ಬೆಂಗಳೂರು : ತಿಮಿಂಗಿಲದ ವೀರ್ಯ ಮತ್ತು ವಾಂತಿಯಿಂದ ಹೊರ ಬರುವ ಮೇಣದ ರೀತಿಯಿರುವ ಸುಮಾರು 8 ಕೋಟಿ ರೂ.ಮೌಲ್ಯದ ಅಂಬೆರ್ಗ್ರಿಸ್ (ಸ್ಪರ್ಮ್ ವೇಲ್) ಹೆಸರಿನ ಡ್ರಗ್ಸ್ ಅನ್ನು ಬಂಧಿತ ಆರೋಪಿಗಳಿಗೆ ಮಾರಾಟ ಮಾಡಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಮೃತಪಟ್ಟಿರುವುದಾಗಿ ಕಾಡುಗೊಂಡನಹಳ್ಳಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಓದಿ: ಅಪರೂಪದ ಮಾದಕ ವಸ್ತು ಮಾರಾಟ, ನಾಲ್ವರು ಆರೋಪಿಗಳ ಬಂಧನ
ಪ್ರಕರಣದಲ್ಲಿ ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿದಾಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಳೆಬಾಳುವ 8 ಕೋಟಿ ರೂಪಾಯಿ ಮೌಲ್ಯದ 6 ಕೆಜಿ 700 ಗ್ರಾಂ ಅಂಬೆರ್ಗ್ರಿಸ್ (ಸ್ಪರ್ಮ್ ವೇಲ್) ವಶಪಡಿಸಿಕೊಳ್ಳಲಾಗಿತ್ತು. ವಿಚಾರಣೆ ವೇಳೆ ಕೋಲಾರದ ಮೂಲದ ಸಲ್ಮಾನ್ ಆಲಿಯಾಸ್ ರಿಯಾನ್ (65) ಎಂಬಾತ ಒಂದು ಲಕ್ಷ ರೂ.ಗೆ ಡ್ರಗ್ಸ್ ಮಾರಾಟ ಮಾಡಿರುವುದಾಗಿ ಬಾಯ್ಬಿಟ್ಟಿದ್ದನು. ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ಇನ್ಸ್ಪೆಕ್ಟರ್ ಸಂತೋಷ್ ನೇತೃತ್ವದ ತಂಡ ಶೋಧ ನಡೆಸುತ್ತಿದ್ದು, ಹೊರ ರಾಜ್ಯದಲ್ಲಿ ಮೃತಪಟ್ಟಿರುವುದಾಗಿ ಶಂಕೆ ವ್ಯಕ್ತಪಡಿಸಿದ್ದಾರೆ.
ಮೃತಪಟ್ಟಿರುವ ಬಗ್ಗೆ ಖಚಿತಪಡಿಸಲು ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳ ಪೊಲೀಸರಿಗೆ ಮಾಹಿತಿ ನೀಡುವಂತೆ ಕೇಳಿದ್ದಾರೆ. ಕೋಲಾರ ಮೂಲದ ಸಲ್ಮಾನ್ ತಮಿಳುನಾಡು ಹಾಗೂ ಆಂಧ್ರಪ್ರದೇಶಗಳಲ್ಲಿ ವಂಚನೆ, ಡ್ರಗ್ಸ್ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವುದು ಗೊತ್ತಾಗಿದೆ. ನೆರೆ ರಾಜ್ಯಗಳಲ್ಲಿ ಮೃತಪಟ್ಟಿರುವುದಾಗಿ ಶಂಕೆಯಿದ್ದು, ಈ ಬಗ್ಗೆ ಖಚಿತಪಡಿಸಿಕೊಳ್ಳಲು ಆಯಾ ರಾಜ್ಯಗಳ ಪೊಲೀಸರಿಗೆ ಮಾಹಿತಿ ನೀಡುವಂತೆ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅಪರೂಪ ಹಾಗೂ ನಿಷೇಧವಾಗಿರುವ ಅಂಬೆರ್ಗ್ರಿಸ್ ಹೆಸರಿನ ಡ್ರಗ್ಸ್ ಮಾರಾಟ ಜಾಲವನ್ನು ಕೆಜಿಹಳ್ಳಿ ಪೊಲೀಸರು ಪತ್ತೆ ಹಚ್ಚಿದ್ದರು.
ಏನಿದು ಅಂಬೆರ್ಗ್ರಿಸ್ : ಸ್ಪರ್ಮ್ ವೇಲ್ ಪ್ರಬೇಧದ ತಿಮಿಂಗಿಲವು ಹೊರಹಾಕುವ ವೀರ್ಯ ಹಾಗೂ ವಾಂತಿಯನ್ನು ಅಂಬೆರ್ಗ್ರಿಸ್ ಎನ್ನುತ್ತಾರೆ. ಇದು ಘನ ಮೇಣದ ವಾಸನೆಯಿಂದ ಕೂಡಿರುತ್ತದೆ. ಈ ವಸ್ತುವನ್ನು ಸುಗಂಧ ದ್ರವ್ಯ ಹಾಗೂ ಔಷಧಿ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಅರಬ್, ಚೀನಾ ಹಾಗೂ ಪಾಶ್ಚಿಮಾತ್ಯ ದೇಶಗಳಲ್ಲಿ ಅಪಾರ ಬೇಡಿಕೆಯಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ ಸುಮಾರು ಒಂದೂವರೆ ಕೋಟಿ ರೂಪಾಯಿನಷ್ಟು ಬೆಲೆ ಇದೆ.
ಸುಗಂಧ ದ್ರವ್ಯಕ್ಕೆ ಬಳಕೆಯಾಗುವ ಅಂಬೆರ್ಗ್ರಿಸ್ ಭಾರತದಲ್ಲಿ ಕಾನೂನು ಪ್ರಕಾರ ಮಾರಾಟ ಮಾಡುವಂತಿಲ್ಲ. ಸಂಶೋಧನೆಗೆ ಮಾತ್ರ ಬಳಸಬಹುದಾಗಿದೆ. ಮೇಣದ ರೀತಿಯ ವಸ್ತುವನ್ನು ಕೋಲಾರ ಮೂಲದ ವ್ಯಕ್ತಿಯೊಬ್ಬ ನಗರಕ್ಕೆ ಬಂದು ಆರೋಪಿಗಳಿಗೆ ಒಂದು ಲಕ್ಷಕ್ಕೆ ಮಾರಾಟ ಮಾಡಿದ್ದಾನೆ. ಇದನ್ನು ಬೇರೆ ದಂಧೆಕೋರರಿಗೆ ಮಾರಾಟಕ್ಕೆ ಯೋಜನೆ ರೂಪಿಸಿದ್ದಾಗ ಕೆಜಿಹಳ್ಳಿ ಪೊಲೀಸರ ಬಲೆಗೆ ಸಿಕ್ಕಿಹಾಕಿಕೊಂಡಿದ್ದಾರೆ.
ಸ್ಪರ್ಮ್ ವೇಲ್ ಎಂಬ ವಿಶೇಷ ತಿಮಿಂಗಿಲ : ಸ್ಪರ್ಮ್ ವೇಲ್ ಜಾತಿಯ ತಿಮಿಂಗಿಲದಲ್ಲಿ ಮಾತ್ರ ಇಂತಹ ವಸ್ತು ಉತ್ಪತಿಯಾಗುತ್ತದೆ. ಈ ಪ್ರಬೇಧದ ತಿಮಿಂಗಿಲ ಕಾಟ್ಲಾ ಫಿಶ್ ಮತ್ತು ಸ್ಕ್ವಿಡ್ ಗಳನ್ನ ಭೇಟೆಯಾಡಿ ತಿನ್ನುತ್ತದೆ. ಹೀಗಾಗಿ, ಕಾಟ್ಲಾ ಫಿಶ್ನ ಮುಳ್ಳುಗಳು ತಿಮಿಂಗಿಲದ ಹೊಟ್ಟೆಯಲ್ಲಿ ಹಲವು ತಿಂಗಳವರೆಗೂ ಜೀರ್ಣವಾಗುವುದಿಲ್ಲ. ಇದರಿಂದ ಹೊಟ್ಟೆಯಲ್ಲಿ ರಾಸಾಯನಿಕವಾಗಿ ಮೇಣದ ಕಲ್ಲಿನಂತೆ ರಚನೆಯಾಗುತ್ತದೆ.
ತಿಮಿಂಗಿಲು ಇದನ್ನು ವಾಂತಿ ಅಥವಾ ವೀರ್ಯದ ಮೂಲಕ ಹೊರ ಹಾಕುತ್ತದೆ. ಇದು ಸಾಕಷ್ಟು ಹಗುರವಾಗಿರುವ ಕಾರಣ ನೀರಿನಲ್ಲಿ ತೇಲುತ್ತದೆ. ಇಂತಹ ತೇಲುವ ಅಂಬೆರ್ಗ್ರಿಸ್, ಮೊದಲ ವಾರ ವಿಪರೀತ ವಾಸನೆ ಇರುತ್ತೆ. ನಂತರದ ದಿನಗಳಲ್ಲಿ ಇದು ಸುವಾಸನೆ ಬೀರುವ ಮೇಣದ ಕಲ್ಲಿನ ರೀತಿ ಪರಿವರ್ತನೆಯಾಗುತ್ತದೆ. ಸಾಮಾನ್ಯವಾಗಿ ಇದು ಕರಾವಳಿ ಭಾಗದಲ್ಲಿ ಕಂಡು ಬರುತ್ತದೆ.