ಬೆಂಗಳೂರು : ಇನ್ನೇನು ಕೋವಿಡ್ ಪ್ರಕರಣಗಳು ಇಳಿಮುಖವಾಯ್ತು ಎನ್ನುವಷ್ಟರಲ್ಲಿ ಹೊಸ ತಳಿ ಒಮಿಕ್ರಾನ್ ಮತ್ತೆ ಆತಂಕದ ವಾತಾವರಣ ಸೃಷ್ಟಿಸಿದೆ. ಒಮಿಕ್ರಾನ್ ಹರಡುವಿಕೆ ಪ್ರಮಾಣ ಹಳೇ ವೈರಸ್ಗಿಂತಲೂ ಮೂರು ಪಟ್ಟು ಅಧಿಕವಾಗಿ ಇರಲಿದೆ ಅಂತಾ ತಜ್ಞರು ಎಚ್ಚರಿಸಿದ್ದಾರೆ.
ಮೊದಲ ಅಲೆಯಲ್ಲಿ ಕೋವಿಡ್ ತಳಿ D614G ದೇಹಕ್ಕೆ ಹೊಕ್ಕಲು ಎರಡು ವಾರಗಳು ತೆಗೆದುಕೊಳ್ಳುತ್ತಿತ್ತು. ಎರಡನೇ ಅಲೆಯಲ್ಲಿ ಡೆಲ್ಟಾ ತಳಿ ದೇಹಕ್ಕೆ ಹೊಕ್ಕಲು 7 ದಿನಗಳು ತೆಗೆದುಕೊಳ್ಳುತ್ತಿತ್ತು. ಆದರೆ, ಈ ಒಮಿಕ್ರಾನ್ ಕೇವಲ 3 ದಿನಗಳೊಳಗೆ ದೇಹಕ್ಕೆ ತಲುಪುವ ಭೀತಿಯನ್ನು ರಾಜ್ಯ ಜಿನೋಮಿಕ್ ಸೀಕ್ವೆನ್ಸ್ ಸಮಿತಿಯ ತಜ್ಞ ವೈದ್ಯರಾಗಿರುವ ಡಾ. ವಿಶಾಲ್ ರಾವ್ ವ್ಯಕ್ತಪಡಿಸಿದ್ದಾರೆ.
ಕಳೆದ ಡಿಸೆಂಬರ್ನಲ್ಲೇ ಡೆಲ್ಟಾ ತಳಿ ಕಾಲಿಟ್ಟು, ಮಾರ್ಚ್ ತಿಂಗಳಲ್ಲಿ ಎರಡನೇ ಅಲೆ ಅಪ್ಪಳಿಸಿತ್ತು. ಮಾರ್ಚ್ ಮೊದಲ ವಾರದಲ್ಲಿ ಇದ್ದ ಶೇ.0.5 ಪಾಸಿಟಿವಿಟಿ ರೇಟ್, ಮಾರ್ಚ್ ಕೊನೆಯಲ್ಲಿ ಶೇ.5ಕ್ಕೆ ಏರಿತ್ತು. ಏಪ್ರಿಲ್ ಕೊನೆಯಲ್ಲಿ ಪಾಸಿಟಿವಿಟಿ ರೇಟ್ ಶೇ.25 ಅನ್ನು ದಾಟ್ಟಿತ್ತು. ಇದೀಗ ದೇಶಕ್ಕೆ ಕಾಲಿಟ್ಟಿರುವ ಒಮಿಕ್ರಾನ್ ಅದರ ಅರ್ಧ ಸಮಯದಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.
ಒಮಿಕ್ರಾನ್ ಸ್ಫೋಟ:
ಡಿಸೆಂಬರ್ ತಿಂಗಳಲ್ಲಿ ಅತ್ಯಂತ ಎಚ್ಚರಿಕೆಯಿಂದ ಇರಲು ಸೂಚನೆ ನೀಡಿರುವ ಡಾ. ವಿಶಾಲ್ ರಾವ್, ಒಮಿಕ್ರಾನ್ ಹೆಚ್ಚಳದ ಕುರಿತು ವಿವರಿಸಿದ್ದಾರೆ. ಡೆನ್ ಮಾರ್ಕ್ನಲ್ಲಿ ಸ್ಫೋಟಿಸಿರುವ ಒಮಿಕ್ರಾನ್ 4 ಇದ್ದ ಸೋಂಕಿತರ ಸಂಖ್ಯೆ ಒಂದೇ ವಾರದಲ್ಲಿ 400ಕ್ಕೆ ಜಿಗಿದಿದೆ.
ಅದು ಕೂಡ ಶೇ. 90ರಷ್ಟು ವ್ಯಾಕ್ಸಿನೇಷನ್ ಆಗಿರುವ ಜಾಗದಲ್ಲೇ ಹರಡಿದೆ. ಆದರೆ, ಯಾರೂ ಆಸ್ಪತ್ರೆ ಸೇರಲಿಲ್ಲ. ಹಾಗಾಗಿ, ಲಸಿಕೆ ನಮ್ಮ ಮೊದಲ ಅಸ್ತ್ರವಾಗಬೇಕು. ಈ ತಿಂಗಳಲ್ಲಿ ಮೈಮರೆತರೆ ಡೇಂಜರ್ ಎಂದು ತಿಳಿಸಿದ್ದಾರೆ. ಹೊಸತಳಿ ಕುರಿತು ಖುದ್ದು ವಿಶ್ವ ಆರೋಗ್ಯ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.
ಲಸಿಕೆ ಪಡೆಯಿರಿ:
ಆದಷ್ಟು ಬೇಗ ಎರಡು ಡೋಸ್ ಲಸಿಕೆ ಪಡೆದುಕೊಳ್ಳಲು ಸಲಹೆ ನೀಡಿದ್ದಾರೆ. ಹಲವರು ಎರಡನೇ ಡೋಸ್ ಲಸಿಕೆ ಕುರಿತು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಡಿಸೆಂಬರ್ ತಿಂಗಳು ನಿರ್ಣಾಯಕವಾಗಿದೆ. ಒಮಿಕ್ರಾನ್ socio economic ವೈರಸ್ ಎಂದು ಕರೆದಿದ್ದಾರೆ. ಕಾರಣ, ವರ್ಷದ ಕೊನೆ ತಿಂಗಳು ಆರ್ಥಿಕ ಚಟುವಟಿಕೆಯ ತಿಂಗಳಾಗಿದೆ. ಹೆಚ್ಚು ಜನಸಂದಣಿ ಜೊತೆಗೆ ಕ್ರಿಸ್ಮಸ್, ಹೊಸ ವರ್ಷ ಇರುವುದರಿಂದ ಸೋಂಕು ಬಹುಬೇಗ ಹರಡಲು ದಾರಿ ಮಾಡಿಕೊಟ್ಟಂತೆ ಆಗುತ್ತದೆ ಎಂದು ವಿವರಿಸಿದರು.
ಇದನ್ನೂ ಓದಿ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತ್ತೆ ಕೊರೊನಾ ಆರ್ಭಟ : ಖಾಸಗಿ ಶಾಲೆ ಸೀಲ್ ಡೌನ್
ಹೀಗಾಗಿ, ಅತ್ಯಂತ ಕಾಳಜಿವಹಿಸಲು ಸಲಹೆ ನೀಡಿರುವ ಡಾ. ವಿಶಾಲ್ ರಾವ್, ಮಾಸ್ಕ್, ಕೈಗಳ ಸ್ವಚ್ಛತೆ ಜೊತೆ ವೆಂಟಿಲೇಶನ್ ಬಗ್ಗೆ ಹೆಚ್ಚು ಗಮನ ನೀಡಲು ಕೋರಿದ್ದಾರೆ.