ಬೆಂಗಳೂರು: ಸ್ವತಂತ್ರವಾಗಿ ಮೇಕೆದಾಟು ಯೋಜನೆಗಾಗಿ ಜೆಡಿಎಸ್ ಹೋರಾಟ ನಡೆಸಲಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಹೇಳಿದರು. ನೆಲಮಂಗಲ ಸಮೀಪ ನಿನ್ನೆ(ಶುಕ್ರವಾರ) ಹಮ್ಮಿಕೊಂಡಿದ್ದ 'ಜನತಾ ಜಲಧಾರೆ' ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನಗೆ ಮಂಡಿ ನೋವು ಇರಬಹುದು. ಆದರೆ, ಮಾತನಾಡುವ ಎದೆಗಾರಿಕೆ ಇದೆ. ರಾಜಕೀಯ ಜೀವನದಲ್ಲಿ ತುಂಬಾ ನೋವನ್ನು ಅನುಭವಿಸಿದ್ದೇನೆ. ಜಲಧಾರೆ ಕಾರ್ಯಕ್ರಮ ಕುಮಾರಸ್ವಾಮಿ ಅವರ ಕಲ್ಪನೆಯ ಕೂಸು ಎಂದರು.
ರಾಜ್ಯಕ್ಕೆ ಮೇಕೆದಾಟು ಯೋಜನೆ ಮುಖ್ಯವಾಗಿದ್ದು, ಕುಡಿಯುವ ನೀರಿಗೆ ಮುಂದೆ ಸಮಸ್ಯೆಯಾಗುವುದಿಲ್ಲ. ಕಾಂಗ್ರೆಸ್ ಹೋರಾಟ ನಡೆಸಿದರೂ ನಮ್ಮದು ಅದರ ಅನುಕರಣೆಯಲ್ಲ. ನಾನು ಸಹ ಎಲ್ಲಾ ಸಮುದಾಯಕ್ಕೆ ರಾಜಕೀಯ ಶಕ್ತಿಯನ್ನು ನೀಡಿದ್ದೇನೆ. ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲಾಗಿದೆ. ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ಹತ್ತು ತಿಂಗಳ ಕಾಲ ರೈತರಿಗೆ ಹೆಚ್ಚಿನ ಒತ್ತು ನೀಡಿ ಕಾರ್ಯಕ್ರಮ ರೂಪಿಸಲಾಯಿತು. ಪಕ್ಷದ ಕಾರ್ಯಕರ್ತರನ್ನು ಮುಂದಿನ ದಿನದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಬಗ್ಗೆ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಪ್ರಾದೇಶಿಕ ಪಕ್ಷಗಳಿಂದಲೇ ನಾಡಿನ ಅಭಿವೃದ್ಧಿ: ನನ್ನ ರಾಜಕೀಯ ಇತಿಹಾಸದಲ್ಲಿ ಇಂತಹ ಸಭೆ ನೋಡಿಲ್ಲ. ಮುಂದೆ ಯಾರಾದರೂ ಮಾಡುತ್ತಾರೋ ಗೊತ್ತಿಲ್ಲ. ರೈತರು, ಬಡವರ ಪರವಾಗಿ ಕೆಲಸ ಮಾಡಲು ಪಕ್ಷ ಸದಾ ಮುಂದಿರುತ್ತದೆ. ಪ್ರಾದೇಶಿಕ ಪಕ್ಷವೆಂದು ನಮ್ಮನ್ನು ಕುಗ್ಗಿಸುತ್ತಾ ಹೋಗುತ್ತಿದ್ದಾರೆ. ಆದರೂ, ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲ. ಪ್ರಾದೇಶಿಕ ಪಕ್ಷಗಳಿಂದಲೇ ನಾಡಿನ ಅಭಿವೃದ್ಧಿ ಸಾಧ್ಯ ಎಂದರು.
ನದಿ ಜೋಡಣೆಗೆ ವಿರೋಧ: ಕೇಂದ್ರ ಸರ್ಕಾರ ನದಿ ಜೋಡಿಸುವ ಯೋಜನೆಗೆ ಅನುಮತಿ ನೀಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ದೇವೇಗೌಡರು, ಪ್ರಧಾನಿ ನರೇಂದ್ರ ಮೋದಿ ಅವರು ಪೆನ್ನಾರ್, ಕಾವೇರಿ, ಗುಂಡಾರ್ ನದಿಗಳನ್ನು ಕೂಡಿಸುವುದಕ್ಕೆ ಅನುಮತಿ ನೀಡಿದ್ದಾರೆ. ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಾಡಿಗೆ ತಬ್ಬಲಿತನ ಕಾಡುತ್ತಿದೆ: ಸಮಾವೇಶದಲ್ಲಿ ಗುರುಗುಂಡ ಬ್ರಹ್ಮೇಶ್ವರ ಮಠದ ನಂಜಾವಧೂತ ಸ್ವಾಮೀಜಿ ಮಾತನಾಡಿ, ನಾಡಿಗೆ ತಬ್ಬಲಿತನ ಕಾಡುತ್ತಿದೆ. ಕಾವೇರಿ, ಕಳಸಾ ಬಂಡೂರಿ ಯಾವುದೇ ಆಗಿರಬಹುದು. ಪಕ್ಕದ ತಮಿಳುನಾಡಿನಲ್ಲಿ ನೆಲ, ಜಲದ ವಿಚಾರವಾಗಿ ಒಂದೇ ಪಕ್ಷವಾಗಿ ಹೋರಾಟ ಮಾಡುತ್ತಾರೆ. ಆದರೆ, ಕರ್ನಾಟಕದಲ್ಲಿ ಆ ರೀತಿ ಇಲ್ಲ. ರಾಜಕೀಯ ಮೇಲಾಟವೇ ನಡೆಯುತ್ತಿದೆ. ಇದು ನಿಜಕ್ಕೂ ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ನಾಡಿಗೆ ಪರಿಹಾರ ತರುವ ಶಕ್ತಿ ಇರುವುದು ದೇವೇಗೌಡರಿಗೆ ಮಾತ್ರ. ಮತ್ತೊಬ್ಬ ದೇವೇಗೌಡ, ಕುಮಾರಸ್ವಾಮಿಯನ್ನ ಹುಟ್ಟು ಹಾಕಲು ಸಾಧ್ಯವಿಲ್ಲ. ಮುಂದೊಂದು ದಿನ ಫಿನಿಕ್ಸ್ ನಂತೆ ಕುಮಾರಸ್ವಾಮಿ ಎದ್ದು ಬರುತ್ತಾರೆ. ದೇವೇಗೌಡರು ರಾಷ್ಟ್ರದ ಚಕ್ರವರ್ತಿ ಸ್ಥಾನವನ್ನು ತ್ಯಜಿಸಿ ಬಂದವರು. ಕುಮಾರಸ್ವಾಮಿ ಅವಕಾಶವಾದಿಯಲ್ಲ ಮಹಾಸ್ವಾಭಿಮಾನಿ. ನನಗೆ ಅಧಿಕಾರ ಮುಖ್ಯವಲ್ಲ, ಜನರ ಹಿತ ಮುಖ್ಯವೆಂದು ಹೊರಗೆ ಬಂದವರು. ಇದು ನಿಜಕ್ಕೂ ಸ್ವಾಭಿಮಾನಿ ಕುಟುಂಬ ಎಂದು ಹೇಳಿದರು.
ಅಶ್ವಮೇಧ ಯಾಗ ಶುರು ಮಾಡಿದ್ದೇವೆ: ಜನತಾ ಜಲಧಾರೆ ಸಮಾವೇಶದ ಮೂಲಕ ಅಶ್ವಮೇಧ ಯಾಗ ಶುರು ಮಾಡಿದ್ದೇವೆ. ಕುದುರೆ ಬಿಟ್ಟಿದ್ದೇವೆ. ಅರ್ಜುನನ ಹಾಗೆ ಕುಮಾರಸ್ವಾಮಿ, ಕೃಷ್ಣನ ಹಾಗೆ ದೇವೇಗೌಡರು ಇದ್ದಾರೆ. ರಥ ಓಡಿಸಲು ನಾನು ಇದ್ದೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದರು.
ಸಮಾರಂಭದಲ್ಲಿ ಮಾತನಾಡಿದ ಅವರು, ನಾವು ಮೇಕೆ ದಾಟಿಸುವುದಿಲ್ಲ. ಸಿಂಹ ದಾಟಿಸುವವರು. ನಮ್ಮ ಹುಲಿ ಕುಮಾರಸ್ವಾಮಿ, ಹುಲಿಯನ್ನು ದಾಟಿಸುತ್ತೇವೆ ಎಂದು ಡಿಕೆಶಿಗೆ ತಿರುಗೇಟು ನೀಡಿದರು. ದೇವೇಗೌಡರ ಮನೆಯಲ್ಲಿ ನಾನು ದೊಡ್ಡ ಮಗ. ಕುಟುಂಬ ರಾಜಕಾರಣ ಅಂತಾರೆ. ಪ್ರಜ್ವಲ್, ನಿಖಿಲ್, ಸೂರಜ್ ಮೂವರು ಇದ್ದಾರೆ. ದೇವೇಗೌಡರ ಕುಟುಂಬದ ಬಗ್ಗೆ ವಿರೋಧ ಮಾಡುತ್ತಾರೆ. ಇದು ಬಿತ್ತನೆ ಬೀಜ, ಮಾರುವ ಬೀಜವಲ್ಲ. ನಾವು ರೈತರ ಮಕ್ಕಳು, ನಮ್ಮ ಬಳಿ ದುಡ್ಡಿಲ್ಲ ಎಂದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ಕೇಂದ್ರ ಸರ್ಕಾರ ಎಲ್ಐಸಿ ಎಲ್ಲವನ್ನೂ ಮಾರುತ್ತಿದೆ. ದೇವೇಗೌಡರು ಪ್ರಧಾನಿಯಾಗಿದ್ದಾಗ ಏನೂ ಮಾರಲಿಲ್ಲ. ದೇವೇಗೌಡರು ಬಂದಾಗ ಮೋದಿ ಕೂಡ ಎದ್ದು ನಿಂತು ಗೌರವ ಕೊಡುತ್ತಾರೆ. ಇಡಿ, ಸಿಡಿ ಏನಾದರೂ ಆರೋಪ ಗೌಡರ ಮೇಲಿದೆಯಾ ?. ದೇವೇಗೌಡರನ್ನು ಅಧಿಕಾರದಿಂದ ಇಳಿಸಿದ್ದ ಕಾಂಗ್ರೆಸ್ಗೆ ದರಿದ್ರ ಬಂದಿದೆ. ಅಂದಿನಿಂದ ಇವತ್ತಿನವರೆಗೂ ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಬರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಹಿಂದೆ ಪಕ್ಷದ ವರಿಷ್ಠ ದೇವೇಗೌಡ ಅವರು ಪ್ರಧಾನಿಯಾಗಿದ್ದ ವೇಳೆ ಒಂದೇ ಒಂದು ಸ್ವತ್ತು ಮಾರಾಟ ಮಾಡಲಿಲ್ಲ. ಏರ್ ಇಂಡಿಯಾ 50 ಕೋಟಿ ರೂ. ಲಾಭ ಮಾಡುತ್ತಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ 30 ಸಾವಿರ ಕೋಟಿ ರೂ. ನಷ್ಟ ಹೊಂದಿದೆ. ಅಲ್ಲದೇ, ರೈಲ್ವೆ, ಎಲ್‌ಐಸಿಯನ್ನು ಮಾರುತ್ತಿದ್ದಾರೆ. ರೈತ ಕುಟುಂಬದಲ್ಲಿ ಹುಟ್ಟಿರದಿದ್ದರೆ ದೇವೇಗೌಡ ಅವರು ಪ್ರತಿ ಮನೆಯಲ್ಲಿಯೂ ಶಿಲೆಯಾಗುತ್ತಿದ್ದರು. ಪಂಜಾಬ್‌ನ ಭತ್ತದ ತಳಿಗೆ ದೇವೇಗೌಡ ಹೆಸರನ್ನು ಇಡಲಾಗಿದೆ. ಅವರ ಋಣವನ್ನು ನಾವೆಲ್ಲಾ ತೀರಿಸಬೇಕಾಗಿದೆ ಎಂದು ತಿಳಿಸಿದರು.
ರಾಜ್ಯದ ಬಸವನ ಬಾಗೇವಾಡಿ, ಬಸವ ಕಲ್ಯಾಣ ಮತ್ತು ಕಲಬುರಗಿಯ ಬಂದೇನವಾಜ್ ಸನ್ನಿಧಿಗೆ ಭೇಟಿ ನೀಡಿದ ಬಳಿಕ ರಾಜ್ಯದಲ್ಲಿ ಪಕ್ಷವನ್ನು ಬಲಗೊಳಿಸಲು ಪ್ರವಾಸ ಕೈಗೊಳ್ಳುತ್ತೇನೆ. ರಾಜ್ಯದಲ್ಲಿ ಮತಗಟ್ಟೆ ಸಮಿತಿಗಳನ್ನು ರಚಿಸಬೇಕು. ಪಕ್ಷವನ್ನು ಸದೃಢಗೊಳಿಸಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಬೇಕು ಎಂದರು. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು, ಸೋನಿಯಾ ಮನೆಗೆ ಹೋಗಿ ಉಧೋ ಉಧೋ ಎಂದು ಸಿದ್ದರಾಮಯ್ಯ ತಿರುಗುತ್ತಿದ್ದಾರೆ. ಜೆಡಿಎಸ್‌ನಲ್ಲಿ ಅಂತಹ ಸ್ಥಿತಿ ಇಲ್ಲ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಜಲಧಾರೆ ಸಮಾವೇಶಕ್ಕೂ ಮುನ್ನ ತಂದೆ-ತಾಯಿ ಆಶೀರ್ವಾದ ಪಡೆದ ಕುಮಾರಸ್ವಾಮಿ