ಬೆಂಗಳೂರು: ವೈದ್ಯಕೀಯ ಸಲಕರಣೆಗಳ ಖರೀದಿಗೆ ರಾಜ್ಯ ಸರ್ಕಾರ 4 ಸಾವಿರ ಕೋಟಿ ರೂಪಾಯಿ ಬಳಸಿದ್ದು, ಇದರಲ್ಲಿ 2 ಸಾವಿರ ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪವನ್ನು ಕಾಂಗ್ರೆಸ್ ಬೆಂಬಲಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಡಿಕೆಶಿ ''ಹೆಣದ ಮೇಲೆ ಹಣ ಮಾಡಲು ನೀವು ಹೊರಟಿದ್ದೀರಿ. ಅದನ್ನು ನೋಡಿ ನಾವು ಸುಮ್ಮನಿರಬೇಕೇ ಮುಖ್ಯಮಂತ್ರಿಗಳೇ?, 9 ಸಚಿವರನ್ನು ಉಸ್ತುವಾರಿಯಾಗಿ ಬೆಂಗಳೂರಿನಲ್ಲಿ ನೇಮಿಸಿದ್ದೀರಿ, ಅದರಲ್ಲೂ ಒಬ್ಬ ಸಚಿವರೂ ಆಸ್ಪತ್ರೆಗೆ ಭೇಟಿ ನೀಡಿಲ್ಲ. ಜನರ ಜೀವ ರಾಜ್ಯದ ಆಸ್ತಿ. ಜನರಿಗೆ ಸೋಂಕಿನ ಜತೆ ಭ್ರಷ್ಟಾಚಾರದ ಸೋಂಕು ಹಚ್ಚಿದ್ದೀರಿ. ಈಗ ಸಹಕಾರ ಕೊಡಿ ಎನ್ನುತ್ತೀರಿ. ಅದು ಹೇಗೆ ಸಾಧ್ಯ.?'' ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.
''ಸರ್ಕಾರದ ಸಚಿವರು ಜನರಿಂದ ಲೂಟಿಗೆ ಹೊರಟಿದ್ದರು. ನಾವು ಗಲಾಟೆ ಮಾಡಿ ನಿಲ್ಲಿಸಿದೆವು. ಈಗ ಸಹಕಾರ ಕೇಳುತ್ತಿದ್ದೀರಿ. ಸರ್ಕಾರದ ಕಿಟ್ ಮೇಲೆ ನಿಮ್ಮ ನಾಯಕರು ಫೋಟೋ ಅಂಟಿಸಿಕೊಟ್ಟರು. ಅವರ ವಿರುದ್ಧ ಕೇಸು ದಾಖಲಿಸಲಿಲ್ಲ. ಜನರ ಹಣ ಲೂಟಿ ಮಾಡಿದ್ದು, ಬಿಟ್ಟರೆ ಬೇರೇನೂ ಮಾಡಿಲ್ಲ. ಜನರ ಊಟಕ್ಕೆ 1,200 ರೂಪಾಯಿ ಖರ್ಚು ಎಂದಿದ್ದೀರಿ. ಸ್ಟಾರ್ ಹೋಟೆಲ್ನಿಂದ ತರಿಸಿದ್ರಾ?'' ಎಂದು ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
''ಲಾಕ್ಡೌನ್ ವೇಳೆ ಶ್ರಮಿಕ ವರ್ಗದವರಿಗೆ 10 ಸಾವಿರ ಕೊಡಿ ಎಂದು ನಾವು ಒತ್ತಾಯಿಸಿದ್ದೆವು. ಆದ್ರೆ ಸರ್ಕಾರದಿಂದ 5 ಸಾವಿರ ರೂಪಾಯಿ ಘೋಷಣೆಯಾಯ್ತು. ಈಗ ಶೇಕಡಾ 90ರಷ್ಟು ಫಲಾನುಭವಿಗಳಿಗೆ ಹಣ ತಲುಪಿಲ್ಲ. ಆಶಾ ಕಾರ್ಯಕರ್ತೆಯರಿಗೆ ಸೌಲಭ್ಯಗಳನ್ನು ನೀಡಿಲ್ಲ. ರಾಜ್ಯದಲ್ಲಿ ಲಾಕ್ಡೌನ್ ಸಂಪೂರ್ಣ ವಿಫಲವಾಗಿದೆ''
''ಲಾಕ್ಡೌನ್ ಮಾಡಿ 121 ದಿನ ಕಳೆದರೂ ಕೂಡಾ ಕೊರೊನಾ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ನಿಮ್ಮನ್ನು ಕಲಿಯುಗದ ಕೌರವರು ಅಂತ ಕರೆಯೋಣವಾ? ನುಡಿದಂತೆ ನಡೆಯಲು ಏನಾಗಿದೆ. ಹೆಣದಲ್ಲೂ ಹಣ ಮಾಡಲು ಹೊರಟ ರಾಜ್ಯ ಸರ್ಕಾರ ದೇಶಕ್ಕೇ ಕಪ್ಪುಚುಕ್ಕೆಯಾಗಿದೆ. ಇದನ್ನು ತೊಳೆಯಲು ಇನ್ನಷ್ಟು ವರ್ಷ ಬೇಕು. ನಿಮ್ಮ ಪಕ್ಷದವರೇ ಸರ್ಕಾರದ ಕಾರ್ಯದಿಂದ ಬೇಸರಕ್ಕೆ ಒಳಗಾಗಿದ್ದಾರೆ'' ಎಂದು ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.