ಬೆಂಗಳೂರು: ಕೋವಿಡ್-19 ರೋಗದ ವಿರುದ್ಧ ಹೋರಾಡುತ್ತ, ಜನರ ಜೀವ ರಕ್ಷಣೆ ಮಾಡುತ್ತಿದ್ದ ವೈದ್ಯರೊಬ್ಬರು ನಗರದ ಆಸ್ಪತ್ರೆಗಳ ನಿರ್ಲಕ್ಷ್ಯದಿಂದ ಕೊನೆಯುಸಿರೆಳೆದಿದ್ದಾರೆ.
ಸರ್ಕಾರಿ ವೈದ್ಯರಾದ ಡಾ. ಮಂಜುನಾಥ್ (50) ರಾಮನಗರದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅವರು ತೀವ್ರ ಜ್ವರ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಆದ್ರೆ ಕೋವಿಡ್ ಸೋಂಕು ಪರೀಕ್ಷೆಯ ರಿಪೋರ್ಟ್ ಇಲ್ಲದ ಕಾರಣ ನಗರದ ಮೂರು ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸಿವೆ. ಚಿಕಿತ್ಸೆ ಸಿಗದ ಕಾರಣ ವೈದ್ಯರು ಇಂದು ಮೃತಪಟ್ಟಿದ್ದಾರೆ.
ಡಾ. ಮಂಜುನಾಥ್, ಜೂನ್ ತಿಂಗಳ ಅಂತ್ಯದಲ್ಲಿ ಬೆಂಗಳೂರು ನಗರದ ಮೂರು ಆಸ್ಪತ್ರೆಗಳಿಗೆ ಹೋಗಿದ್ದಾರೆ. ಆದ್ರೆ ಈ ಮೂರೂ ಕಡೆಯೂ ಕೋವಿಡ್ ರಿಪೋರ್ಟ್ ಇಲ್ಲದ ಕಾರಣ ದಾಖಲಿಸಿಕೊಂಡಿಲ್ಲ. ಅಲ್ಲದೆ, ಅವರ ತಂಗಿಯ ಪತಿ ನಾಗೇಂದ್ರ, ಬಿಬಿಎಂಪಿಯ ವೈದ್ಯರಾಗಿದ್ದು, ಅವರಿಗೆ ಬೆಡ್ ಒದಗಿಸುವ ಜವಾಬ್ದಾರಿ ಇದ್ರೂ ಕೂಡಾ ಅವರ ಕಟುಂಬದ ಸದಸ್ಯರಿಗೆ ಸಹಾಯ ಮಾಡಲು ಸಾಧ್ಯವಾಗಿಲ್ಲ.
ನಾಗೇಂದ್ರ ಅವರ ತಂದೆ, ತಾಯಿಯೂ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ತಾಯಿ ಇಂದು ಸಂಜೆ ಮೃತಪಟ್ಟಿದ್ದಾರೆ. ಪತ್ನಿ ಹಾಗೂ ಮಗ ಕೋವಿಡ್ ನಿಂದ ಚೇತರಿಸಿಕೊಂಡಿದ್ದಾರೆ. ವೈದ್ಯರಾಗಿದ್ದ ಕಾರಣ ಕೋವಿಡ್ ಇಡೀ ಕುಟುಂಬಕ್ಕೆ ಹರಡಿದೆ.
ಕಡೆಗೂ ಆಸ್ಪತ್ರೆ ಮುಂದೆ ಅವರ ಕುಟುಂಬಸ್ಥರು ಧರಣಿ ಕುಳಿತ ಕಾರಣ, ಜೂನ್ 25 ಕ್ಕೆ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿಕೊಳ್ಳಲಾಗಿದೆ. ಇವರಿಗೆ ವೆಂಟಿಲೇಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಳಿಕ ಬೆಂಗಳೂರು ಮೆಡಿಕಲ್ ಕಾಲೇಜು ಹಾಗೂ ರಿಸರ್ಚ್ ಸೆಂಟರ್ಗೆ ದಾಖಲಿಸಿದ್ದು, ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಆದ್ರೆ ಆಸ್ಪತ್ರೆ ಪ್ರಕಾರ, ಅವರು ಜುಲೈ 9 ರಂದೇ ಪ್ಲಾಸ್ಮ ತೆರಪಿಗಾಗಿ ಡಿಸ್ಚಾರ್ಜ್ ಆಗಿದ್ದಾರೆ.
ನಗರದಲ್ಲಿನ ಖಾಸಗಿ ಆಸ್ಪತ್ರೆಗಳು ಕೋವಿಡ್ ರಿಪೋರ್ಟ್ ಇಲ್ಲ ಎಂಬ ಕಾರಣಕ್ಕೆ ಚಿಕಿತ್ಸೆ ನೀಡದೆ ರೋರಿಗಳನ್ನು ವಾಪಸ್ ಕಳಿಸುತ್ತಿವೆ. ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷಾಧಿಕಾರಿ ರಂದೀಪ್ ಮಾತನಾಡಿ, ಕೋವಿಡ್ ರಿಪೋರ್ಟ್ ಇಲ್ಲದೇ ಇದ್ದರೂ ಆಸ್ಪತ್ರೆಗಳು ದಾಖಲಿಸಿಕೊಂಡು ಚಿಕಿತ್ಸೆ ನೀಡಬೇಕು. ಬೇಜವಾಬ್ದಾರಿ ತೋರಿದ ಆಸ್ಪತ್ರೆಗಳಿಗೆ ನೋಟಿಸು ನೀಡಲಾಗಿದೆ ಎಂದರು.