ಬೆಂಗಳೂರು: ಕಳೆದ ಎರಡು ವರ್ಷಗಳಲ್ಲಿ ರಾಜ್ಯ ತೋಟಗಾರಿಕೆ ಇಲಾಖೆ ವತಿಯಿಂದ ಹನಿ ನೀರಾವರಿ ಯೋಜನೆಗೆ 74,611.43 ಲಕ್ಷ ರೂ.ಗಳ ಅನುದಾನ ಬಿಡುಗಡೆ ಮಾಡಲಾಗಿದೆ. ಇದು ರಾಜ್ಯ ಸರ್ಕಾರದಿಂದ ಅಧಿಕೃತ ಮಾಹಿತಿಯಾಗಿದೆ.
ಕಳೆದ ಎರಡು ವರ್ಷಗಳಲ್ಲಿ ಅಂದರೆ, 2019-20 ಮತ್ತು 2020-21ರಲ್ಲಿ ಸಬ್ಸಿಡಿ ಹಣ ಬಿಡುಗಡೆ ಕೋರಿ ಒಟ್ಟು 1,09,134 ಅರ್ಜಿಗಳು ಬಂದಿದ್ದವು. ವಿವರಗಳು ಸಹ ಲಭ್ಯವಿದ್ದು, 2019-20ನೇ ಸಾಲಿನಲ್ಲಿ ಸಾಮಾನ್ಯ ವರ್ಗಕ್ಕೆ 41,805, ಪರಿಶಿಷ್ಟ ಜಾತಿಯ 6,649 ಹಾಗೂ ಪರಿಶಿಷ್ಟ ಪಂಗಡದ 3,887 ಸೇರಿದಂತೆ ಒಟ್ಟು 52,341 ಅರ್ಜಿಗಳು ಬಂದಿವೆ.
2020-21ನೇ ಸಾಲಿನಲ್ಲಿ ಸಾಮಾನ್ಯ ವರ್ಗದಿಂದ 45,241, ಪರಿಶಿಷ್ಟ ಜಾತಿ 7,534 ಹಾಗೂ ಪರಿಶಿಷ್ಟ ಪಂಗಡದಿಂದ 4,018 ಅರ್ಜಿಗಳು ಬಂದಿದ್ದು, ಒಟ್ಟು 56,793 ಅರ್ಜಿಗಳು ಬಂದಿವೆ. ಒಟ್ಟಾರೆ ಎರಡು ವರ್ಷಗಳನ್ನು ಗಮನಿಸಿದಾಗ ಸಾಮಾನ್ಯ ವರ್ಗದಿಂದ 87,046, ಪರಿಶಿಷ್ಟ ಜಾತಿಯಿಂದ 14,183 ಹಾಗೂ ಪರಿಶಿಷ್ಟ ವರ್ಗದಿಂದ 7,905 ಸೇರಿದಂತೆ ಒಟ್ಟು 1,09,134 ಅರ್ಜಿಗಳು ಬಂದಿವೆ.
74,453.18 ಲಕ್ಷ ರೂ.ಗಳ ಸಬ್ಸಿಡಿ: ಅರ್ಜಿ ಸಲ್ಲಿಸಿರುವ ರೈತರುಗಳಿಗೆ ಒಟ್ಟಾರೆಯಾಗಿ ರೂ. 74,453.18 ಲಕ್ಷ ರೂ.ಗಳ ಸಬ್ಸಿಡಿ ನೀಡಲಾಗಿದೆ. ಮಾವು, ಬಾಳೆ, ನಿಂಬೆ, ಕಿತ್ತಳೆ, ಮೂಸಂಬಿ, ಸೀಬೆ, ಸಪೋಟ, ಅನಾನಸ್, ದಾಳಿಂಬೆ, ದ್ರಾಕ್ಷಿ, ಅಂಜೂರ, ಕಲ್ಲಂಗಡಿ, ಕರಬೂಜ, ಅಲೂಗಡ್ಡೆ, ಟೊಮ್ಯಾಟೊ, ಬದನೆಕಾಯಿ, ಹುರಳಿಕಾಯಿ, ಈರುಳ್ಳಿ, ಮೆಣಸಿನಕಾಯಿ, ಗೆಡ ಜಾತಿ, ದಪ್ಪ ಮೆಣಸಿನಕಾಯಿ, ಕುಂಬಳಜಾತಿ, ಬೆಂಡೆಕಾಯಿ, ಮೂಲಂಗಿ, ಬೀಟ್ಯೂಟ್, ಕ್ಯಾರೆಟ್, ಕಾಳುಮೆಣಸು, ಏಲಕ್ಕಿ, ಹುಣಸೆ, ಶುಂಠಿ, ಅರಿಶಿಣ, ಬೆಳ್ಳುಳ್ಳಿ, ತೆಂಗು, ಅಡಿಕೆ, ತಾಳೆ, ಗೋಡಂಬಿ, ಆಸ್ಟರ್, ಕನಕಾಂಬರ, ಚಂಡು ಹೂ, ಮಲ್ಲಿಗೆ, ಸೇವಂತಿಗೆ, ಗ್ಲಾಡಿಯೋಲಸ್ ಗುಲಾಬಿ, ಪಪ್ಪಾಯ, ಸೀತಾಫಲ, ಹಲಸು, ಇತರೆ ಹಣ್ಣುಗಳು, ಚವಳಿ ಕಾಯಿ, ಸೌತೇಕಾಯಿ, ನುಗ್ಗೆ, ಇತರ ತರಕಾರಿಗಳು, ಸೊಪ್ಪಿನ ತರಕಾರಿ, ಕರಿ ಬೇವು, ಎಲೆಕೋಸು, ಹೂಕೋಸು, ಬೀನ್ಸ್, ಹೀರೆಕಾಯಿ, ಹಾಗಲಕಾಯಿ, ತಿಂಗಳ ಹುರುಳಿ, ಸುಗಂದರಾಜ, ಗೈಲಾರ್ಡಿಯಾ, ಇತರ ಹೂವುಗಳು, ವಿಳ್ಯದೆಲೆ, ಇತರೆ ಔಷಧೀಯ ಬೆಳೆ, ಇತರೆ ಪದಾರ್ಥ, ರೋಸ್ಮರಿ, ತುಳಸಿ, ಪುದೀನ, ನಿಂಬೆಹುಲ್ಲು, ಏಕನಾಯಕ, ಶತಾವರಿ ಮತ್ತು ಶ್ರೀಗಂಧ ಇತ್ಯಾದಿ.
ಸಚಿವರ ಮಾಹಿತಿ: 2019- 20 ಹಾಗೂ 2020 -21ನೇ ಸಾಲಿನಲ್ಲಿ ಸಣ್ಣ ರೈತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮತ್ತು ಸಾಮಾನ್ಯ ರೈತರಿಗೆ 2 ಹೆಕ್ಟೇರ್‌ವರೆಗೆ ಶೇ.90ರಷ್ಟು ಸಹಾಯ ಧನ ಹಾಗೂ 2 ಹೆಕ್ಟೇರ್ ಮೇಲ್ಪಟ್ಟು 5 ಹೆಕ್ಟೇರ್‌ವರೆಗೆ ಶೇ.45ರಷ್ಟು ಸಹಾಯಧನ ಒದಗಿಸಲಾಗಿದೆ. ರೈತರ ವಿಚಾರದಲ್ಲಿ ತೋಟಗಾರಿಕೆ ಇಲಾಖೆ ಯಾವುದೇ ತಾರತಮ್ಯ ತೋರಿಸುವುದಿಲ್ಲ ಎಂದು ತೋಟಗಾರಿಕಾ ಸಚಿವ ಮುನಿರತ್ನ ತಿಳಿಸಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯ ಮುನಿರಾಜು ಗೌಡ ಪಿಎಂ ಸಹ ಇದೇ ವಿಚಾರವನ್ನು ಕೈಗೆತ್ತಿಕೊಂಡು ತಮ್ಮ ಕಾಳಜಿಯನ್ನು ಈ ಹಿಂದೆ ವ್ಯಕ್ತಪಡಿಸಿದ್ದರು. ಅಲ್ಲದೇ ರೈತರಿಗೆ ನೀಡುವ ಅನುದಾನ ಹಾಗೂ ಸಬ್ಸಿಡಿ ಸಂಬಂಧ ಸಮಗ್ರ ಮಾಹಿತಿ ಕೋರಿದ್ದರು.
ಇದನ್ನೂ ಓದಿ: ಮಕ್ಕಳಿಗೆ ಶಿಕ್ಷಣಕ್ಕಿಂತ ಮುಖ್ಯ ಯಾವುದೂ ಇಲ್ಲ: 'ಹಿಜಾಬ್' ತೀರ್ಪಿನ ಬಗ್ಗೆ ಸಿಎಂ ಪ್ರತಿಕ್ರಿಯೆ