ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಸದ್ಯ ಸ್ಥಾನ ಹಂಚಿಕೆ ಮಾತ್ರ ಮಾಡಿಕೊಂಡಿದೆ. ಇಷ್ಟಕ್ಕೇ ಅಸಮಾಧಾನ ಭುಗಿಲೆದ್ದಿದ್ದು, ಟಿಕೆಟ್ ಘೋಷಣೆ ನಂತರ ಇನ್ನಷ್ಟು ಉಲ್ಬಣವಾಗುವ ಲಕ್ಷಣ ಗೋಚರಿಸುತ್ತಿದೆ.
20 ಕ್ಷೇತ್ರವನ್ನು ತಾನಿಟ್ಟುಕೊಂಡು 8 ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿರುವ ಕಾಂಗ್ರೆಸ್ನಲ್ಲಿ ಇದೀಗ ಒಂದಿಷ್ಟು ಗೊಂದಲ, ಬೇಸರ, ಬಂಡಾಯದ ಬೇಗುದಿ ಆರಂಭವಾಗಿದೆ. ಶಾಮನೂರು ಶಿವಶಂಕರಪ್ಪನವರ ತಲೆಬಿಸಿ ಒಂದು ಕಡೆಯಾದರೆ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬೆಳಗಾವಿಯತ್ತ ಸಾಗುತ್ತಿಲ್ಲ ಎಂಬುದು ಮತ್ತೊಂದು ಪೀಕಲಾಟ ತಂದಿದೆ.
ರಮೇಶ್ ಪ್ರಚಾರ ಡೌಟು
ಎರಡು ದಿನ ಹಿಂದೆ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಬೆಳಗಾವಿ ನಾಯಕರ ಸಭೆಗೂ ರಮೇಶ್ ಗೈರಾಗಿದ್ದರು. ತಮ್ಮ ಆಪ್ತರಿಗೆ ಟಿಕೆಟ್ ಸಿಕ್ಕರೆ ಮಾತ್ರ ರಮೇಶ್ ಪ್ರಚಾರದ ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಆದರೆ ಈವರೆಗೆ ಅವರ ನಡೆ ನಿಗೂಢವಾಗಿಯೇ ಇದೆ.
ಶಾಮನೂರು ನಿಲುವು ನಿಗೂಢ
ಇನ್ನೊಂದೆಡೆ ದಾವಣಗೆರೆಯಲ್ಲಿ ಪುತ್ರನಿಗೆ ಟಿಕೆಟ್ ನಿರೀಕ್ಷಿಸುತ್ತಿರುವ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಟಿಕೆಟ್ ಘೋಷಣೆ ನಂತರವೇ ಪ್ರಚಾರಕ್ಕೆ ಇಳಿಯಲು ನಿರ್ಧರಿಸಿದ್ದಾರೆ. ಸದ್ಯ ಅವರು ಪ್ರಚಾರದ ವಿಚಾರವಾಗಿ ಮಾತನಾಡಿಲ್ಲ. ಪುತ್ರ ಎಸ್.ಎಸ್. ಮಲ್ಲಿಕಾರ್ಜುನ ಕಳೆದ ಬಾರಿ ಕೂಡ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದರು. ಈ ಬಾರಿಯೂ ಅವರೇ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ. ಆದರೆ ಶಾಮನೂರು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವುದು ದಾವಣಗೆರೆ ಭಾಗದಲ್ಲಿ ಕುತೂಹಲ ಮೂಡಿಸಿದೆ.
ಬೆಂಗಳೂರು ದಕ್ಷಿಣಕ್ಕೆ ಅಭ್ಯರ್ಥಿ ಬರ
ಮಾಜಿ ಸಚಿವ ರಾಮಲಿಂಗರೆಡ್ಡಿ ಹಾಗೂ ಮಾಜಿ ಶಾಸಕ ಪ್ರಿಯಾಕೃಷ್ಣ ಇಬ್ಬರೂ ಬೆಂಗಳೂರು ದಕ್ಷಿಣ ಆಕಾಂಕ್ಷಿಗಳಾಗಿದ್ದು, ಒಬ್ಬರ ಆಯ್ಕೆ ಕಗ್ಗಂಟಾಗಿದೆ. ಇನ್ನು ಬಿಜೆಪಿ ಕೇಂದ್ರ ಸಚಿವ ದಿ. ಅನಂತ್ ಕುಮಾರ್ ಕ್ಷೇತ್ರದಲ್ಲಿ ಅವರ ಪತ್ನಿ ತೇಜಸ್ವಿನಿ ಅವರನ್ನೇ ಅಭ್ಯರ್ಥಿಯನ್ನಾಗಿ ಘೋಷಿಸುವುದು ಬಹುತೇಕ ಖಚಿತವಾಗಿದೆ. ಬಿಜೆಪಿ ಭದ್ರಕೋಟೆಯಲ್ಲಿ ಸದ್ಯ ಅನುಕಂಪದ ಅಲೆ ಕೂಡ ಇರುವುದರಿಂದ ಕಾಂಗ್ರೆಸ್ನ ಯಾವುದೇ ಅಭ್ಯರ್ಥಿ ಕಣಕ್ಕಿಳಿಯಲು ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ.
ದಕ್ಷಿಣದಲ್ಲಿ ರಾಮಲಿಂಗಾರೆಡ್ಡಿ ನೇರವಾಗಿಯೇ ಸ್ಪರ್ಧೆ ನಿರಾಕರಿಸಿದ್ದಾರೆ. ಇನ್ನು ಪ್ರಿಯಾಕೃಷ್ಣ ಕೂಡ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಯೋಚನೆ ಸಹ ಕಾಂಗ್ರೆಸ್ಗಿದೆ ಎನ್ನಲಾಗ್ತಿದೆ.
ಬಂಡಾಯದ ಬಿಸಿ
ಕೋಲಾರ, ಬೆಳಗಾವಿ, ಮಂಗಳೂರಿನಲ್ಲಿ ಬಂಡಾಯದ ಬಿಸಿ ತಾರಕಕ್ಕೇರಿದೆ. ಕೋಲಾರದಿಂದ ಸಂಸದ ಕೆ.ಎಚ್ ಮುನಿಯಪ್ಪಗೆ ಟಿಕೆಟ್ ಬಹುತೇಕ ಖಚಿತವಾಗಿದೆ. ಆದರೆ ಅವರಿಗೂ ಸೋಲಿನ ಭೀತಿ ಇದ್ದು, ಅಭ್ಯರ್ಥಿ ಬದಲಿಸುವಂತೆ ಒತ್ತಡ ಕೇಳಿಬರುತ್ತಿದೆ. ಮುನಿಯಪ್ಪ ಪರ ಸ್ಥಳೀಯ ಕಾಂಗ್ರೆಸ್ ನಾಯಕರೇ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಬೆಳಗಾವಿಯಲ್ಲಿ ಸಾದುನವರ್, ಶಿವಕಾಂತ್ ಸಿದ್ನಾಳ್, ಅಶೋಕ್ ಪಟ್ಟಣ್ ಹೆಸರು ಚಾಲ್ತಿಯಲ್ಲಿದೆ. ಇವರಲ್ಲಿ ಯಾರಿಗೇ ಟಿಕೆಟ್ ಸಿಕ್ಕರೂ ಉಳಿದವರ ಅಭಿಮಾನಿಗಳು ಒಪ್ಪುವ ಸಾಧ್ಯತೆ ಕಡಿಮೆ. ಇನ್ನು ಮಂಗಳೂರು ಸೇರಿ ಕಾಂಗ್ರೆಸ್ಗೆ ಒಲಿದು ಬಂದಿರುವ 8 ಕ್ಷೇತ್ರದಲ್ಲಿ ಬಂಡಾಯದ ಬಿಸಿ ಹೆಚ್ಚುವ ಸಾಧ್ಯತೆ ಇದೆ ಎಂಬ ಮಾತುಗಳು ಹರಿದಾಡುತ್ತಿವೆ.