ಬೆಂಗಳೂರು: ಆರ್.ಆರ್. ನಗರದಲ್ಲಿ ಒಕ್ಕಲಿಗರ ಸಂಘ ಸಂಸ್ಥೆಗಳ ಒಕ್ಕೂಟದ ಸಭೆಯಲ್ಲಿ ಕಾಂಗ್ರೆಸ್ ನಾಯಕರು ಸಿಎಂ ಸ್ಥಾನಕ್ಕಾಗಿ ಡಿ.ಕೆ. ಶಿವಕುಮಾರ್ ಪರ ಬ್ಯಾಟಿಂಗ್ ಮಾಡಿದರು.
ಈ ವೇಳೆ ಮಾತನಾಡಿದ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್, ಬೇರೆ ಜಾತಿಯಲ್ಲಿರುವ ಒಗ್ಗಟ್ಟು ನಮ್ಮ ಜಾತಿಯಲ್ಲಿ ಇಲ್ಲ. ಇದನ್ನು ಯಾರು ಬಹಿರಂಗವಾಗಿ ಹೇಳುವುದಕ್ಕೆ ಸಾಧ್ಯವಾಗ್ತಿಲ್ಲ. ನಮ್ಮದು ದೊಡ್ಡ ಸಮುದಾಯ ಆದರೂ ಸರಿಯಾಗಿ ಸಂಘಟನೆಯಾಗಿಲ್ಲ. ನಮ್ಮ ಸಮುದಾಯದ ನಾಯಕರು ಮೂರೂ ಪಕ್ಷದಳಲ್ಲಿದ್ದಾರೆ. ಡಿ.ಕೆ. ಶಿವಕುಮಾರ್ ಮುಂದೆ ಮುಖ್ಯಮಂತ್ರಿಯಾಗುತ್ತಾರೆ ಎಂಬ ವಾತಾವರಣ ಈಗ ಇದೆ. ನಾವೆಲ್ಲರೂ ಅವರ ಪರವಾಗಿ ನಿಲ್ಲಬೇಕು ಎಂದು ಕರೆ ನೀಡಿದರು.
ಮೂರು ಪಕ್ಷಗಳಲ್ಲಿನ ಒಕ್ಕಲಿಗ ನಾಯಕರು ಸಾಂಪ್ರದಾಯಿಕ ವೈರಿಗಳಾಗಿದ್ದಾರೆ. ಬೇರೆ ಸಮುದಾಯದವರೂ ಬೇರೆ ಪಕ್ಷದಲ್ಲಿದ್ದರೂ ಸಿಎಂ, ಸಚಿವರಾಗುತ್ತಾರೆ ಅಂದ್ರೆ ಎಲ್ಲರೂ ಒಗ್ಗಟ್ಟು ಪ್ರದರ್ಶಿಸುತ್ತಾರೆ. ಆದರೆ, ನಮ್ಮ ಸಮುದಾಯದಲ್ಲಿ ಈ ಬೆಳವಣಿಗೆ ಇಲ್ಲ. ಒಕ್ಕಲಿಗ ಸಮುದಾಯಕ್ಕೆ ಸ್ವಾಭಿಮಾನ ಇಲ್ವಾ?. ಬೇರೆ ಪಕ್ಷದ ನಾಯಕರಿಗೆ ಅವಕಾಶ ಸಿಕ್ಕಿದ್ರೆ, ನಾವೆಲ್ಲರೂ ಅವರ ಪರವಾಗಿ ನಿಲ್ಲೋಣ. ಆರ್.ಆರ್. ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಒಕ್ಕಲಿಗರು ಸ್ಪರ್ಧಿಸಿದ್ದಾರೆ. ಯಾರನ್ನು ಗೆಲ್ಲಿಸಿದ್ರೆ ನಮ್ಮ ಸಮುದಾಯಕ್ಕೆ ಅನುಕೂಲ ಆಗುತ್ತೆ ಅನ್ನೋದು ನೆನಪಿರಲಿ. ಡಿ.ಕೆ. ಶಿವಕುಮಾರ್ ಮುಳ್ಳಿನ ಹಾಸಿಗೆ ಮೇಲೆ ನಿಂತಿದ್ದಾರೆ. ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಅಧ್ಯಕ್ಷರಾದವರೂ ಮುಖ್ಯಮಂತ್ರಿಯಾಗುವ ವಾಡಿಕೆ ಇದೆ. ಈಗ ನಮ್ಮ ಸಮುದಾಯಕ್ಕೆ ಅವಕಾಶ ಬಂದಿದೆ. ಅದನ್ನು ನಾವು ಬಳಸಿಕೊಳ್ಳಬೇಕು ಎಂದರು.
20 ವರ್ಷ ಆಗಿತ್ತು ನಮ್ಮ ಸಮುದಾಯದ ನಾಯಕ ಕೆಪಿಸಿಸಿ ಅಧ್ಯಕ್ಷರಾಗಲು. ಮತ್ತೆ ಅವಕಾಶ ಸಿಗೋದು 15 ವರ್ಷ ಆಗುತ್ತೋ, 20 ವರ್ಷ ಆಗುತ್ತೋ ಗೊತ್ತಿಲ್ಲ. ಆರ್.ಆರ್. ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಗೆಲ್ಲಬೇಕು. ಕುಸುಮಾ ಗೆದ್ದರೆ ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ಗೆಲ್ಲುತ್ತಾರೆ. ನಮ್ಮ ಇಡೀ ಸಮುದಾಯಕ್ಕೆ ಉತ್ತಮ ಸಂದೇಶ ಹೋಗಬೇಕಿದೆ ಎಂದು ಚಂದ್ರಶೇಖರ್ ಹೇಳಿದರು.
ಇದೇ ವೇಳೆ ಮಾತನಾಡಿದ ಆರ್.ಆರ್. ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ತಂದೆ ಹನುಮಂತರಾಯಪ್ಪ, ಬಿಜೆಪಿಯಲ್ಲಿ ಮುನಿರಾಜುಗೌಡಗೆ ಟಿಕೆಟ್ ನೀಡಿದ್ರೆ ಈ ಸಭೆ ನಡೆಯುತ್ತಿರಲಿಲ್ಲ. ನಮ್ಮ ಸಮುದಾಯದವರೇ ಮೂರು ಜನ ನಿಂತಿದ್ರೆ, ಯಾರು ಬೇಕಾದರೂ ಗೆಲ್ಲಲಿ ಅಂತ ಸುಮ್ನೆ ಆಗುತ್ತಿದ್ದೆವು. ನಮ್ಮ ಸಮಾಜದವರು ಯಾರು ಬೇಕಾದರೂ ಗೆಲ್ಲಲಿ ಅಂತ ಸುಮ್ಮನೆ ಆಗುತ್ತಿದ್ದೆ. ಆದರೆ, ಬಿಜೆಪಿಯಲ್ಲಿ ಮುನಿರತ್ನ ನಾಯ್ಡುಗೆ ಟಿಕೆಟ್ ಕೊಟ್ಟಿದ್ದಾರೆ. ನನ್ನ ಮಗಳನ್ನು ನಮ್ಮ ಸಮುದಾಯ ಗೆಲ್ಲಿಸಿಕೊಂಡು ಬರಬೇಕು ಎಂದು ಮನವಿ ಮಾಡಿದರು.
ನನ್ನ ಮಗಳ ಬಾಳಲ್ಲಿ ಸಣ್ಣ ವಯಸ್ಸಿನಲ್ಲೇ ನಡೆಯಬಾರದ್ದು ನಡೆದುಹೋಗಿದೆ. ಇಲ್ಲಿ ಎಲ್ಲರಿಂದ ಅವಮಾನ, ನಿಂದನೆಯಿಂದ ವಿದೇಶಕ್ಕೆ ಹೋಗಿ ಉನ್ನತ ವ್ಯಾಸಂಗ ಮಾಡಿದ್ದಳು. ಈಗ ನನ್ನ ಮಗಳು ಆರ್.ಆರ್. ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾಳೆ. ಮುಂದೆ ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕಾದ್ರೆ ಎರಡು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಬೇಕು. ಈ ಸಲವಾದರೂ ನಮ್ಮ ಸಮುದಾಯದವರು ಒಗ್ಗಟ್ಟಾಗಬೇಕು ಎಂದರು.