ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕೊನೆ ಚುನಾವಣೆ ಪ್ರಸಂಗದ ಕುರಿತು ಸದನದಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಸಿದ್ದರಾಮಯ್ಯ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಉದ್ದೇಶಿಸಿ ಮಾತನಾಡಿ, ನನಗೆ ಸಾಕಾಗಿದೆ. ಇನ್ನು ಚುನಾವಣೆಗೆ ನಿಲ್ಲಲ್ಲ. ನೀವು ಮುಂದುವರಿಸಿ ಎಂದು ಹೇಳಿದರು.
ಅದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಕೊನೆ ಚುನಾವಣೆ ಎಂದು ಹೇಳುವುದು ಬೇಡ. ಹಾಗೇ ಹೇಳಿದರೂ ಮತ್ತೆ ಮತ್ತೆ ಚುನಾವಣೆಗೆ ನಿಲ್ಲುತ್ತೀರಾ ಎಂದು ಕಿಚಾಯಿಸಿದರು.
ಈ ವೇಳೆ ಸಿದ್ದರಾಮಯ್ಯ, ನಾನು ಚುನಾವಣೆಯಲ್ಲಿ ನಿಲ್ಲಬಾರದು ಎಂದುಕೊಳ್ಳುತ್ತೇನೆ. ಆದ್ರೆ ಅಷ್ಟರಲ್ಲಿ ಒಂದಷ್ಟು ರಾಜಕೀಯ ಬೆಳವಣಿಗೆ ನಡೆಯುತ್ತದೆ. ಕಳೆದ ಸಲವೂ ಚುನಾವಣೆಯಲ್ಲಿ ನಿಲ್ಲಬಾರದು ಅಂದುಕೊಂಡಿದ್ದೆ. ಹೈಕಮಾಂಡ್ ಒತ್ತಾಯ ಮಾಡಿದ್ದರಿಂದ ಸ್ಪರ್ಧಿಸಿದೆ ಎಂದು ಸಮಜಾಯಿಷಿ ನೀಡಿದರು.
ಪಕ್ಷದಲ್ಲಿ ಕೆಲ ಬದಲಾವಣೆ ಆಯಿತು. ಹಾಗಾಗಿ ಚುನಾವಣೆಗೆ ನಿಲ್ಲಬೇಕಾಯಿತು ಎಂದು ಸಿದ್ದರಾಮಯ್ಯ ಹೇಳುತ್ತಿದ್ದ ಹಾಗೇ, ನಿಮ್ಮ ಪಕ್ಷದಲ್ಲಿ ಏನೋನೋ ಬದಲಾವಣೆ ಆಗುತ್ತಿರುತ್ತದೆ ಎಂದು ಈಶ್ವರಪ್ಪ ಕಾಲೆಳೆದರು.