ಚಾಮರಾಜನಗರ: ಬೆಂಗಳೂರು-ದಿಂಡಿಗಲ್ ರಾಷ್ಟೀಯ ಹೆದ್ದಾರಿಯಲ್ಲಿ ಹಾದುಹೋಗುವ ದಿಂಬಂ ಘಟ್ಟ ಪ್ರದೇಶದಲ್ಲಿ ರಾತ್ರಿ ಸಂಚಾರ ನಿರ್ಬಂಧ ಹೇರಿದ ಬಳಿಕ ನಿತ್ಯ ಮೂರರಿಂದ ನಾಲ್ಕು ತಾಸು ಟ್ರಾಫಿಕ್ ಜಾಂ ಉಂಟಾಗುತ್ತಿದೆ.
ಕರ್ನಾಟಕ ಗಡಿಯಿಂದ ಹಾಗೂ ತಮಿಳುನಾಡು ಗಡಿಯಿಂದ ಬೆಳಗ್ಗೆ 6 ಗಂಟೆಗೆ ಏಕಕಾಲಕ್ಕೆ ನೂರಾರು ಲಾರಿಗಳು ಹೊರಡುವುದರಿಂದ ವಾಹನ ಸವಾರರು ಟ್ರಾಫಿಕ್ ಸಂಕಟ ಅನುಭವಿಸುವಂತಾಗಿದೆ. ಜೊತೆಗೆ, ಕೃಷಿ ಮಾರುಕಟ್ಟೆ, ಕೈಗಾರಿಕೆಗಳಿಗೆ ತೆರಳಲು ಸಮಯ ಪಾಲನೆ ಮಾಡಲಾಗದೇ ಹೈರಾಣಾಗಿದ್ದಾರೆ.
ಕೊಯಮತ್ತೂರು ನಗರದಲ್ಲಿ 12 ಚಕ್ರದ ಲಾರಿಗಳಿಗೆ ಹಗಲು ಪ್ರವೇಶ ಇಲ್ಲದಿರುವುದರಿಂದ ದಿಂಬಂ ಘಟ್ಟ ಪ್ರದೇಶ ದಾಟಿ ಮತ್ತೆ ರಾತ್ರಿಯಾಗುವುದನ್ನೇ ಕಾಯಬೇಕಿದೆ. ಬೆಂಗಳೂರು-ಧರ್ಮಪುರಿ ಮಾರ್ಗ ಹೋಗುತ್ತೇವೆಂದರೆ ಲಾಭಕ್ಕಿಂತ ವೆಚ್ಚವೇ ಅಧಿಕವಾಗಲಿದ್ದು ವ್ಯಾಪಾರ-ವಹಿವಾಟಿಗೆ ರಾತ್ರಿ ಸಂಚಾರ ನಿರ್ಬಂಧ ದೊಡ್ಡ ಪೆಟ್ಟು ಕೊಟ್ಟಿದೆ. ಅಷ್ಟೇ ಅಲ್ಲ, ದಿಂಬಂ ಘಟ್ಟದಲ್ಲಿ 3-4 ತಾಸು ಲಾರಿ ಚಾಲಕರು ಸಿಲುಕಿದರೆ ಉಪಹಾರವೂ ಸಿಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ರೈತರು, ಲಾರಿ ಚಾಲಕರು, ಉದ್ದಿಮೆ ನಡೆಸುವವರಿಗೆ ರಾತ್ರಿ ಸಂಚಾರ ನಿರ್ಬಂಧವು ಶಾಪವಾಗಿ ಪರಿಣಮಿಸಿದೆ. ಈ ಬಗ್ಗೆ ಮದ್ರಾಸ್ ಹೈಕೋರ್ಟ್ ತಮ್ಮ ಆದೇಶವನ್ನು ಮರು ಪರಿಶೀಲಿಸಬೇಕೆಂಬ ಕೂಗು ಹೆಚ್ಚಾಗಿದೆ.
ಇದನ್ನೂ ಓದಿ : ಬ್ರೆಜಿಲ್ನಲ್ಲಿ ಭೂಕುಸಿತ, ಪ್ರವಾಹ: 117 ಮಂದಿ ದುರ್ಮರಣ