ಬೆಂಗಳೂರು: ಬೆಳಗಾವಿಯಲ್ಲಿ ಕಾಂಗ್ರೆಸ್ ಬಲ ಹೆಚ್ಚಿಸಲು ಹಾಗೂ ಲೋಕಸಭೆ ಉಪಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಳೆದಿರುವ ನಿಲುವು, ಕೈಗೊಳ್ಳುತ್ತಿರುವ ತೀರ್ಮಾನವು ಬಿಜೆಪಿ ಹಾಗೂ ಜೆಡಿಎಸ್ ನಾಯಕರ ನಿದ್ದೆಗೆಡಿಸಿದೆ.
ಒಂದು ಕಡೆ ಬೆಳಗಾವಿ ಜಿಲ್ಲೆಯಾದ್ಯಂತ ಸಂಚರಿಸುತ್ತಾ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುತ್ತಿರುವ ಶಿವಕುಮಾರ್, ಇದರ ಜತೆ-ಜತೆಗೆ ಅನ್ಯ ಪಕ್ಷದ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಹಾಗೂ ಹಲವು ತಟಸ್ಥ ನಾಯಕರನ್ನು ಭೇಟಿ ಮಾಡಿ ಪಕ್ಷಕ್ಕೆ ಬೆಂಬಲಿಸುವಂತೆ ಮನವೊಲಿಸುವ ಮೂಲಕ ಉಳಿದ ಪಕ್ಷಗಳಿಗೆ ಆತಂಕ ಮೂಡಿಸುತ್ತಿದ್ದಾರೆ.
ಕಳೆದ ಎರಡು ದಿನದಿಂದ ಬೆಳಗಾವಿಯಲ್ಲಿ ಬೀಡುಬಿಟ್ಟಿರುವ ಡಿಕೆಶಿ, ಹಲವು ನಾಯಕರನ್ನು ಪಕ್ಷಕ್ಕೆ ಸೆಳೆದಿದ್ದಾರೆ. ಜೊತೆಗೆ ತಟಸ್ಥವಾಗಿರುವ ಕೆಲ ರಾಜಕೀಯ ನಾಯಕರನ್ನು ಮತ್ತೆ ರಾಜಕೀಯ ಅಖಾಡಕ್ಕೆ ತರುವ ಪ್ರಯತ್ನ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷರಾಗಿ ಅವರ ಪ್ರಯತ್ನ ಮೊದಲ ಗೆಲುವಿನದ್ದಾಗಿದೆ. ಅದರ ಜೊತೆ ಹಠಕ್ಕೆ ಬಿದ್ದು ಸತೀಶ್ ಜಾರಕಿಹೊಳಿ ಅವರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಗೆದ್ದು ಬೆಳಗಾವಿಯಲ್ಲಿ ತಮ್ಮ ಪ್ರಾಬಲ್ಯ ಪ್ರದರ್ಶಿಸುವ ಗುರಿ ಹೊಂದಿದ್ದಾರೆ. ಬೆಳಗಾವಿಗೆ ಬಂದು ಗೆಲ್ಲಲಿ ಎಂದು ರಮೇಶ್ ಜಾರಕಿಹೊಳಿ ಹಾಕಿರುವ ಸವಾಲಿಗೆ ಉತ್ತರ ನೀಡುವ ಯತ್ನವನ್ನು ಡಿಕೆಶಿ ಮಾಡಿದ್ದಾರೆ.
ಸಾಲು-ಸಾಲು ಸೇರ್ಪಡೆ: ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಬುಧವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಜೆಡಿಎಸ್ ಜಿಲ್ಲಾಧ್ಯಕ್ಷ ತೀರ್ಥಹಳ್ಳಿಯ ಮಂಜುನಾಥಗೌಡ ಅವರು ತಮ್ಮ ಬೆಂಬಲಿಗರ ಜೊತೆ ಡಿಕೆಶಿ ಸಮ್ಮುಖದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾದರು. ಇದಾದ ಬಳಿಕ ಬೆಳಗಾವಿ ಮತ್ತು ಬಾಗಲಕೋಟೆಯ ಅನ್ಯಪಕ್ಷಗಳ ಮಹಿಳಾ ಮುಖಂಡರು ತಮ್ಮ ಬೆಂಬಲಿಗರ ಜೊತೆ ಡಿ.ಕೆ.ಶಿವಕುಮಾರ್ ಹಾಗೂ ವೀಣಾ ಕಾಶಪ್ಪನವರ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಈ ಮೂಲಕ ಕಾಂಗ್ರೆಸ್ ಪ್ರಾಭಲ್ಯ ಹೆಚ್ಚಿಸುವ ನಿಟ್ಟಿನಲ್ಲಿ ಡಿಕೆಶಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.
ಮಾಜಿ ಸಚಿವರ ಭೇಟಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬೆಳಗಾವಿಯ ಚಿಕ್ಕಬಾಗೇವಾಡಿಯಲ್ಲಿ ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ರೈತ ನಾಯಕ ಬಾಬಾಗೌಡ ಪಾಟೀಲ್ ಅವರ ನಿವಾಸಕ್ಕೆ ಭೇಟಿ ನೀಡಿ, ಮಾತುಕತೆ ನಡೆಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಿಜೆಪಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಬಾಬಾಗೌಡ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಪ್ರಭಾವಿ ರಾಜಕೀಯ ನಾಯಕರಾಗಿರುವ ಹಿನ್ನೆಲೆ, ಇವರನ್ನು ಭೇಟಿಯಾಗಿ ಡಿಕೆಶಿ ಚರ್ಚಿಸಿದ್ದಾರೆ. ಕಾಂಗ್ರೆಸ್ ಪರ ಪ್ರಚಾರಕ್ಕೆ ಇಳಿಯಲು ಬಾಬಾಗೌಡ ಬಹುತೇಕ ಒಪ್ಪಿದ್ದು, ಒಂದೆರಡು ದಿನದಲ್ಲಿ ನಿರ್ಧಾರ ತಿಳಿಸುವುದಾಗಿ ಭರವಸೆ ಕೊಟ್ಟಿದ್ದಾರೆ.
1989ರಲ್ಲಿ ಧಾರವಾಡ ಗ್ರಾಮೀಣ ಹಾಗೂ ಬೆಳಗಾವಿ ಜಿಲ್ಲೆಯ ಕಿತ್ತೂರು ವಿಧಾನಸಭೆ ಕ್ಷೇತ್ರಗಳಲ್ಲಿ ನಡೆದ ಚುನಾವಣೆಯಲ್ಲಿ ರೈತ ಸಂಘದಿಂದ ಸ್ಪರ್ಧಿಸಿ, ಎರಡೂ ಕಡೆ ಏಕಕಾಲಕ್ಕೆ ಗೆಲವು ಸಾಧಿಸಿದ್ದರು. 1998ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬೆಳಗಾವಿ ಕ್ಷೇತ್ರದಿಂದ ಲೋಕಸಭೆ ಪ್ರವೇಶಿಸಿದರು. ಮೊದಲ ಆಯ್ಕೆಯಲ್ಲಿಯೇ ವಾಜಪೇಯಿ ಸಂಪುಟದಲ್ಲಿ ಸ್ಥಾನ ಪಡೆದು ಗ್ರಾಮೀಣಾಭಿವದ್ಧಿ ಖಾತೆ ಜವಾಬ್ದಾರಿ ವಹಿಸಿಕೊಂಡಿದ್ದರು. ಇದೀಗ ಬಿಜೆಪಿಗೆ ಸೆಡ್ಡು ಹೊಡೆಯಲು ಮುಂದಾಗಿರುವ ಕಾಂಗ್ರೆಸ್ ಹಿಂದೆ ಬಿಜೆಪಿಯಲ್ಲಿ ಸಚಿವರಾಗಿದ್ದ ನಾಯಕರನ್ನೇ ಕಾಂಗ್ರೆಸ್ ಹೈಜಾಕ್ ಮಾಡಿದೆ. ಕಡೆಯ ಕ್ಷಣದಲ್ಲಿ ಬಿಜೆಪಿಗೆ ತಲೆಬಿಸಿ ಉಂಟು ಮಾಡುವ ಮಹತ್ವದ ನಡೆ ಡಿಕೆಶಿ ಕೈಗೊಂಡಿದ್ದಾರೆ.
ಓದಿ:ನಾವು ಜಾತಿ ಮೇಲಲ್ಲ, ನೀತಿ ಮೇಲೆ ರಾಜಕಾರಣ ಮಾಡ್ತಿದ್ದೇವೆ: ಡಿಕೆಶಿ