ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಇತಿಹಾಸ ಹೊಂದಿರುವ ಈ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ರಂಗಮಂದಿರದ ಕಾಮಗಾರಿ ಪೂರ್ಣಗೊಂಡಿಲ್ಲ. ಮಕ್ಕಳು ಬಿಸಿಲಲ್ಲೇ ಕುಳಿತು ಊಟ ಮಾಡುತ್ತಾರೆ, ಜಿಟಿ ಜಿಟಿ ಮಳೆಯ ನಡುವೆಯೇ ಪ್ರಾರ್ಥನೆ ಮಾಡುತ್ತಾರೆ, ಇನ್ನು ಕಟ್ಟಡ ಬಣ್ಣ ಕಂಡು 20 ವರ್ಷಗಳೇ ಕಳೆದಿದ್ದು, ಈ ಶಾಲೆಗೆ ಹೊಸ ಸ್ಪರ್ಶ ಬೇಕಿದೆ
ದೊಡ್ಡಬಳ್ಳಾಪುರ ಹೃದಯ ಭಾಗದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಜೂನಿಯರ್ ಕಾಲೇಜು) ದುಃಸ್ಥಿತಿ ಇದು. ದೊಡ್ಡಬಳ್ಳಾಪುರ ನಗರದ ಪ್ರಥಮ ಹಾಗೂ ತಾಲೂಕಿನ ಬಹುತೇಕ ಮಂದಿ ವಿದ್ಯಾಭ್ಯಾಸ ಮಾಡಿರುವ ಸಂಸ್ಥೆಯಿದು. ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1927ರಲ್ಲಿ ಸಂಸ್ಥಾನದ ನಾಲ್ಕು ಭಾಗಗಳಲ್ಲಿ ಶಾಲೆಗಳನ್ನು ತೆರೆದರು. ನಾಲ್ಕರಲ್ಲಿ ದೊಡ್ಡಬಳ್ಳಾಪುರ ಜೂನಿಯರ್ ಕಾಲೇಜ್ ಸಹ ಒಂದು.
ಈ ಹಿಂದೆ 2,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿದ ಇತಿಹಾಸ ಇದೆ. ಸದ್ಯ 800 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇತಿಹಾಸ ಹೊಂದಿರುವ ಈ ಕಾಲೇಜಿಗೆ ರಂಗಮಂದಿರ ಮಾತ್ರ ಮರೀಚಿಕೆಯಾಗಿದೆ.
ಇದನ್ನೂ ಓದಿ: 'ಉಕ್ರೇನ್ ಜನ ಆಕ್ರೋಶಗೊಂಡು ಸ್ವತಃ ಗನ್ ಹಿಡಿದು ಹೋರಾಡುತ್ತಿದ್ದಾರೆ'
ಈ ಹಿಂದೆ ಜನಪ್ರತಿನಿಧಿಗಳ 15 ಲಕ್ಷ ರೂ. ಅನುದಾನದಲ್ಲಿ ರಂಗಮಂದಿರಕ್ಕೆ ತಳಪಾಯ ಹಾಕಲಾಗಿತ್ತು. 10 ವರ್ಷ ಕಳೆದರೂ ಕೂಡ ರಂಗಮಂದಿರ ಕಾಮಗಾರಿ ಪೂರ್ಣಗೊಂಡಿಲ್ಲ. ವಿದ್ಯಾರ್ಥಿಗಳು ಓಡಾಡುವ ಜಾಗದಲ್ಲಿ ತಳಪಾಯಕ್ಕೆ ಹಾಕಿರುವ ಕಂಬಿಗಳಿದ್ದು ವಿದ್ಯಾರ್ಥಿಗಳ ಪ್ರಾಣಕ್ಕೆ ಕುತ್ತು ತರುವಂತಿದೆ. ಶಾಲೆಗೆ ಬಣ್ಣ ಬಳಿದು 20 ವರ್ಷಗಳೇ ಆಗಿದೆ. ಶೌಚಾಲಯದ ಸಮಸ್ಯೆಯೂ ಇದೆ. ಸಂಸ್ಕೃತ ಮತ್ತು ಸಮಾಜ ವಿಜ್ಞಾನ ಶಿಕ್ಷಕರ ಕೊರತೆ ಇದೆ. ಇಡೀ ಶಾಲೆಗೆ ಒಬ್ಬರೇ ಡಿ ದರ್ಜೆ ನೌಕರರಿದ್ದು, 6 ಡಿ ದರ್ಜೆ ನೌಕರರ ಅಗತ್ಯ ಇದೆ. ಒಟ್ಟಾರೆ ಈ ಕಟ್ಟಡಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ.