ETV Bharat / city

ನಿಲ್ಲದ ಡ್ರಗ್ಸ್ ಅಮಲು.. ಆರೋಗ್ಯದ ಮೇಲೆ ಬೀರುವ ಪರಿಣಾಮಗಳೇನು?

author img

By

Published : Aug 17, 2022, 2:00 PM IST

Updated : Aug 17, 2022, 2:07 PM IST

ವ್ಯಸನಗಳಿಂದ ಮಾನವ ಸಮಾಜ ದೂರವಿರಿಸುವ ಪ್ರಯತ್ನವಾಗಿ ವಿಶ್ವ ಸಂಸ್ಥೆ ಪ್ರತಿ ವರ್ಷ ಒಂದೊಂದು ಧ್ಯೇಯ ವಾಕ್ಯದೊಂದಿಗೆ 'ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಣೆ ವಿರೋಧಿ ದಿನ' ಆಚರಿಸುತ್ತಿದೆ.

Drugs effects on health
ಮಾದಕ ದ್ರವ್ಯದಿಂದಾಗುವ ದುಷ್ಪರಿಣಾಮ

ಬೆಂಗಳೂರು: ದಶಕಗಳಿಂದಲೂ ಮಾದಕ ವ್ಯಸನ ಗಂಭೀರ ಸಮಸ್ಯೆಯಾಗಿ ಕಾಡುತ್ತಲೇ ಇದೆ. ಕ್ಷಣಿಕ ಸುಖಕ್ಕಾಗಿ ಮಾದಕ ದ್ರವ್ಯಗಳ ಅವಲಂಬನೆಗೆ ಒಳಗಾಗುವುದೇ ವ್ಯಸನ. ಇಂತಹ ವ್ಯಸನ ಇಂದು ವಿಶ್ವವ್ಯಾಪಿಯಾಗಿದೆ. ಶ್ರೀಮಂತರು ಮೋಜಿಗಾಗಿ ಬಳಸಿದರೆ, ಇತರರು ನೋವು, ದುಃಖ ಎಂಬ ಹಲವು ಕಾರಣಗಳಿಂದ ವ್ಯಸನಿಗಳಾಗುತ್ತಾರೆ.

ಇಂತಹ ದುಶ್ಚಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರೇ ಬಲಿಯಾಗುತ್ತಿರುವುದು ಆತಂಕದ ವಿಷಯ. ಇದು ಪಾಲಕರನ್ನು ಚಿಂತೆಗೀಡು ಮಾಡಿದೆ. ಈ ವ್ಯಸನಗಳಿಂದ ಮಾನವ ಸಮಾಜ ದೂರವಿರಿಸುವ ಪ್ರಯತ್ನವಾಗಿ ವಿಶ್ವ ಸಂಸ್ಥೆ ಪ್ರತಿ ವರ್ಷ ಒಂದೊಂದು ಧ್ಯೇಯ ವಾಕ್ಯದೊಂದಿಗೆ 'ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಣೆ ವಿರೋಧಿ ದಿನ' ಆಚರಿಸುತ್ತಿದೆ.

ಮಾದಕ ದ್ರವ್ಯ ದಳ, ಸ್ಥಳೀಯ ಪೊಲೀಸರು ಎಷ್ಟೇ ಕಟ್ಟಿನಿಟ್ಟಿನ ಕ್ರಮವಹಿಸಿದರೂ ಮಾದಕ ವಸ್ತು ಸಾಗಣೆ ಹತ್ತಿಕ್ಕಲು ಸಾಧ್ಯವಾಗುತ್ತಿಲ್ಲ. ಹೊಸ ಹೊಸ ಮಾರ್ಗಗಳಲ್ಲಿ ಡ್ರಗ್ಸ್‌ ಪೂರೈಕೆಯಾಗುತ್ತಿದೆ. ಇನ್ನು ವಿದೇಶಗಳಿಂದಲೂ ಡ್ರಗ್ಸ್ ಭಾರತಕ್ಕೆ ರವಾನೆಯಾಗುತ್ತಿದೆ. ಡ್ರಗ್ಸ್‌ ಖರೀದಿಸಿದ ವ್ಯಕ್ತಿಯನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಸುಲಭದ ಮಾತಲ್ಲ.

ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಡ್ರಗ್ಸ್ ನಿಯಂತ್ರಣಕ್ಕೆ ರಾಜ್ಯದಲ್ಲಿ ದೊಡ್ಡ ಸಮರವನ್ನೇ ಸಾರಿದ್ದರು. 2019ರಿಂದ 2021ರ ಅಂತ್ಯದವರೆಗೆ ಕರ್ನಾಟಕದಲ್ಲಿ ಎನ್​​ಸಿಬಿ ಹಾಗೂ ಸ್ಥಳೀಯ ಪೊಲೀಸರು 8 ಸಾವಿರಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿ, ಸಾವಿರಾರು ಕೆಜಿ ಚರಸ್, ಗಾಂಜಾ ಮತ್ತಿತರ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದರು.

ಎಲ್ಲಿಂದ ರವಾನೆ?: ಆಂಧ್ರಪ್ರದೇಶ, ತಮಿಳುನಾಡು, ಒಡಿಶಾ ಮತ್ತು ಗೋವಾದಿಂದ ಬೆಂಗಳೂರಿಗೆ ಗಾಂಜಾ ರವಾನೆಯಾಗುತ್ತದೆ. ಆದರೆ ಎಲ್‌ಎಸ್‌ಡಿ, ಎಂಡಿಎಂಎ, ಮಿಯ್ಯಾಂ, ಕೊಕೇನ್, ಬ್ರೌನ್ ಶುಗರ್, ಹಾಶಿಸ್ ನಂತಹ ಡ್ರಗ್ಸ್ ವಿದೇಶಗಳಿಂದ ಬರುತ್ತಿದೆ.

ಪಾಕಿಸ್ತಾನ, ಅಫ್ಘಾನಿಸ್ತಾನ, ಇರಾನ್, ಮ್ಯಾನ್ಮಾರ್‌ನಿಂದ ಹೆರಾಯಿನ್, ಅಫೀಮುನಂತಹ ಡ್ರಗ್ಸ್ ರಾಜ್ಯಕ್ಕೆ ಬರುತ್ತದೆ. ಮುಂಬೈ, ಗೋವಾ, ಮಂಗಳೂರು, ಚೆನ್ನೈಗೆ ಸಮುದ್ರ ಮಾರ್ಗದಲ್ಲಿ ಕೋಟ್ಯಂತರ ರೂ. ಮೌಲ್ಯದ ಹೊಸ ಡ್ರಗ್ಸ್‌ಗಳು ರವಾನೆಯಾಗುತ್ತಿದ್ದು, ಅಲ್ಲಿಂದ ರೈಲು ಮತ್ತು ಬಸ್‌ಗಳ ಸಹಾಯದಿಂದ ರಾಜಧಾನಿ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ - ಧಾರವಾಡ, ಮೈಸೂರು, ಚಿತ್ರದುರ್ಗ, ಬಳ್ಳಾರಿ, ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಿಗೂ ಪೂರೈಕೆಯಾಗುತ್ತಿದೆ ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು.

ವಿದೇಶಿಯರ ಪಾತ್ರ: ನೈಜೀರಿಯಾ ಸೇರಿ ಅಫ್ರಿಕಾದ ಹಲವು ಪ್ರಜೆಗಳು ರಾಜ್ಯದ ವಿವಿಧೆಡೆ ಸಕ್ರಿಯವಾಗಿ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದಾರೆ. ಕರ್ನಾಟಕದಲ್ಲಿನ ಮಾದಕ ವಸ್ತುಗಳ ಜಾಲದಲ್ಲಿ ಶೇ.40 ವಿದೇಶಿಯರ ಪಾತ್ರ ಇದೆ. ಎನ್‌ಸಿಬಿ ಅಧಿಕಾರಿಗಳು 2019 ರಲ್ಲಿ 430, 2020ರಲ್ಲಿ 196 ಹಾಗೂ 2021ರಲ್ಲಿ 345 ವಿದೇಶಿ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ.

ಯಾರು ಟಾರ್ಗೆಟ್?: ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳು, ಸಾಫ್ಟ್‌ವೇರ್ ಇಂಜಿನಿಯರ್ ಉದ್ಯೋಗಿಗಳು ಹಾಗೂ ಶ್ರೀಮಂತ ವರ್ಗದ ಯುವಕ, ಯುವತಿಯರು ಎಲ್‌ಎಸ್‌ಡಿ, ಕೊಕೇನ್, ಬ್ರೌನ್‌ ಶುಗರ್, ಹಾಶಿಸ್‌ನಂತಹ ಬೆಲೆ ಬಾಳುವ ಡ್ರಗ್ಸ್ ಮೈಕ್ರೋ ಗ್ರಾಂ ಲೆಕ್ಕದಲ್ಲಿ ಖರೀದಿಸುತ್ತಿದ್ದಾರೆ. ಪ್ರಮುಖ ನಗರಗಳಲ್ಲಿ ನಡೆಯುವ ಕಿಟ್ಟಿ ಪಾರ್ಟಿಗಳು, ಪಬ್, ಡ್ಯಾನ್ಸ್‌ ಬಾರ್‌ಗಳಲ್ಲೂ ಇದರ ಘಾಟು ಹೆಚ್ಚಾಗಿದೆ. ಕೂಲಿ ಕಾರ್ಮಿಕರು, ಬಡವರ್ಗದ ಯುವಕ - ಯುವತಿಯರು ಗಾಂಜಾ ಖರೀದಿಸಿ ಸೇವಿಸುತ್ತಾರೆ ಎಂಬುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಮೊದ ಮೊದಲು ಮದ್ಯವನ್ನು ಕುತೂಹಲಕ್ಕಾಗಿ ಸೇವಿಸಲು ಆರಂಭಿಸುವ ಜನರು ತಮ್ಮೊಳಗಿನ ಒತ್ತಡವನ್ನು ಶಮನಗೊಳಿಸಲೆಂದೋ, ಸ್ನೇಹಿತರ ಒತ್ತಾಯಕ್ಕೋ, ಶೈಕ್ಷಣಿಕ ಅಥವಾ ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡಬೇಕೆಂಬ ಒಲವಿನಿಂದಲೋ ಅಥವಾ ಅವರಲ್ಲಿನ ಒತ್ತಡ ಹಾಗೂ ಸಮಸ್ಯೆಗಳನ್ನು ಮರೆಯಲೆಂದು ಮಾದಕದ್ರವ್ಯಗಳನ್ನು ಉಪಯೋಗಿಸಲು ಪ್ರಾರಂಭಿಸುತ್ತಾರೆ.

ದುರ್ಬಲ ವ್ಯಕ್ತಿತ್ವ ಹಾಗೂ ಮನೋ ಸಾಮರ್ಥ್ಯ ಕಡಿಮೆ ಇದ್ದವರು ಮಾದಕದ್ರವ್ಯ ವ್ಯಸನಿಗಳಾಗುತ್ತಾರೆ. ವ್ಯಸನಿಗಳು ಸೋಮಾರಿಗಳೂ ಆಗಿರುವುದರಿಂದ ಅವರ ವರ್ತನೆಯಲ್ಲಿ ಬದಲಾವಣೆ ಸಾಧ್ಯವಿಲ್ಲ. ಇನ್ನು ಮುಂದೆ ಡ್ರಗ್ಸ್ ಸೇವನೆ ಮಾಡುವುದಿಲ್ಲ ಎಂದು ದೃಢನಿಶ್ಚಯ ಮಾಡಿದರೆ ಈ ಚಟದಿಂದ ಹೊರ ಬರಬಹುದು ಎಂಬ ಸಾಮಾನ್ಯ ಕಲ್ಪನೆಗಳು ಸಮಾಜದಲ್ಲಿದೆ. ಆ ನಿಟ್ಟಿನಲ್ಲಿ ವ್ಯಸನಿಗಳು ಮನಸ್ಸು ಮಾಡಬೇಕಷ್ಟೇ ಎನ್ನುತ್ತಾರೆ ತಜ್ಞರು.

ಮಾದಕ ವಸ್ತುಗಳ ಮಾದರಿ: ಧೂಮಪಾನ, ಗಾಂಜಾ ಮುಂತಾದವುಗಳನ್ನು ಸೇದುವುದು, ಇಂಜೆಕ್ಷನ್ ಚುಚ್ಚಿಕೊಳ್ಳುವುದು, ಜಗಿಯುವುದು ಮತ್ತು ಕುಡಿಯುವುದು ಸೇರಿದಂತೆ ಹಲವು ವಿಧದಲ್ಲಿ ಮಾದಕ ದ್ರವ್ಯಗಳನ್ನು ಬಳಸಲಾಗುತ್ತದೆ. ಭಾರತದಲ್ಲಿ ಮಾರಿಜುವಾನಾ, ಗಾಂಜಾ, ತಂಬಾಕು ಮತ್ತು ವೈದ್ಯರ ಸಲಹೆ ಪಡೆಯದೆ ಔಷಧಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುವುದು ಮುಂತಾದವು ವ್ಯಸನಿಗಳು ಹೆಚ್ಚಾಗಿ ಬಳಸುವ ಮಾದಕ ದ್ರವ್ಯಗಳು.

ಆರೋಗ್ಯದ ಮೇಲೆ ಬೀರುವ ಪರಿಣಾಮಗಳು:

  • ಮಾದಕ ವ್ಯಸನದಿಂದ ಲಿವರ್ ಸಮಸ್ಯೆ
  • ಮೆದುಳಿನ ಜೀವಕೋಶಗಳ ಕುಗ್ಗುವಿಕೆ
  • ಖಿನ್ನತೆ
  • ಕಿರಿಕಿರಿ
  • ಅಧಿಕ ರಕ್ತದೊತ್ತಡ
  • ಅಜೀರ್ಣ ತೊಂದರೆಗಳು
  • ಕ್ಯಾನ್ಸರ್
  • ಹೃದಯ ಸಮಸ್ಯೆ
  • ಪಾರ್ಶ್ವವಾಯು ತೊಂದರೆ
  • ಲೈಗಿಂಕ ದೌರ್ಬಲ್ಯ
  • ಅಕಾಲಿಕ ಮುಪ್ಪು
  • ಮಹಿಳೆಯರಲ್ಲಿ ಭ್ರೂಣಕ್ಕೆ ತೊಂದರೆ ಮತ್ತಿತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಮಾದಕ ವ್ಯಸನಗಳಿಂದ ಮುಕ್ತರಾಗಲು ಬಯಸುವವರು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ, ಜಿಲ್ಲಾಸ್ಪತ್ರೆ ಜಿಲ್ಲಾ ಮಾನಸಿಕ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಬಹುದು ಅಥವಾ ಆರೋಗ್ಯ ಸಹಾಯವಾಣಿ 104 ಕ್ಕೆ ಕರೆ ಮಾಡಬಹುದು ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಾದಕ ದ್ರವ್ಯದಿಂದಾಗುವ ದುಷ್ಪರಿಣಾಮಗಳೇನು?: ದೀರ್ಘಕಾಲದ ಮಾದಕ ವಸ್ತುಗಳ ಸೇವನೆಯಿಂದ ಮಿದುಳಿನ ಕ್ರಿಯೆಗಳಾದ ಕಲಿಕೆ, ನಿರ್ಧಾರ, ವರ್ತನೆ, ನಿಯಂತ್ರಣ ಮತ್ತಿತರ ನಿರ್ವಹಣೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರೊಂದಿಗೆ ವ್ಯಕ್ತಿಗಳು ಕಾಲಕ್ರಮೇಣ ದುರ್ಬಲರಾಗಿ ಖಿನ್ನತೆ ಮತ್ತು ಬೇರೆ ರೀತಿಯ ಮಾನಸಿಕ ಅಸ್ವಸ್ಥೆತೆಗಳಿಗೆ ಒಳಗಾಗಬಹುದು. ಕುಟುಂಬ, ಸ್ನೇಹಿತರು ಅಥವಾ ಮನೆ ಹಾಗೂ ಹೊರಗಿನ ಕೆಲಸಗಳ ಜವಾಬ್ದಾರಿಯ ಕುರಿತು ಸರಿಯಾಗಿ ಗಮನ ನೀಡಲು ಸಾಧ್ಯವಾಗುವುದಿಲ್ಲ. ಆರಂಭದಲ್ಲೇ ಇದರ ಬಗ್ಗೆ ಎಚ್ಚರ ವಹಿಸದಿದ್ದರೆ ವ್ಯಸನದಿಂದ ಮುಕ್ತರಾಗುವುದು ಕಷ್ಟ ಎನ್ನುತ್ತಾರೆ ವೈದ್ಯರು.

ವೈದ್ಯರ ಸಲಹೆ ಏನು?: ತಜ್ಞ ವೈದ್ಯರನ್ನು ಸಂಪರ್ಕಿಸಿದರೆ ಸೂಕ್ತ ಚಿಕಿತ್ಸೆಯಿಂದ ವ್ಯಸನಮುಕ್ತಗೊಳಿಸಲು ಸಾಧ್ಯ. ಮಾತ್ರೆ ಮತ್ತು ಕೌನ್ಸೆಲಿಂಗ್ ಮೂಲಕ ವ್ಯಕ್ತಿಯ ವ್ಯಸನ ಬದಲಾಯಿಸಲು ಸಾಧ್ಯವಾಗುತ್ತದೆ. 20 ದಿನ ಚಿಕಿತ್ಸೆ ಕೊಟ್ಟರೆ 3 ತಿಂಗಳವರೆಗೆ ಚಟ ಬಿಟ್ಟಿದ್ದು, ಮತ್ತೆ ಆರಂಭಿಸುತ್ತಾರೆ. ನಿರಂತರವಾಗಿ ಚಿಕಿತ್ಸೆ ಮುಂದುವರಿಸಿದರೆ ಶಾಶ್ವತವಾಗಿ ವ್ಯಸನವನ್ನು ಬಿಡಿಸಲು ಸಾಧ್ಯವಾಗುತ್ತದೆ.

ವ್ಯಸನ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡ ಕ್ರಮಗಳು:

  • ಮಾದಕ ವ್ಯಸನಿಗಳ ಕೌನ್ಸೆಲಿಂಗ್ ಗೆ ಸಂಯೋಜಿತ ಪುನರ್ವಸತಿ (ಐಆರ್‌ಸಿಎ) ಕೇಂದ್ರ ಸ್ಥಾಪನೆ ಮಾಡಲಾಗಿದೆ.
  • ಡ್ರಗ್ಸ್ ಚಟಕ್ಕೆ ಬಿದ್ದ ಮಕ್ಕಳು ಹಾಗೂ ಯುವಕರ ಮೇಲೆ ನಿಗಾ ಇಡಲು 80 ಕೇಂದ್ರಗಳನ್ನು ಸ್ಥಾಪಿಸಿರುವ ಸರ್ಕಾರ, ಶಾಲಾ-ಕಾಲೇಜುಗಳಲ್ಲಿ ಮಾದಕವಸ್ತು ಬಗ್ಗೆ ಜಾಗೃತಿ ಕಾರ್ಯಕ್ರಮ ಮಾಡಲಾಗುತ್ತಿದೆ.

ಸಾರ್ವಜನಿಕರ ಸಹಕಾರ ಅಗತ್ಯ: "ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕಾಗಿ ಸರ್ಕಾರ ಕಠಿಣ ಕಾನೂನುಗಳನ್ನು ರೂಪಿಸಿ, ಜಾರಿಗೊಳಿಸಿದೆ. ಆದರೆ, ಪರಿಣಾಮಕಾರಿ ಅನುಷ್ಠಾನಕ್ಕೆ ಸರ್ಕಾರಗಳ ಜತೆ ಸಾರ್ವಜನಿಕರ ಸಹಕಾರ ಅಗತ್ಯವಿದೆ. ಅಮಲಿನ ಮೋಜಿಗೆ ಮಾದಕ ವಸ್ತು ಸೇವಿಸುವ ವ್ಯಕ್ತಿ ಕ್ರಮೇಣ ಅದನ್ನೇ ಚಟವಾಗಿಸಿಕೊಂಡು ಅದಕ್ಕೆ ದಾಸನಾಗುತ್ತಾನೆ. ಇದು ಅವರ ವ್ಯಕ್ತಿತ್ವವನ್ನೇ ಹಾಳು ಮಾಡುತ್ತದೆ. ಅಲ್ಲದೇ, ಆತನ ಕುಟುಂಬ ಸದಸ್ಯರ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.

ಸಮಾಜ ಅವರನ್ನು ನೋಡುವ ದೃಷ್ಟಿಕೋನವೇ ಬದಲಾಗುತ್ತದೆ. ಯುವ ಸಮುದಾಯವನ್ನು ಮಾದಕ ವಸ್ತುಗಳ ಸೇವನೆ ಮತ್ತು ಬಳಕೆಯಿಂದ ದೂರವಿಡಲು ಹಾಗೂ ಪರಿಪೂರ್ಣ ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳುವಂತೆ ಉತ್ತೇಜಿಸಲು, ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪ್ರತಿ ವರ್ಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಮಾದಕ ವಸ್ತುಗಳ ಸಾಗಾಟ ಮತ್ತು ಸೇವನೆಯಿಂದ ಸಮಾಜವನ್ನು ಮುಕ್ತಗೊಳಿಸುವುದು ನಮ್ಮೆಲ್ಲರ ಮುಂದಿರುವ ದೊಡ್ಡ ಸವಾಲು" ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಇದನ್ನೂ ಓದಿ: ನಕಲಿ ಔಷಧಿ ತಯಾರಿಕಾ ಕಾರ್ಖಾನೆ ಮೇಲೆ ದಾಳಿ: ₹1000 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ

Last Updated : Aug 17, 2022, 2:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.