ಬೆಂಗಳೂರು: ತಮ್ಮ ಗಮನಕ್ಕೆ ಬಾರದೆ ಪಕ್ಷದ ಯಾವುದೇ ಸಮಿತಿಗೆ ಹೊಸ ಸದಸ್ಯರು, ಪದಾಧಿಕಾರಿಗಳನ್ನು ನೇಮಿಸಿದರೆ ಅಂತವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಎಚ್ಚರಿಸಿದ್ದಾರೆ.
ಈ ಸಂಬಂಧ ಇಂದು ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು, ಪಕ್ಷದ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಮನವಿ ಎಂದು ಹೇಳುವ ಮೂಲಕ ತಮ್ಮ ಸಂದೇಶ ಬಿಡುಗಡೆ ಮಾಡಿರುವ ಅವರು, ಯಾರೂ ಕೂಡ ಗೊಂದಲ ಮಾಡಿಕೊಳ್ಳುವುದು ಬೇಡ. ಈಗಿರುವ ರಾಜ್ಯಮಟ್ಟ ಹಾಗೂ ಬ್ಲಾಕ್‌ಮಟ್ಟದ ಎಲ್ಲಾ ಸಮಿತಿಗಳು ಕೂಡ ಚುನಾವಣೆಯಲ್ಲಿ ಆಯ್ಕೆಯಾದ ಸಮಿತಿಗಳು, ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತಾರದೇ ಯಾವುದೇ ಬದಲಾವಣೆ ತರದಿರಲು ನಾನು ನಿರ್ಧರಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಮೊದಲು ಪಕ್ಷದಲ್ಲಿ ಒಗ್ಗಟ್ಟನ್ನು ಮೂಡಿಸುವುದು, ಬೂತ್ ಕಮಿಟಿ ರಚಿಸಬೇಕು. ಆ ಕೆಲಸದಲ್ಲಿ ನಾವು ಮುಂದೆ ಹೆಜ್ಜೆ ಇಡಬೇಕಿದೆ. ಕೋವಿಡ್ ವಿಚಾರದಲ್ಲಿ ಜನರಿಗೆ ಸಹಾಯ ಮಾಡುವ ಕಾರ್ಯಕ್ರಮ ರೂಪಿಸುವ ಕಾರ್ಯ ಮಾಡುತ್ತಿದ್ದೇವೆ. ಆದ್ದರಿಂದ ಹೊಸ ಬದಲಾವಣೆ, ಹೊಸಬರ ನೇಮಕ, ತೆಗೆಯುವ ಯೋಚನೆ ಸದ್ಯಕ್ಕೆ ನಮಗಿಲ್ಲ. ಯಾರಾದರೂ ಹೇಳಿಕೆ ನೀಡಿ, ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಆದ ವಿಚಾರ ಪ್ರಸ್ತಾಪಿಸಿದರೆ ಅನಿವಾರ್ಯವಾಗಿ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ. ಇದನ್ನು ನನ್ನ ಎಚ್ಚರಿಕೆ ಅಂತಲಾದ್ರೂ ತಿಳಿದುಕೊಳ್ಳಿ ಅಥವಾ ಮನವಿ ಅಂತಾದ್ರೂ ಪರಿಗಣಿಸಿ ಎಂದು ಹೇಳಿದ್ದಾರೆ.
ಯುವ ಕಾಂಗ್ರೆಸ್ಗೆ ಟಾಂಗ್.. : ಈಗಾಗಲೇ ಯುವ ಕಾಂಗ್ರೆಸ್ಗೆ ಹೊಸ ಪದಾಧಿಕಾರಿಗಳನ್ನು ನೇಮಿಸಿ ಸಾಕಷ್ಟು ಇಕ್ಕಟ್ಟಿಗೆ ಸಿಲುಕಿರುವ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ, ಡಿಕೆಶಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದರಿಂದಲೇ ಅವರ ತಲೆದಂಡವಾಗಲಿದೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಈ ಸಂದರ್ಭ ಬೇರೆ ಸಮಿತಿಗಳಲ್ಲೂ ಇಂತದ್ದೊಂದು ಬದಲಾವಣೆ ಕಾಣದಿರಲಿ ಎಂಬ ಕಾರಣಕ್ಕೆ ಸೂಕ್ಷ್ಮತೆಯನ್ನು ವಿವರಿಸಲು ಡಿಕೆಶಿ ಇಂತದ್ದೊಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಎಚ್ಚರಿಕೆ ಸಂದೇಶ : ಸದ್ಯ ಕೋವಿಡ್ ವಿಚಾರದಲ್ಲಿ ಹೆಚ್ಚು ತಲೆ ಕೆಡಿಸಿಕೊಂಡಿರುವ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಬಹುತೇಕ ಮಂದಿ ಹೋಂ ಕ್ವಾರಂಟೈನ್ನಲ್ಲಿದ್ದಾರೆ. ಈ ಸಂದರ್ಭ ಸಭೆ ಸೇರಿ ಚರ್ಚಿಸಿ ಹೊಸ ಸಮಿತಿಗಳಿಗೆ ನೇಮಿಸುವುದು ಅಸಾಧ್ಯದ ಮಾತು. ಈ ಹಿನ್ನೆಲೆ ಬೂತ್ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ, ಸಮರ್ಥರನ್ನು ವಿವಿಧ ಸಮಿತಿಗೆ ಆಯ್ಕೆ ಮಾಡುವ ಉದ್ದೇಶ ಹೊಂದಿರುವ ಡಿಕೆಶಿ, ಪಕ್ಷವನ್ನು ಕೇಡರ್ ಮಟ್ಟದಲ್ಲಿ ಕಟ್ಟುವ ಚಿಂತನೆ ಹೊಂದಿದ್ದಾರೆ.
ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕಾರ್ಯಕ್ರಮ ರೂಪಿಸಲಿದ್ದು, ಬೇರೆ ರಾಜ್ಯ ನಾಯಕರ ಕುಮ್ಮಕ್ಕಿನ ಮೇಲೆ ಹಾಲಿ ಇರುವ ಯಾವುದೇ ಸಮಿತಿ ಅಧ್ಯಕ್ಷರು ತಮ್ಮ ಸಮಿತಿಗೆ ಪದಾಧಿಕಾರಿಗಳ ನೇಮಕಕ್ಕೆ ಮುಂದಾಗದಿರಲಿ ಎಂಬ ಎಚ್ಚರಿಕೆ ಮೂಡಿಸಲು ಕೂಡ ಅವರು ಈ ಸಂದೇಶ ಬಿಡುಗಡೆ ಮಾಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.