್ಕಾರದ ವಿಮೆ ಇಲಾಖೆಯನ್ನು ಖಜಾನೆ ಇಲಾಖೆಗೆ ವಿಲೀನ ಮಾಡಲು ಆದೇಶ
- ಬಿಡಿಎ ಮತ್ತು ಇತರ ಸ್ಥಳೀಯ ಯೋಜನಾ ಪ್ರಾಧಿಕಾರಗಳನ್ನು ಬಿಎಂಆರ್ ಡಿಎಗೆ ವಿಲೀನ ಮಾಡುವ ಬಗ್ಗೆನೂ ಸಂಪುಟ ಉಪಸಮಿತಿ ಸಭೆಯಲ್ಲಿ ಚರ್ಚೆ ನಡೆದಿದೆ.