ಬೆಂಗಳೂರು: ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮೈಸೂರು ಲ್ಯಾಂಪ್ಸ್ ಕಾರ್ಖಾನೆ ಜಾಗದಲ್ಲಿ ಹೆರಿಟೇಜ್ ಅಂಡ್ ಎನ್ವೈರ್ನಮೆಂಟ್ ಟ್ರಸ್ಟ್ ಮಾಡುತ್ತಿರುವ ಕುರಿತು ವಿಸ್ತೃತ ಚರ್ಚೆ ನಡೆಸಲು ಸಭಾಪತಿ ಬಸವರಾಜ ಹೊರಟ್ಟಿ ರೂಲಿಂಗ್ ನೀಡಿದ್ದಾರೆ.
ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಕಾಂತರಾಜ್, ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮೈಸೂರು ಲ್ಯಾಂಪ್ಸ್ ಕಾರ್ಖಾನೆ ಜಾಗ ಖಾಸಗಿಗೆ ಕೊಡಬಾರದು ಎಂದಿದ್ದರೂ ಟ್ರಸ್ಟ್ ಗೆ ಕೊಡಲಾಗಿದೆ. ಯಾರನ್ನು ಟ್ರಸ್ಟಿಗಳನ್ನಾಗಿ ಮಾಡುತ್ತೀರಾ? ಶ್ರೇಷ್ಠ ನಾಗರೀಕರನ್ನು ಟ್ರಸ್ಟಿಗಳನ್ನಾಗಿ ಮಾಡುವುದು ಎಂದರೆ ಯಾರು? ಅದಾನಿ, ಅಂಬಾನಿಯಾ? ಮುಂದೆ ಇದನ್ನು ಟ್ರಸ್ಟ್ನವರು ಮಾರಿಕೊಳ್ಳುತ್ತಾರೆ, ಹೆರಿಟೇಜ್ ಅಂಡ್ ಎನ್ವೈರ್ನಮೆಂಟ್ ಟ್ರಸ್ಟ್ ಯಾರದ್ದು? ಏನಿದು? ಎಂದು ಪ್ರಶ್ನಿಸಿದರು.
ಅರ್ಧ ಗಂಟೆ ಚರ್ಚೆಗೆ ಅವಕಾಶ ಕೊಡಿ
ಪ್ರತಿಪಕ್ಷ ನಾಯಕ ಎಸ್.ಆರ್‌ಪಾಟೀಲ್ ಮಾತನಾಡಿ, ಮೈಸೂರು ಮಹಾರಾಜರ ಕಾಲದ ಕಂಪನಿ, ಇದನ್ನ ಟ್ರಸ್ಟ್ಗೆ ಕೊಟ್ಟಿದ್ದಾರೆ, ಇದು ಸರ್ಕಾರದ ಟ್ರಸ್ಟ್ ಅಲ್ಲ, ಖಾಸಗಿ ವ್ಯಕ್ತಿಗಳ ಟ್ರಸ್ಟ್, ಖಾಸಗಿಯವರು ನಡೆಸದೇ ಇದ್ದರೆ ಅದು ಖಾಸಗಿಯವರ ಪಾಲಾಗಲಿದೆ. ಯಶವಂತಪುರ ಹೃದಯಭಾಗದಲ್ಲಿ 22.5 ಎಕರೆ ಜಾಗವಿದೆ. ಇದು ಕೇವಲ ಐದು ಜನರ ಪಾಲಾಗಲಿದೆ. ಅರ್ಧ ಗಂಟೆ ಚರ್ಚೆಗೆ ಮಾರ್ಪಡಿಸಬೇಕು ಎಂದು ಮನವಿ ಮಾಡಿದರು.
ಸಮಜಾಯಿಷಿ ನೀಡಿದ ಸಚಿವರು
ಇದಕ್ಕೆ ಉತ್ತರಿಸಿದ ಸಚಿವ ಮುರುಗೇಶ್ ನಿರಾಣಿ, ಜಾಗದ ಮಾರಾಟ ಅಥವಾ ಖಾಸಗೀಕರಣದ ಹುನ್ನಾರ ಇಲ್ಲ, ಟ್ರಸ್ಟ್ ಗೆ ಅಧ್ಯಕ್ಷರು ಸರ್ಕಾರದ ಮುಖ್ಯ ಕಾರ್ಯಾದರ್ಶಿ ಇರಲಿದ್ದಾರೆ. ಏಳು ಜನ ಸದಸ್ಯರು ಸರ್ಕಾರದ ಅಧಿಕಾರಿಗಳೇ ಇರಲಿದ್ದಾರೆ, ಐದು ಜನ ಮಾತ್ರ ಹೊರಗಿನವರು, ಸಂಪೂರ್ಣ ಸರ್ಕಾರವೇ ನಡೆಸುವ ಟ್ರಸ್ಟ್ ಇದಾಗಲಿದೆ.
ಸರ್ಕಾರವೇ ನಡೆಸುವ ಕಾರಣಕ್ಕೆ ಬಾಡಿಗೆ ಪಡೆಯುತ್ತಿಲ್ಲ, ಕರ್ನಾಟಕದ ಸಂಸ್ಕೃತಿಯನ್ನು ಬಿಂಬಿಸುವ, ಬೆಂಗಳೂರು ನಗರದ ಹಸಿರು ವಾತಾವರಣ ಕಾಪಾಡುವ ನಿಟ್ಟಿನಲ್ಲಿ ಕೈಜೋಡಿಸಲು ವಿನೂತನ ಯೋಜನೆ ಮಾಡಲಾಗುತ್ತಿದೆ.
ಇದಕ್ಕೆ ಸರ್ಕಾರದ ಹಣ ಬಳಕೆ ಮಾಡುತ್ತಿಲ್ಲ, ಕಂಪನಿಗಳ ಸಿಎಸ್ಆರ್ ಫಂಡ್ ನಿಂದ ಹಣ ಬಳಕೆ ಮಾಡಲಾಗುತ್ತಿದೆ. ಸಿಎಸ್ಆರ್ ಫಂಡ್ ಸರ್ಕಾರ ನೇರವಾಗಿ ಪಡೆಯಲು ಸಾಧ್ಯವಿಲ್ಲ, ಅದಕ್ಕೆ ಟ್ರಸ್ಟ್ ಮಾಡಲಾಗಿದೆ ಎಂದು ಸಮಜಾಯಿಷಿ ನೀಡಿದರು.
ರೂಲಿಂಗ್ ಕೊಟ್ಟ ಸಭಾಧ್ಯಕ್ಷರು
ಆದರೆ, ಸರ್ಕಾರದ ಉತ್ತರಕ್ಕೆ ಪ್ರತಿಪಕ್ಷ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಟ್ರಸ್ಟ್ ಮಾಡದಂತೆ ಆಗ್ರಹಿಸಿದರು. ಅಂತಿಮವಾಗಿ ಈ ವಿಷಯವನ್ನು ಚರ್ಚೆ ನಡೆಸಲು ಅವಕಾಶ ಕಲ್ಪಿಸಲು ಸಮ್ಮತಿಸಿದ ಸಭಾಪತಿಗಳು, ಅರ್ಧ ಗಂಟೆ ಚರ್ಚೆಗೆ ಮಾರ್ಪಡಿಸಿ ರೂಲಿಂಗ್ ನೀಡಿದರು.
ಇದನ್ನೂ ಓದಿ: ಫರ್ನಾಂಡಿಸ್ ಅಂತಿಮ ದರ್ಶನ ಪಡೆಯಲಿದ್ದಾರೆ ರಾಹುಲ್ ಗಾಂಧಿ: ಡಿ.ಕೆ ಶಿವಕುಮಾರ್