ಬೆಂಗಳೂರು: ಕಳೆದ 6 ತಿಂಗಳಿನಿಂದ ನೆನೆಗುದಿಗೆಗೆ ಬಿದ್ದಿರುವ ಪೂರ್ಣ ಪ್ರಮಾಣದ ಜಿಲ್ಲಾ ಉಸ್ತುವಾರಿಗಳ ನೇಮಕ ಪ್ರಕ್ರಿಯೆ ಇಂದು ನಡೆಯುವ ಸಾಧ್ಯತೆ ಇದೆ. ಬೆಂಗಳೂರು ಉಸ್ತುವಾರಿಯನ್ನು ಮುಖ್ಯಮಂತ್ರಿಗಳೇ ಇರಿಸಿಕೊಳ್ಳಲಿದ್ದು, ಉಳಿದ ಜಿಲ್ಲೆಗಳನ್ನು ಸಚಿವರಿಗೆ ಹಂಚಿಕೆ ಮಾಡಲಿದ್ದಾರೆ.
ಬೆಂಗಳೂರು ಜಿಲ್ಲೆಯನ್ನು ತಮ್ಮ ಬಳಿಯೇ ಇಟ್ಟುಕೊಳ್ಳಲಿರುವ ಸಿಎಂ ಬೊಮ್ಮಾಯಿ, ವಿ.ಸೋಮಣ್ಣಗೆ ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಬಹುತೇಕ ಖಚಿತವಾಗಿದೆ. ಪ್ರಭಾವಿ ಸಚಿವ ಆರ್.ಅಶೋಕ್ಗೆ ಯಾವುದೇ ಜಿಲ್ಲೆಯ ಉಸ್ತುವಾರಿ ಇಲ್ಲ ಎನ್ನುವ ಮಾಹಿತಿ ಲಭ್ಯವಾಗಿದ್ದು, ಸಂಜೆ ವೇಳೆಗೆ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಪ್ರಕಟಗೊಳ್ಳಲಿದೆ.
ಜನವರಿ 26ಕ್ಕೆ ಗಣರಾಜ್ಯೋತ್ಸವ ಇದ್ದು, ಧ್ವಜಾರೋಹಣ ನೆರವೇರಿಸಲು ಸಚಿವರಿಗೆ ಜವಾಬ್ದಾರಿ ನೀಡಬೇಕಿದೆ. ಸದ್ಯ ಕೋವಿಡ್ ನಿರ್ವಹಣೆಗೆ ಸಚಿವರಿಗೆ ಜಿಲ್ಲೆಗಳನ್ನು ಹಂಚಿಕೆ ಮಾಡಿದ್ದು, ಈಗ ಕೇವಲ ಧ್ವಜಾರೋಹಣಕ್ಕೆ ಮಾತ್ರವಲ್ಲದೆ ಜಿಲ್ಲೆಗಳ ಉಸ್ತುವಾರಿಯನ್ನೂ ನೀಡಿ ಪಟ್ಟಿ ಪ್ರಕಟಿಸಲಾಗುತ್ತದೆ ಎನ್ನಲಾಗ್ತಿದೆ.
ಈಗಾಗಲೇ ಸಚಿವರಿಗೆ ಈ ಸಂಬಂಧ ಮಾಹಿತಿ ನೀಡಲಾಗಿದ್ದು, ಬಹುತೇಕ ಎಲ್ಲಾ ಸಚಿವರಿಗೂ ಅವರವರಿಗೆ ಹಂಚಿಕೆ ಮಾಡುವ ಜಿಲ್ಲೆಗಳ ಬಗ್ಗೆ ಸುಳಿವು ನೀಡಲಾಗಿದೆ ಎಂದು ಕೆಲ ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ.
ಮುಂದಿನ ವರ್ಷಕ್ಕೆ ವಿಧಾನಸಭಾ ಚುನಾವಣೆ ಎದುರಾಗಲಿದ್ದು, ಇದು ಬಹುತೇಕ ಚುನಾವಣಾ ವರ್ಷದ ರೀತಿಯಲ್ಲಿಯೇ ಇರಲಿದೆ. ಹಾಗಾಗಿ ಮುಂಬರಲಿರುವ ಸಾರ್ವತ್ರಿಕ ಚುನಾವಣೆಗೆ ಪೂರಕವಾಗಿ ಅನುಕೂಲಕರವಾಗಿಯೇ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಸಚಿವರಿಗೆ ಜಿಲ್ಲೆಗಳ ಜವಾಬ್ದಾರಿ ಹಂಚಿ, ಹೊಸ ಟಾಸ್ಕ್ ನೀಡಲಾಗುತ್ತದೆ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ: ಕೊರೊನಾ ಲಸಿಕೆ ಮೊದಲ ಡೋಸ್.. ಶೇ.100 ರಷ್ಟು ಸಾಧನೆ: ಸಚಿವ ಡಾ.ಕೆ.ಸುಧಾಕರ್