ಬೆಂಗಳೂರು: ನಗರದ ಮಿಂಟೋ, ವಿಕ್ಟೋರಿಯಾ ಹಾಗೂ ವಾಣಿವಿಲಾಸ ಆಸ್ಪತ್ರೆಯ ಕಿರಿಯ ವೈದ್ಯರು ನಡೆಸುತ್ತಿರುವ ಮುಷ್ಕರ ಕೈಬಿಡುವಂತೆ ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ ಮನವಿ ಮಾಡಿದ್ದಾರೆ.
ಮಿಂಟೋ ಆಸ್ಪತ್ರೆಯ ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಬಂಧಿಸುವಂತೆ ಆಗ್ರಹಿಸಿ ಎರಡನೇ ದಿನವೂ ವೈದ್ಯರು ಮುಷ್ಕರ ಮುಂದುವರಿಸಿದ್ದಾರೆ. ಇದರಿಂದ ರೋಗಿಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಷ್ಕರ ವಾಪಸ್ ಪಡೆದು ರೋಗಿಗಳ ನೆರವಿಗೆ ಧಾವಿಸುವಂತೆ ಉಪಮುಖ್ಯಮಂತ್ರಿಗಳು ಕೋರಿದ್ದಾರೆ.
ಕಾನೂನು ಕೈಗೆತ್ತಿಕೊಂಡವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು. ಈಗಾಗಲೇ ಹಲ್ಲೆ ನಡೆಸಿದವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅದರ ಆಧಾರದ ಮೇಲೆ ಕಾನೂನು ಕ್ರಮ ಜರುಗಲಿದೆ. ಕಿರಿಯ ವೈದ್ಯರು ಸೇರಿದಂತೆ ಎಲ್ಲಾ ವೈದ್ಯರಿಗೆ ಸೂಕ್ತ ಭದ್ರತೆ ಕೊಡುವುದರ ಜತೆಗೆ ಅವರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.
ವೈದ್ಯರು ನಿರ್ಭೀತರಾಗಿ ವೈದ್ಯಕೀಯ ಸೇವೆ ಸಲ್ಲಿಸಲು ಪೂರಕ ವಾತಾವರಣ ನಿರ್ಮಿಸಲಾಗುವುದು. ಆದ್ದರಿಂದ ರೋಗಿಗಳಿಗೆ ಅನಾನುಕೂಲತೆ ಆಗದಂತೆ ಕೂಡಲೇ ಮುಷ್ಕರ ಹಿಂಪಡೆದು ಸೇವೆಗೆ ಹಾಜರಾಗಿ ಎಂದು ಮುಷ್ಕರ ನಿರತ ವೈದ್ಯರಲ್ಲಿ ಅಶ್ವತ್ಥ ನಾರಾಯಣ ವಿನಂತಿ ಮಾಡಿದ್ದಾರೆ.