ಬೆಳಗಾವಿ : ಕಲಬುರಗಿಯಲ್ಲಿ ಇಂದು ನಡೆದ ಸಹಾಯಕ ಎಂಜಿನಿಯರ್ (ಎಇ) ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆಗೆ ಅವಕಾಶ ಕಲ್ಪಿಸುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ವಿಧಾನಸಭೆಗೆ ತಿಳಿಸಿದ್ದಾರೆ.
ಇಂದು ಶೂನ್ಯ ವೇಳೆಯಲ್ಲಿ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವರು, ರೈಲು ವಿಳಂಬದಿಂದಾಗಿ ಇಂದು ಬೆಳಗ್ಗೆ ನಡೆಯಬೇಕಿದ್ದ ಪರೀಕ್ಷೆಗೆ ಗೈರು ಹಾಜರಾದ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆಗೆ ಅವಕಾಶ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕೆಪಿಎಸ್‌ಸಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗೆ ಸೂಚಿಸಲಾಗಿದೆ.
ಆದರೆ, ಮಧ್ಯಾಹ್ನದ ಪರೀಕ್ಷೆ ಬರೆಯಬೇಕು ಎಂದು ಹೇಳಿದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರಾದ ಪ್ರಿಯಾಂಕ್ ಖರ್ಗೆ, ಡಾ.ರಂಗನಾಥ್, ಅಜಯ್ ಧರ್ಮಸಿಂಗ್ ಮತ್ತಿತರರು ಮಧ್ಯಾಹ್ನದ ಪರೀಕ್ಷೆಗೂ ಅಭ್ಯರ್ಥಿಗಳು ಹಾಜರಾಗಲು ಸಾಧ್ಯವಿಲ್ಲ ಎಂದಾಗ, ಆ ಪರೀಕ್ಷೆಯನ್ನೂ ಸಹ ಮತ್ತೊಮ್ಮೆ ನಡೆಸಲು ನಿರ್ದೇಶನ ನೀಡುವುದಾಗಿ ಸಚಿವರು ಹೇಳಿದರು.
ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಶಿವಲಿಂಗೇಗೌಡ ಅವರು, ಹಾಸನ, ದಕ್ಷಿಣ ಕರ್ನಾಟಕದ ಅಭ್ಯರ್ಥಿಗಳನ್ನು ಕಲಬುರಗಿಯಲ್ಲಿ ಪರೀಕ್ಷೆ ಬರೆಯಲು ಹೊಸ ಮಾದರಿ ಮಾಡಿದ್ದಾರೆ. ಆದರೆ, ಪರೀಕ್ಷೆ ಬರೆಯಲು ಬರುತ್ತಿದ್ದ ಅಭ್ಯರ್ಥಿಗಳು ಪ್ರಯಾಣಿಸುತ್ತಿದ್ದ ರೈಲು ನಾಲ್ಕೈದು ಗಂಟೆ ತಡವಾಗಿದ್ದು, ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗಲಿಲ್ಲ ಎಂದು ಸದನದ ಗಮನ ಸೆಳೆದು, ಮತ್ತೊಮ್ಮೆ ಪರೀಕ್ಷೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರು.
ಅನುದಾನ ಬಿಡುಗಡೆಗೆ ಸಿಎಂ ಜೊತೆ ಚರ್ಚೆ : ಜನವಸತಿ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ದಿಗಾಗಿ ಅನುದಾನ ಬಿಡುಗಡೆ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ಪ್ರಶ್ನೋತ್ತರ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರವಾಗಿ, ಶಾಸಕ ಲಿಂಗೇಶ್ ಅವರ ಪ್ರಶ್ನೆಗೆ ಉತ್ತರಿಸಿದರು.
ಈಗಾಗಲೇ 11 ಪುರಸಭೆಗಳಿಗೆ ಅನುದಾನ ಬಿಡುಗಡೆ ಮಾಡಿ ಅಲ್ಪಸಂಖ್ಯಾತ ಜನವಸತಿ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲು ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು. ಬೇಲೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2018-19ರಲ್ಲಿ 5.20 ಕೋಟಿ ಅನುದಾನ ಬಿಡುಗಡೆ ಮಾಡಿದ್ದೇವೆ.
ಆದರೆ, 2020-21ನೇ ಸಾಲಿನಲ್ಲಿ ಅನುದಾನ ಮಂಜೂರು ಮಾಡಲು ಕೋರಿರುವ ಪ್ರಸ್ತಾವ ಸರ್ಕಾರದ ಮುಂದಿದೆ. ಕೆಲವು ತಾಂತ್ರಿಕ ಕಾರಣಗಳಿಂದ ಅನುದಾನ ಬಿಡುಗಡೆ ಮಾಡಲು ಸಾದ್ಯವಿಲ್ಲ ಎಂದು ಹೇಳಿದರು.
(ಇದನ್ನೂ ಓದಿ: ಶ್ರೀಮಂತ ಅಭ್ಯರ್ಥಿಗೇ ಸೋಲುಣಿಸಿದ ಮತದಾರ: ಕಾರಿಗೂ ಕಾಯದೇ ಆಟೋ ಹತ್ತಿ ಹೊರಟ ಕೆಜಿಎಫ್ ಬಾಬು!)