ಬೆಂಗಳೂರು: ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಜೆಡಿಎಸ್ ವರಿಷ್ಠ ದೇವೇಗೌಡರನ್ನು ಭೇಟಿಯಾಗಿ ಮತಯಾಚನೆ ಮಾಡಿದರು. ಇದೇ ವೇಳೆ ಎನ್ಡಿಎ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಜೆಡಿಎಸ್ ಘೋಷಿಸಿದೆ.
ಖಾಸಗಿ ಹೊಟೇಲ್‌ನಲ್ಲಿ ಬಿಜೆಪಿ ಸಂಸದರು, ಶಾಸಕರ ಸಭೆಗೆ ತೆರಳಿ ಮತಯಾಚನೆ ಮಾಡಿದ ಬಳಿಕ ದ್ರೌಪದಿ ಮುರ್ಮು, ಪದ್ಮನಾಭನಗರದಲ್ಲಿರುವ ಎಚ್.ಡಿ. ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದರು. ರಾಷ್ಟ್ರಪತಿ ಚುನಾವಣೆ ಹಿನ್ನೆಲೆ ಬೆಂಬಲ ಸೂಚಿಸುವ ವಿಚಾರಕ್ಕೆ ದೇವೇಗೌಡರನ್ನು ಭೇಟಿಯಾದರು.
ದ್ರೌಪದಿ ಮುರ್ಮುಗೆ ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ನಳಿನ್ ಕುಮಾರ್ ಕಟೀಲ್, ಕಿಶನ್ ರೆಡ್ಡಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸಾಥ್ ನೀಡಿದರು. ಇದೇ ವೇಳೆ ಹೆಚ್.ಡಿ. ಕುಮಾರಸ್ವಾಮಿ, ಹೆಚ್.ಡಿ. ರೇವಣ್ಣ ಸಹ ಉಪಸ್ಥಿತರಿದ್ದರು. ದೇವೇಗೌಡರ ಭೇಟಿ ವೇಳೆ ಜೆಡಿಎಸ್ ಬೆಂಬಲ ಘೋಷಿಸಿತು.
ದೇವೇಗೌಡರನ್ನು ಭೇಟಿಯಾದ ಬಳಿಕ ದ್ರೌಪದಿ ಮುರ್ಮು ನೇರವಾಗಿ ದೆಹಲಿಗೆ ಪ್ರಯಾಣ ಬೆಳೆಸಿದರು. ಈ ಮುಂಚೆ ಪರೋಕ್ಷವಾಗಿ ಜೆಡಿಎಸ್ ದ್ರೌಪದಿ ಮುರ್ಮುಗೆ ಬೆಂಬಲ ಘೋಷಿಸುವುದಾಗಿ ಸುಳಿವು ನೀಡಿತ್ತು. ಇತ್ತ ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾ ಕಾಂಗ್ರೆಸ್ ಶಾಸಕರನ್ನು ಭೇಟಿಯಾಗಿ ಮತಯಾಚಿಸಿ ವಾಪಸ್ ತೆರಳಿದ್ದರು. ಜೆಡಿಎಸ್ ವರಿಷ್ಠ ದೊಡ್ಡಗೌಡರನ್ನು ಮುಂದಿನ ಬಾರಿ ಬೆಂಗಳೂರಿಗೆ ಆಗಮಿಸಿ ಭೇಟಿಯಾಗುತ್ತೇನೆ ಅಂದಿದ್ದರು.
ಇದನ್ನೂ ಓದಿ: ಬಿಜೆಪಿ ಸಂಸದರು, ಶಾಸಕರ ಸಭೆಯಲ್ಲಿ ಭಾಗಿಯಾದ ದ್ರೌಪದಿ ಮುರ್ಮು