ಬೆಂಗಳೂರು : ಸಿಐಡಿ ಡಿವೈಎಸ್ಪಿ ಲಕ್ಷ್ಮಿ ಅನುಮಾನಾಸ್ಪದ ಸಾವು ಪ್ರಕರಣದ ಕುರಿತು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಲಕ್ಷ್ಮಿ ಮರಣೋತ್ತರ ಪರೀಕ್ಷೆ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ ಎಸ್ ಎಲ್) ವರದಿಗಾಗಿ ಕಾಯುತ್ತಿದ್ದು, ಈ ರಿಪೋರ್ಟ್ ಮೇಲೆ ಆರೋಪಿಗಳ ಭವಿಷ್ಯ ಅಡಗಿದೆ.
ಲಕ್ಷ್ಮಿಯೊಂದಿಗೆ ಗುರುವಾರ ರಾತ್ರಿ ನಾಗರಬಾವಿಯ ವಿನಾಯಕ್ ಲೇಔಟ್ನಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಮನೋಹರ್, ಪ್ರಜ್ವಲ್, ರಾಹುಲ್ ಮತ್ತು ದೇವರಾಜ್ ಎಂಬುವರು ಪಾರ್ಟಿ ಮಾಡಿದ್ದರು. ಸದ್ಯ ಈ ಎಲ್ಲರೂ ಪೊಲೀಸರ ವಶದಲ್ಲಿದ್ದಾರೆ. ಅನುಮಾನಸ್ಪಾದ ಸಾವಿನ ಹಿನ್ನೆಲೆಯಲ್ಲಿ ಎಫ್‌ಎಸ್‌ಎಲ್ ತಂಡ ಸ್ಥಳಕ್ಕೆ ಬಂದು ತಪಾಸಣೆ ನಡೆಸಿತ್ತು. ಇದೀಗ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದು, ಒಂದು ವೇಳೆ ವ್ಯತಿರಿಕ್ತ ವರದಿ ಬಂದ್ರೆ ಆರೋಪಿಗಳನ್ನು ಪೊಲೀಸರು ಬಂಧಿಸುವ ಸಾಧ್ಯತೆಯಿದೆ.
ಈಗಾಗಲೇ ಲಕ್ಷ್ಮಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಗಂಡ ನವೀನ್ ಅವರು, ಪತಿ- ಪತ್ನಿ ನಡುವೆ ಯಾವುದೇ ಗೊಂದಲ ಇರಲಿಲ್ಲ. ನಾವು ಫ್ಯಾಮಿಲಿ ಪ್ಲಾನಿಂಗ್ನಲ್ಲಿ ಇದ್ದೆವು. ಸಾಲದ್ದಕ್ಕೆ ಲಕ್ಷ್ಮಿ, ಸಾವಿನ ಹಿಂದಿನ ದಿನ ಕರೆ ಮಾಡಿ ಆಲ್ ಈಸ್ ಗುಡ್ ಅಂದಿದ್ದಳು ಎಂದು ಪ್ರತಿಕ್ರಿಯಿಸಿದ್ದಾರೆ.
ಲಕ್ಷ್ಮಿ ಮೊಬೈಲ್ ಶೋಧಿಸುತ್ತಿರುವ ಪೊಲೀಸರು : ಅನುಮಾನಾಸ್ಪದವಾಗಿ ಸಾವನ್ನಪ್ಪುತ್ತಿದ್ದಂತೆ ಲಕ್ಷ್ಮಿ ಪರ್ಸನಲ್ ಮೊಬೈಲ್ ನಾಪತ್ತೆಯಾಗಿದೆ. ಇದು ಕೂಡ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಮೊಬೈಲ್ ಪತ್ತೆಗಾಗಿ ತನಿಖಾಧಿಕಾರಿಗಳ ತಂಡವು ಅಪಾರ್ಟ್ಮೆಂಟ್ನಲ್ಲಿ ಹುಡುಕಾಟ ನಡೆಸಿದೆ.
ಆದರೆ, ಈವರೆಗೂ ಮೊಬೈಲ್ ಪತ್ತೆಯಾಗಿಲ್ಲ. ಹೀಗಾಗಿ ಅಪಾರ್ಟ್ಮೆಂಟ್ನ ಪಕ್ಕದಲಿರುವ ಖಾಲಿ ಜಾಗದಲ್ಲಿ ಮೊಬೈಲ್ ಬಿಸಾಕಿರುವ ಶಂಕೆ ಹಿನ್ನೆಲೆ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ. ಒಂದು ವೇಳೆ ಮೊಬೈಲ್ ಸಿಕ್ಕರೆ ಎಲ್ಲಾ ಮಾಹಿತಿ ಹೊರ ಬೀಳುವ ಸಾಧ್ಯತೆ ಇದೆ.
ಇದನ್ನೂ ಓದಿ: 'ನನ್ನ ಮಗಳು ಆತ್ಮಹತ್ಯೆ ಮಾಡ್ಕೊಂಡಿಲ್ಲ; ನನಗೆ ಆ ಇಬ್ಬರ ಮೇಲೆ ಅನುಮಾನವಿದೆ'