ಬೆಂಗಳೂರು : ಕ್ಯಾನ್ಸರ್ ಇಂದಿಗೂ ಜನ ಸಾಮಾನ್ಯರನ್ನು ಅತಿಯಾಗಿ ಕಾಡುತ್ತಿರುವ ಮಾರಕ ಕಾಯಿಲೆ. ಮಹಿಳೆಯರನ್ನು ಸಾಮಾನ್ಯವಾಗಿ ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್ ಕಾಡುತ್ತದೆ. ಗರ್ಭಕಂಠ ಕ್ಯಾನ್ಸರ್ನಿಂದ ಸಾವನ್ನಪ್ಪುವುದನ್ನು ತಡೆಗಟ್ಟಬಹುದಾ? ಇದು ಹೇಗೆ ದೇಹವನ್ನು ಆಕ್ರಮಿಸುತ್ತದೆ? ಯಾವ ರೀತಿಯ ಚಿಕಿತ್ಸೆ ಲಭ್ಯವಿದೆ? ಎಂಬುದರ ಕುರಿತು ಮೆಡಾಲ್ ಹೆಲ್ತ್ ಕೇರ್ನ ಹಿರಿಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಆರ್.ವಿ. ತೆನ್ಮೋಳಿ ಮಾಹಿತಿ ನೀಡಿದ್ದಾರೆ.
ಸಾಮಾನ್ಯವಾಗಿ ಎಲ್ಲ ಮಹಿಳೆಯರು ಗರ್ಭಕಂಠ ಕ್ಯಾನ್ಸರ್ನ ಅಪಾಯದಲ್ಲಿದ್ದು, 30 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಹೆಚ್ಚಾಗಿ ಕಾಡಲಿದೆ ಅಂತ ತಿಳಿಸಿದ್ದಾರೆ. ಗರ್ಭಕಂಠದ ಕ್ಯಾನ್ಸರ್ ಹ್ಯೂಮನ್ ಪ್ಯಾಪಿಲೋಮಾ ವೈರಸ್ (ಹೆಚ್ಪಿವಿ) ನಿಂದ ಉಂಟಾಗುತ್ತದೆ. ಇದು ಲೈಂಗಿಕ ಸಂಭೋಗದ ಸಮಯದಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಹಾದು ಹೋಗುತ್ತದೆ.
ಹೆಚ್ಪಿವಿ ಸೋಂಕುಗಳು ಎಷ್ಟು ಸಾಮಾನ್ಯವಾಗಿವೆಯೆಂದರೆ, ಲೈಂಗಿಕ ಸಂಭೋಗ ನಡೆಸುವ ಹೆಚ್ಚಿನ ಜನರು ತಮ್ಮ ಜೀವನದ ಒಂದು ಹಂತದಲ್ಲಿ (HPV)ಪಡೆಯುತ್ತಾರೆ. ಹೆಚ್ಚಾಗಿ, ಎಚ್ಪಿವಿ ಹೊಂದಿರುವ ಜನರು ಯಾವುದೇ ರೋಗಲಕ್ಷಣಗಳನ್ನ ಹೊಂದಿದೆ ಚೆನ್ನಾಗಿರುತ್ತಾರೆ. HPV ಸೋಂಕುಗಳು ಹಾನಿಕಾರಕವಲ್ಲ ಮತ್ತು ಅವುಗಳು ತಾವಾಗಿಯೇ ಹೋಗುತ್ತವೆ. ಆದಾಗ್ಯೂ ದೀರ್ಘಕಾಲದ ಸೋಂಕು ಇದ್ದರೆ ಅದು ಗರ್ಭಕಂಠದ ಕ್ಯಾನ್ಸರ್ಗೆ ಕಾರಣವಾಗಬಹುದೆಂದು ತಿಳಿಸಿದ್ದಾರೆ.
ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟಬಹುದಾ? ಕ್ಯಾನ್ಸರ್ ಪೂರ್ವ ಹಂತಗಳಲ್ಲಿ ಅಥವಾ ಕ್ಯಾನ್ಸರ್ನ ಆರಂಭಿಕ ಹಂತದಲ್ಲಿ ಗರ್ಭಕಂಠದ ಕ್ಯಾನ್ಸರ್ ಪತ್ತೆಯಾದಾಗ ಅದಕ್ಕೆ ಚಿಕಿತ್ಸೆ ಮಾಡಬಹುದಾಗಿದೆ. ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು/ಚಿಕಿತ್ಸೆ ನೀಡಲು ಮಾಡಬಹುದಾದ ಎರಡು ಪ್ರಮುಖ ಕೆಲಸಗಳೆಂದರೆ ಹೆಚ್ಪಿವಿ ಲಸಿಕೆಯನ್ನು ಪಡೆಯುವುದು ಮತ್ತು ಆಗಾಗ ಪರೀಕ್ಷಿಸುವುದು.
ಹೆಚ್ಪಿವಿ ಲಸಿಕೆಯು ಸೋಂಕನ್ನು ತಡೆಗಟ್ಟಲು ಸಹಾಯ ಮಾಡಲಿದೆ. ಪಿಎಪಿ ಪರೀಕ್ಷೆಯು ಗರ್ಭಕಂಠದ ಜೀವಕೋಶಗಳಲ್ಲಿ ಕ್ಯಾನ್ಸರ್ ಪೂರ್ವ ಬದಲಾವಣೆಗಳನ್ನು ಕಂಡು ಹಿಡಿಯಲು ಸಹಾಯ ಮಾಡುತ್ತದೆ. ಹೀಗಾಗಿ ಲಸಿಕೆ ಹಾಗೂ ಪರೀಕ್ಷೆ ಪ್ರಮುಖ ಅಸ್ತ್ರವಾಗಿ ಇರಲಿದೆ ಅಂತ ವೈದ್ಯರು ಸಲಹೆ ನೀಡಿದ್ದಾರೆ.
ಹೆಚ್ಪಿವಿ ಲಸಿಕೆ ಯಾವಾಗ ಹಾಕಿಸಿಕೊಳ್ಳಬೇಕು?
- ಹೆಚ್ಪಿವಿ ಲಸಿಕೆಯು ಹೆಚ್ಚಾಗಿ ಗರ್ಭಕಂಠ, ಯೋನಿ ಮತ್ತು ವಲ್ವರ್ ಕ್ಯಾನ್ಸರ್ಗಳಿಗೆ ಕಾರಣವಾಗುವ ಸೋಂಕಿನಿಂದ ರಕ್ಷಿಸುತ್ತದೆ.
- 11 ರಿಂದ 12 ವರ್ಷ ವಯಸ್ಕರಿಗೆ ಹೆಚ್ಪಿವಿ (HPV) ಲಸಿಕೆಯನ್ನು ನೀಡಬಹುದಾಗಿದ್ದು, ಆದಾಗ್ಯೂ 9ನೇ ವಯಸ್ಸಿನಲ್ಲಿ ಪ್ರಾರಂಭಿಸಬಹುದು.
- ಈಗಾಗಲೇ ಹೆಚ್ಪಿವಿ ಲಸಿಕೆಯನ್ನು ಹಾಕದಿದ್ದರೆ, 26ನೇ ವಯಸ್ಸಿನವರೆಗೆ ಪ್ರತಿಯೊಬ್ಬರಿಗೂ ಸೂಚಿಸಲಾಗಿದೆ.
- 26 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಹೆಚ್ಪಿವಿ ಲಸಿಕೆಯನ್ನು ಸೂಚಿಸಲಾಗುವುದಿಲ್ಲ. ಈಗಾಗಲೇ ಚುಚ್ಚುಮದ್ದು ಪಡೆಯದ 27-45 ವರ್ಷಗಳ ನಡುವಿನ ಕೆಲವು ವಯಸ್ಕರು ಹೊಸ ಹೆಚ್ಪಿವಿ ರೋಗಗಳಿಗೆ ಚುಚ್ಚುಮದ್ದುಗಳ ಸಂಭಾವ್ಯ ಅನುಕೂಲಗಳ ಬಗ್ಗೆ ತಮ್ಮ ಪ್ರಾಥಮಿಕ ಆರೈಕೆ ವೈದ್ಯರೊಂದಿಗೆ ಪರೀಕ್ಷಿಸಿಕೊಳ್ಳಲು, ಲಸಿಕೆಯನ್ನು ಪಡೆಯಲು ಆಯ್ಕೆ ಮಾಡಬಹುದು. ಆದಾಗ್ಯೂ, ಅನುಕೂಲಗಳು ಕಡಿಮೆ ಇರಬಹುದು ಎಂದಿದ್ದಾರೆ.
- 15 ವರ್ಷಕ್ಕಿಂತ ಮೊದಲು ಲಸಿಕೆಯನ್ನು ಪಡೆಯಲು ಪ್ರಾರಂಭಿಸಿದರೆ 6 ರಿಂದ 12 ತಿಂಗಳ ಅಂತರದಲ್ಲಿ ಎರಡು ಡೋಸ್ ಲಸಿಕೆ ಪಡೆಯಬೇಕು.
ಸ್ಕ್ರೀನಿಂಗ್ ಪರೀಕ್ಷೆಗಳು ಯಾವಾಗ ಮಾಡಿಸಬೇಕು? ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು 2 ಸ್ಕ್ರೀನಿಂಗ್ ಪರೀಕ್ಷೆಗಳಿವೆ.
1. ಗರ್ಭಕಂಠದ ಮೇಲೆ ಜೀವಕೋಶದ ಬದಲಾವಣೆಗಳನ್ನು ಪತ್ತೆ ಹಚ್ಚುವ ಪ್ಯಾಪ್ ಸ್ಮಿಯರ್ ಪರೀಕ್ಷೆ ಮೊರೆ ಹೋಗಬಹುದು. ಪ್ಯಾಪ್ ಸ್ಮಿಯರ್ ಪರೀಕ್ಷೆಯನ್ನು 21 ನೇ ವಯಸ್ಸಿನಲ್ಲಿ ಮಾಡಬಹುದು ಮತ್ತು ಸಾಮಾನ್ಯವಾಗಿದ್ದರೆ ಅದನ್ನು ಪ್ರತಿ 3 ವರ್ಷಗಳಿಗೊಮ್ಮೆ ಪುನರಾವರ್ತಿಸಬಹುದು.
2. ಹೆಚ್ಪಿವಿ ಪರೀಕ್ಷೆಯು ಈ ಜೀವಕೋಶದ ಬದಲಾವಣೆಗಳಿಗೆ ಕಾರಣವಾಗಬಹುದಾದ ಸೋಂಕನ್ನು ಗ್ರಹಿಸುತ್ತದೆ. ಹೆಚ್ಪಿವಿ ಪರೀಕ್ಷೆಯನ್ನು 25ನೇ ವಯಸ್ಸಿನಲ್ಲಿ ಮಾಡಬಹುದು ಮತ್ತು ಸಾಮಾನ್ಯವಾಗಿದ್ದರೆ ಅದನ್ನು ಪ್ರತಿ 5 ವರ್ಷಗಳಿಗೊಮ್ಮೆ ಪುನರಾವರ್ತಿಸಬಹುದು.
ಇದನ್ನೂ ಓದಿ: ಜಿಲ್ಲಾ - ತಾಲೂಕು ಪಂಚಾಯಿತಿ ಚುನಾವಣೆ ಮುಂದೂಡುವ ಉದ್ದೇಶ ನಮಗಿಲ್ಲ: ಸಚಿವ ಕೆ. ಎಸ್ ಈಶ್ವರಪ್ಪ
30 ರಿಂದ 65 ವರ್ಷ ವಯಸ್ಸಿನವರಾಗಿದ್ದರೆ ರೋಗದ ಆಧಾರದ ಮೇಲೆ ಹೆಚ್ಪಿವಿ, ಪ್ಯಾಪ್ ಪರೀಕ್ಷೆ ಮಾಡಿಸಿಕೊಳ್ಳಬಹುದು. 65ಕ್ಕಿಂತ ದೊಡ್ಡವರಾಗಿದ್ದರೆ ಹಲವಾರು ವರ್ಷಗಳಿಂದ ಸಾಮಾನ್ಯ ಸ್ಕ್ರೀನಿಂಗ್ ಪರೀಕ್ಷೆಗಳನ್ನು ಹೊಂದಿದ್ದರೆ ಅಥವಾ ನಿಮ್ಮ ಗರ್ಭಾಶಯ ಮತ್ತು ಗರ್ಭಕಂಠವನ್ನು ತೆಗೆದು ಹಾಕಿದ್ದರೆ ಸ್ಕ್ರೀನಿಂಗ್ ಅಗತ್ಯವಿಲ್ಲ. ಪರೀಕ್ಷಾ ಫಲಿತಾಂಶದ ಮೇಲೆ ವೈದ್ಯರು ಹೆಚ್ಚಿನ ಪರೀಕ್ಷೆಗಳನ್ನು, ಚಿಕಿತ್ಸೆಗಳನ್ನು ಶಿಫಾರಸು ಮಾಡಬಹುದು.