ಬೆಂಗಳೂರು: ಒಬಿಸಿ ಮೀಸಲಾತಿಯನ್ನು ಕೂಡಲೇ ಜಾರಿ ಮಾಡಬೇಕು. ಪಂಚಮಸಾಲಿ ಜನಾಂಗವನ್ನು 2-ಎಗೆ ಯಾವುದೇ ಕಾರಣಕ್ಕೂ ಸೇರಿಸಬಾರದು ಎಂದು ಬೆಳಗಾವಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಕರ್ನಾಟಕ ರಾಜ್ಯ ಕಾಯಕ ಸಮಾಜಗಳ ಒಕ್ಕೂಟ ಮನವಿ ಸಲ್ಲಿಸಿದೆ.
ಶನಿವಾರ ಪ್ರೆಸ್ ಕ್ಲಬ್ನಲ್ಲಿ ನೆಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಸಿ ಪುಟ್ಟ ಸಿದ್ದಶೆಟ್ಟಿ, ಈಗ ನಾವು ಸಂವಿಧಾನದ ಆರ್ಟಿಕಲ್ 15(4) ಮತ್ತು 16 (4) ರ ಅಡಿಯಲ್ಲಿ ಶಿಕ್ಷಣ ಮತ್ತು ಉದ್ಯೋಗಕ್ಕೆ ಶೇ 15ರಷ್ಟು ಮೀಸಲಾತಿ ಪಡೆಯುತ್ತಿದ್ದೇವೆ. ನಮ್ಮಲ್ಲಿ ಯಾರಿಗೂ ಭೂ ಒಡತನವಿಲ್ಲ. ಕುಲಕಸುಬು ಆಧಾರಿತ ಜೀವನ ನಡೆಸುತ್ತಿದ್ದೇವೆ. ಪಂಚಮಸಾಲಿಗಳು ಬೃಹತ್ ಉದ್ಯಮಿಗಳು, ಭೂ ಒಡೆಯವರು ಶ್ರೀಮಂತರು ಮತ್ತು ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಿಂಹಪಾಲು ಪಡೆದಿದ್ದಾರೆ. ಇವರು 2-ಎ ಗೆ ತಮ್ಮನ್ನು ಸೇರಿಸಬೇಕೆಂಬ ವಾದವನ್ನು ನಾವು ಖಂಡಿಸುತ್ತೇವೆ ಎಂದರು.
ಮೀಸಲಾತಿ ಸಂರಕ್ಷಣೆಗಾಗಿ ಪ್ರತಿ ಚಳವಳಿಯನ್ನು ನಡೆಸಲಾಗುತ್ತಿದೆ. ಅದು ಗುರುವಾರ ಕುಂದಾನಗರಿ ಬೆಳಗಾವಿಗೆ ತಲುಪಿದ್ದು, ಅಲ್ಲಿನ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ. ತಳಸಮುದಾಯಗಳನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ನೀಡಲಾದ ಮೀಸಲಾತಿಯನ್ನು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಉದ್ದೇಶವನ್ನು ಬದಲಿಸಲಾಗುತ್ತದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸವಿತಾ ಸಮಾಜ ಮುಖಂಡ ನಾಗೇಶ್, ರವಿ ನಾಯ್ಡು, ಗಾಣಿಗ ಸಮಾಜ ಮುಖಂಡ ವೇಣು ಗೋಪಾಲ, ಶಿವಕುಮಾರ್ ಚೌಡ ಶೆಟ್ಟಿ, ಬಳಜಿ ಸಮುದಾಯ ಮುಖಂಡ ವೆಂಕಟೇಶ್, ಬಸಪ್ಪ ಉಪಸ್ಥಿತರಿದ್ದರು.
ಇದನ್ನೂ ಓದಿ: ಸಂತ್ರಸ್ತ ವಿದ್ಯಾರ್ಥಿನಿಯ ವೈದ್ಯಕೀಯ ಚಿಕಿತ್ಸಾ ವೆಚ್ಚ ಭರಿಸಿ: ರ‍್ಯಾಗಿಂಗ್ ಆರೋಪಿಗಳಿಗೆ ಹೈಕೋರ್ಟ್ ಆದೇಶ