ಬೆಂಗಳೂರು: ಮೋಜಿನ ಜೀವನಕ್ಕಾಗಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಮೂವರು ಅಂತಾರಾಜ್ಯ ಪೆಡ್ಲರ್ಗಳು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಆಂಧ್ರಪ್ರದೇಶ ರಾಜ್ಯದ ಗೋವಾವರಿ ಜಿಲ್ಲೆಯ ಕಾಲಾ ಶಿವ ಜಮಿಲ್ (25), ಕೊಲ್ಲು ಗೋವಿಂದ(25) ಮತ್ತು ಹರಿಪ್ರಸಾದ್ (31) ಎನ್ನುವವರು ಬಂಧಿತರು. ಆರೋಪಿಗಳಿಂದ 21 ಲಕ್ಷ ರೂ. ಮೌಲ್ಯದ 70 ಕೆ.ಜಿ. ಗಾಂಜಾ ಮತ್ತು ಒಂದು ಕೆ.ಜಿ. ಹ್ಯಾಶಿಶ್ ಎಣ್ಣೆಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಒಡಿಶಾ ಮತ್ತು ಆಂಧ್ರಪ್ರದೇಶದ ಗಡಿ ಭಾಗದಲ್ಲಿ ಬೆಳೆಯುತ್ತಿದ್ದ ಗಾಂಜಾ ಮತ್ತು ಇತರ ಕಚ್ಚಾ ಮಾದಕ ವಸ್ತುವಿನಿಂದ ಸಿದ್ದಪಡಿಸುತ್ತಿದ್ದ ಹ್ಯಾಶಿಶ್ ಅನ್ನು ಬೆಂಗಳೂರಿಗೆ ತಂದು ಮಾರಾಟ ಮಾಡುತ್ತಿದ್ದರು.
ಇತ್ತೀಚೆಗೆ ಕನಕಪುರ ಮುಖ್ಯರಸ್ತೆಯಲ್ಲಿರುವ ಜರಗನಹಳ್ಳಿ ಆಟದ ಮೈದಾನದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿರುವ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಮೊಬೈಲ್ ಮೂಲಕ ವ್ಯಸನಿಗಳನ್ನು ಸಂಪರ್ಕಿಸಿ, ಮಾದಕ ವಸ್ತು ಪೂರೈಕೆ ಮಾಡಲು ಸಿದ್ದತೆ ನಡೆಸಿದ್ದರು. 1 ಅಥವಾ 2 ಕೆಜಿಯ ಸಣ್ಣ ಸಣ್ಣ ಪ್ಯಾಕೆಟ್‌ಗಳ ಮೂಲಕ ಮಾದಕ ವಸ್ತು ಮಾರಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಕೆಜಿ ಹಳ್ಳಿ ಗಲಭೆ ಪ್ರಕರಣ: ಪ್ರಮುಖ ಆರೋಪಿ ಸೈಯದ್ ಅಬ್ಬಾಸ್ ಬಂಧನ
ಈ ಮೊದಲು ಆರೋಪಿಗಳು ತಮ್ಮದೇ ಇನೋವಾ ಕಾರಿನಲ್ಲಿ ಆಂಧ್ರಪ್ರದೇಶದಿಂದ ಮಾದಕ ವಸ್ತುಗಳನ್ನು ತಂದು ಮಾರಾಟ ಮಾಡುತ್ತಿದ್ದರು. ಲಾಕ್‌ಡೌನ್‌ನಿಂದ ಪೊಲೀಸರು ವಾಹನ ಪರಿಶೀಲನೆ ತೀವ್ರಗೊಳಿಸಿದ್ದರಿಂದ ಬಸ್‌ನಲ್ಲಿ ತರುತ್ತಿದ್ದರು ಎನ್ನುವ ಮಾಹಿತಿ ಹೊರಬಿದ್ದಿದೆ.
ಡಿಸಿಪಿ ಹರೀಶ್ ಪಾಂಡೆ ಮಾಹಿತಿ:
ಬೆಂಗಳೂರು ದಕ್ಷಿಣ ವಿಭಾಗದ ಎಲ್ಲಾ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ವ್ಯಸನಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ಮೂಲಕ ಡ್ರಗ್ ಮಾರಾಟಗಾರರು ಮತ್ತು ಪೆಡ್ಲರ್‌ಗಳ ವಿರುದ್ಧ ಕಾರ್ಯಾಚರಣೆ ಮುಂದುವರೆಸಲಾಗುತ್ತದೆ ಎಂದು ದಕ್ಷಿಣ ವಿಭಾಗ ಡಿಸಿಪಿ ಹರೀಶ್ ಪಾಂಡೆ ಮಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.