ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಇಂದು ಅರ್ಚಕರ ನಿಯೋಗ ಭೇಟಿಯಾಗಿದೆ. ರಾಜ್ಯದ ದೇವಾಲಯಗಳನ್ನು ಯಾವುದೇ ಕಾರಣಕ್ಕೂ ಖಾಸಗೀಕರಣಗೊಳಿಸದಂತೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಿದೆ.
ಸದಾಶಿವ ನಗರದ ನಿವಾಸದಲ್ಲಿ ಡಿಕೆಶಿ ಅವರನ್ನು ಭೇಟಿಯಾಗಿ, ದೇವಸ್ಥಾನಗಳು ಸರ್ಕಾರದ ಸುಪರ್ದಿಯಲ್ಲೇ ಇರಬೇಕು. ಯಾವುದೇ ಕಾರಣಕ್ಕೂ ರಾಜ್ಯದ ದೇವಾಲಯಗಳನ್ನು ಖಾಸಗಿಯವರಿಗೆ ನೀಡಬಾರದು ಎಂದು ಈ ವಿಚಾರವಾಗಿ ಡಿ.ಕೆ ಶಿವಕುಮಾರ್ ಅವರ ಬೆಂಬಲ ಕೋರಿದರು.
ಮೇಕೆದಾಟು ಪಾದಯಾತ್ರೆಗೆ ಬೆಂಬಲ : ಇದೇ ವೇಳೆ ಮೇಕೆದಾಟು ಪಾದಯಾತ್ರೆಗೆ ಅರ್ಚಕರ ನಿಯೋಗ ಬೆಂಬಲ ಸೂಚಿಸಿದೆ. ಅರ್ಚಕರು ಒಂದು ದಿನದ ಮೇಕೆದಾಟು ಪಾದಯಾತ್ರೆಯಲ್ಲಿ ಭಾಗಿಯಾಗುವ ಭರವಸೆ ನೀಡಿದರು.
ಈ ವೇಳೆ ಮಾತನಾಡಿದ ಡಿಕೆಶಿ, ನಾಳೆ ಮಧ್ಯಾಹ್ನ 3 ಗಂಟೆಗೆ ಪಕ್ಷದ ಎಲ್ಲಾ ಶಾಸಕರು ಮೇಕೆದಾಟು ತಲುಪಲಿದ್ದೇವೆ. ಈಗಾಗಲೇ ಸಿದ್ದರಾಮಯ್ಯ ಪಾದಯಾತ್ರೆ ಮಾಡುವುದಾಗಿ ತಿಳಿಸಿದ್ದಾರೆ ಎಂದರು.
ಇದನ್ನೂ ಓದಿ: ರೌಡಿ ಕೊತ್ವಾಲನ ಶಿಷ್ಯ ಎನ್ನುವುದನ್ನು ಡಿಕೆಶಿ ವರ್ತನೆ ತೋರಿಸುತ್ತಿದೆ : ಬಿಜೆಪಿ 'ಟ್ವೀಕೆ'
ಮೇಕೆದಾಟು ಯೋಜನೆಯ ಡಿಪಿಆರ್ ಮಾಡಲು ಕುಮಾರಸ್ವಾಮಿ ಸರ್ಕಾರ ಬೇಕಿತ್ತಾ ಎಂಬ ಕಾರಜೋಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ನನಗೆ ಕಾರಜೋಳ, ಕುಮಾರಸ್ವಾಮಿ, ಅಶೋಕಣ್ಣರ ಬಗ್ಗೆ ಮಾತನಾಡಲು ಶಕ್ತಿ ಇಲ್ಲ. ನಾವು ಏನೂ ಮಾಡಿಲ್ಲ, ಎಲ್ಲ ಅವರೇ ಮಾಡಿದ್ದು ಎಂದು ಉತ್ತರಿಸಿದರು.