ಬೆಂಗಳೂರು: ಇತ್ತೀಚೆಗೆ ನಡೆದ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿಗಳ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಭೆ ನಡೆಸಿದ್ದಾರೆ.
ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸಭೆ ಆರಂಭವಾಗಿದೆ. ಇದೇ ಮೊದಲ ಬಾರಿಗೆ ಯುವ ಕಾಂಗ್ರೆಸ್ ನಾಯಕರ ಜೊತೆ ಡಿಕೆಶಿ ಸಭೆ ನಡೆಸುತ್ತಿದ್ದಾರೆ. ಸಭೆಯಲ್ಲಿ, ಸಾಕಷ್ಟು ಗೊಂದಲದ ನಂತರ ಅಂತಿಮವಾಗಿ ಆಯ್ಕೆಯಾದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ - ಉಪಾಧ್ಯಕ್ಷ ಹಾಗೂ ಜಿಲ್ಲಾ ತಾಲೂಕು ಮಟ್ಟದ ಅಧ್ಯಕ್ಷರು ಉಪಾಧ್ಯಕ್ಷರು ಭಾಗಿಯಾಗಿದ್ದಾರೆ. ಜೊತೆಗೆ ಅತಿಹೆಚ್ಚು ಮತ ಪಡೆದರೂ ಸಹ ಯುವ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಿಂದ ಅನರ್ಹಗೊಂಡಿರುವ ಮಹಮದ್ ನಲಪಾಡ್ ಹ್ಯಾರಿಸ್ ಸಹ ಸಭೆಯಲ್ಲಿ ಭಾಗಿಯಾಗಿದ್ದಾರೆ.
ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳು ತಮ್ಮನ್ನು ತಾವು ಪರಿಚಯಿಸಿಕೊಂಡರು. ನಂತರ ಡಿ.ಕೆ. ಶಿವಕುಮಾರ್ ಮಾತನಾಡಿ, ಪಕ್ಷ ಸಂಘಟನೆಯಲ್ಲಿ ಯುವ ಕಾಂಗ್ರೆಸ್ ನಾಯಕರ ಪಾತ್ರ ಏನು ಎಂಬ ವಿವರ ನೀಡಿದರು. ಮುಂಬರುವ ದಿನಗಳಲ್ಲಿ ಪಕ್ಷ ಸಂಘಟನೆಗೆ ತಾವೆಲ್ಲರೂ ಹೆಚ್ಚಿನ ಶ್ರಮ ತೊಡಗಿಸುವಂತೆ ಸೂಚನೆ ನೀಡಿದರು. ಯುವ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯ ಗೊಂದಲಗಳು ಬಗೆಹರಿದಿದ್ದು, ಮುಂಬರುವ ದಿನಗಳಲ್ಲಿ ಸಂಘಟನೆಯತ್ತ ಗಮನಹರಿಸಿ ಎಂದು ಹೇಳಿದರು.
ಸಭೆಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ, ಉಪಾಧ್ಯಕ್ಷ ಮಂಜುನಾಥ್ ಗೌಡ, ಮಿಥುನ್ ರೈ, ನಲ್ಪಾಡ್ ಹ್ಯಾರಿಸ್, ಮುಕುಂದ್ ರಾಜ್ ಸೇರಿದಂತೆ ರಾಜ್ಯದ ಎಲ್ಲ ನೂತನ ಚುನಾಯಿತ ಯುವ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.