ದೊಡ್ಡಬಳ್ಳಾಪುರ : ನ್ಯಾಯಾಂಗ ಇತಿಹಾಸದಲ್ಲೇ ಪ್ರಥಮ ಬಾರಿಗೆ ಡಿ ದರ್ಜೆ ನೌಕರರೊಬ್ಬರು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಜೊತೆ ನಿಂತು ನೂತನ ನ್ಯಾಯಾಲಯ ಕಟ್ಟಡವನ್ನು ಉದ್ಘಾಟಿಸಿದ್ದು ಎಲ್ಲರ ಹುಬ್ಬೆರುವಂತೆ ಮಾಡಿದೆ.
ನಗರದ ರೊಜಿಪುರದಲ್ಲಿ ಸುಮಾರು 14 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ನ್ಯಾಯಾಲಯ ಸಂಕಿರ್ಣ ಉದ್ಘಾಟನ ಸಮಾರಂಭ ಶುಕ್ರವಾರ ಸಂಜೆ ನೆರೆವೇರಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯದ ಹಿರಿಯ ಡಿ. ದರ್ಜೆ ಸಿಬ್ಬಂದಿ ಜಯಂತಿ ಕುಮಾರಿ, ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾದ ಅಭಯ್ ಶ್ರೀನಿವಾಸ್ ಓಕ್ ಜೊತೆ ನ್ಯಾಯಾಲಯದ ಮುಖ್ಯದ್ವಾರವನ್ನು ಉದ್ಘಾಟಿಸುವ ಮೂಲಕ ಕರ್ನಾಟಕ ನ್ಯಾಯಾಂಗದಲ್ಲಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದಾರೆ.
ಕಳೆದ ಮೂವತ್ತು ವರ್ಷಗಳಿಂದ ಅಟೆಂಡರ್ ಆಗಿ ಕೆಲಸ ಮಾಡುತ್ತಿರುವ ಜಯಂತಿ ಕುಮಾರಿ ಮುಂದಿನ ವರ್ಷ ನಿವೃತ್ತಿಯಾಗಲಿದ್ದು, ಇವರಿಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಜೊತೆ ಕಟ್ಟಡ ಉದ್ಘಾಟಿಸುವ ಭಾಗ್ಯ ಸಿಗುತ್ತೆ ಅನ್ನು ಕನಸೇ ಇರಲಿಲ್ಲವಂತೆ. ಸ್ವತಃ ಮುಖ್ಯ ನ್ಯಾಯಮೂರ್ತಿಗಳೇ ಆಹ್ವಾನಿಸಿ, ಅಭಯ ನೀಡಿ ನನ್ನ ಕೈಯಲ್ಲಿ ಉದ್ಘಾಟನೆ ಮಾಡಿಸಿದ್ರು ಅಂತಾರೆ ಜಯಂತಿ ಕುಮಾರಿಯವರು.
ನೂತನವಾಗಿ ನಿರ್ಮಿತವಾದ ನ್ಯಾಯಾಲಯದಲ್ಲಿ, 4 ನ್ಯಾಯಾಲಯವು ಸೇರಿದಂತೆ ಇನ್ನು 2 ಹೆಚ್ಚುವರಿ ನ್ಯಾಯಾಲಯಗಳು ಆರಂಭವಾಗಲಿದೆ. ವಕೀಲರಿಗೆ ಪ್ರತ್ಯೇಕ ಗ್ರಂಥಾಲಯ, ವಕೀಲರು ವಿಶ್ರಾಂತಿ ಗೃಹ, ಹೈಟೆಕ್ ಶೌಚಾಲಯ ಸೇರಿದಂತೆ ಹಲವು ಸೌಲಭ್ಯಗಳು ನೂತನ ನ್ಯಾಯಾಲಯ ಕಟ್ಟಡದಲ್ಲಿದೆ.