ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇವತ್ತಿಗೂ ಭಾರತೀಯ ಸಿನಿಮಾ ರಂಗದಲ್ಲಿ ಮೇರು ನಟರಾಗಿದ್ದ ಡಾ.ರಾಜ್ಕುಮಾರ್ ಇಂದಿಗೂ ಅಜರಾಮರ. ಕನ್ನಡ ಕುಲಕೋಟಿ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಅಚ್ಚಳಿಯದೆ ಉಳಿದಿರುವ ನಟ ಡಾ ರಾಜ್ ಕುಮಾರ್ ಅವರ 16ನೇ ವರ್ಷದ ಪುಣ್ಯತಿಥಿಯಂದು ರಾಜ್ ಕುಟುಂಬಸ್ಥರು ಅಣ್ಣಾವ್ರ ಸಮಾಧಿ ಬಳಿ ತೆರಳಿ ನಮನ ಸಲ್ಲಿಸಿದ್ದಾರೆ.
ರಾಜ್ ಕುಮಾರ್ ಗೆ ಇಷ್ಟವಾದ ಮುದ್ದೆ, ಚಿಕನ್ ಬಿರಿಯಾನಿ, ಹಲವು ಸಿಹಿ ತಿಂಡಿ ತಿನಿಸುಗಳನ್ನು ಇಡುವ ಮೂಲಕ ಶಿವರಾಜ್ ಕುಮಾರ್, ಪತ್ನಿ ಗೀತಾ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್-ದಂಪತಿ, ಅಶ್ವಿನಿ ಪುನೀತ್ ರಾಜ್‍ಕುಮಾರ್ ಮತ್ತು ಹೆಣ್ಣು ಮಕ್ಕಳಾದ ಲಕ್ಷ್ಮೀ ಹಾಗು ಪೂರ್ಣಿಮಾ ಸೇರಿದಂತೆ ಇಡೀ ಕುಟುಂಬ ವರನಟನ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಇದರ ಜೊತೆಗೆ ಪಾರ್ವತಮ್ಮ ರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್ ಸಮಾಧಿಗೂ ಕುಟುಂಬಸ್ಥರು ಪೂಜೆ ಸಲ್ಲಿಸಿದರು.
ಡಾ ರಾಜ್ ಕುಮಾರ್ ಅಂದಾಕ್ಷಣ ಅವರ ಸರಳತೆ, ಪ್ರತಿಯೊಬ್ಬರಿಗೆ ಅವರು ಕೊಡುತ್ತಿದ್ದ ಗೌರವ, ಜೊತೆಗೆ ಕನ್ನಡ ಭಾಷೆ, ನೆಲ, ಜಲ ಅಂತಾ ಬಂದಾಗ ಡಾ. ರಾಜ್ ಕುಮಾರ್ ಮುಂಚೂಣಿಯಲ್ಲಿದ್ದರು. ಎಲ್ಲರಿಗೂ ಆದರ್ಶಪ್ರಾಯರಾಗಿದ್ದರು. ರಾಜ್‌ಕುಮಾರ್ ಅವರು ಏಪ್ರಿಲ್ 12, 2006 ರಂದು ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ಮನೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು.