ಬೆಂಗಳೂರು: ವಿಧಾನ ಪರಿಷತ್ ಹಾಗೂ ರಾಜ್ಯಸಭಾ ಚುನಾವಣೆ ಅಭ್ಯರ್ಥಿ ಆಯ್ಕೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಮಾಡುತ್ತಿರುವ ವಿಳಂಬ ಹೈಕಮಾಂಡ್ ನಾಯಕರನ್ನು ಕೆರಳಿಸಿದೆ. ಪರಿಷತ್ನ ಎರಡು ಸ್ಥಾನಗಳಿಗೆ ಹಾಗೂ ರಾಜ್ಯಸಭೆಯ ಒಂದು ಸ್ಥಾನಕ್ಕೆ ಅಭ್ಯರ್ಥಿಯನ್ನು ಅಂತಿಮಗೊಳಿಸಿ ಪಟ್ಟಿ ಕಳುಹಿಸುವಂತೆ ಸೂಚಿಸಿ ದೆಹಲಿಯಿಂದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕಳುಹಿಸಿಕೊಟ್ಟಿರುವ ಹೈಕಮಾಂಡ್ ನಾಯಕರಿಗೆ ಎರಡು ದಿನವಾದರೂ ಪಟ್ಟಿ ತಲುಪಿಲ್ಲ. ತಮ್ಮ ಸಲಹೆ ಸ್ವೀಕರಿಸಿ ತೆರಳಿದ ನಂತರವೂ ಪಟ್ಟಿ ಸಲ್ಲಿಕೆಯಲ್ಲಿ ರಾಜ್ಯ ಕೈ ನಾಯಕರು ಮಾಡುತ್ತಿರುವ ವಿಳಂಬ ಹೈಕಮಾಂಡ್ ನಾಯಕರು ಸಿಟ್ಟಾಗುವಂತೆ ಮಾಡಿದೆ.
ನಿನ್ನೆ ಬೆಳಗ್ಗೆ ದೆಹಲಿಯಿಂದ ವಾಪಸ್ಸಾಗಿರುವ ರಾಜ್ಯ ನಾಯಕರು ತುಮಕೂರಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಡಿಕೆಶಿ ಹಾಗೂ ಸಿದ್ದರಾಮಯ್ಯ ಸಮಾರಂಭದಲ್ಲಿ ಭಾಗಿಯಾಗಿದ್ದರೂ ಸಹ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಎಲ್ಲಿಯೂ ಚರ್ಚೆ ಮಾಡಿಲ್ಲ. ದೆಹಲಿಯಲ್ಲಿ ವರಿಷ್ಠರ ಎದುರೇ ತಮ್ಮ ಅಸಮಾಧಾನವನ್ನು ಪರಸ್ಪರ ಹೊರ ಹಾಕಿಕೊಂಡಿದ್ದ ರಾಜ್ಯನಾಯಕರು ಅಲ್ಲಿಂದ ಹಿಂದಿರುಗಿದ ನಂತರ ತೀರ್ಮಾನ ಕೈಗೊಳ್ಳುವಲ್ಲಿ ಇದುವರೆಗೂ ಸಫಲರಾಗಿಲ್ಲ ಎನ್ನಲಾಗಿದೆ.
ರಾಜ್ಯಸಭೆಯ ಒಂದು ಹಾಗು ವಿಧಾನ ಪರಿಷತ್ತಿನ ಎರಡು ಸ್ಥಾನಗಳಿಗೆ ನೂರಕ್ಕೂ ಹೆಚ್ಚು ಆಕಾಂಕ್ಷಿಗಳು ಕಾದಿದ್ದಾರೆ ಎಂದು ಹೇಳಿಕೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಆಕಾಂಕ್ಷಿಗಳ ಒತ್ತಡ ಹೆಚ್ಚಿದೆ ಎಂಬುದನ್ನು ಒಪ್ಪಿಕೊಂಡಿದ್ದರು. ಸಿದ್ದರಾಮಯ್ಯ ಸಹ ದಿಲ್ಲಿಯಲ್ಲೇ ಮಾತನಾಡಿದ್ದು, ಹೈಕಮಾಂಡ್ ನಾಯಕರ ಸಲಹೆಯ ಮೇರೆಗೆ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಪಟ್ಟಿಯನ್ನು ಕಳುಹಿಸಿಕೊಡುತ್ತೇವೆ ಎಂದು ತಿಳಿಸಿದ್ದರು.
ಇದನ್ನೂ ಓದಿ: ಪರಿಷತ್,ರಾಜ್ಯಸಭೆ ಅಭ್ಯರ್ಥಿಗಳ ಆಯ್ಕೆ ಕುರಿತು ನಾಳೆ ಕೋರ್ ಕಮಿಟಿ ಸಭೆ: ಸಿಎಂ ಬೊಮ್ಮಾಯಿ
ಆದರೆ, ಇದುವರೆಗೂ ರಾಜ್ಯ ನಾಯಕರಿಂದ ಪಟ್ಟಿ ಕಳುಹಿಸಿಕೊಡಲು ಸಾಧ್ಯವಾಗಿಲ್ಲ. ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣಾ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಸಮೀಪಿಸುತ್ತಿದೆ. ರಾಷ್ಟ್ರೀಯ ಪಕ್ಷಗಳು ಇದುವರೆಗೂ ಅಭ್ಯರ್ಥಿಯ ಹೆಸರು ಘೋಷಿಸಿಲ್ಲ. ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಹೇಳಿಕೆ ನೀಡಿದ್ದು ಅವರೂ ಅಭ್ಯರ್ಥಿಯನ್ನು ಘೋಷಿಸಿಲ್ಲ.
ಕಾಂಗ್ರೆಸ್ ಗೆಲ್ಲಲು ಅವಕಾಶವಿರುವ ರಾಜ್ಯಸಭೆಯ ಒಂದು ಸ್ಥಾನಕ್ಕೆ ನಾಮಪತ್ರಸಲ್ಲಿಕೆಗೆ ಮೇ 31ರವರೆಗೂ ಕಾಲಾವಕಾಶ ಇದೆ. ಆದರೆ ವಿಧಾನ ಪರಿಷತ್ನ 2 ಸ್ಥಾನಕ್ಕೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ನಾಳೆ ಸಂಜೆಯೊಳಗೆ ನಾಮಪತ್ರ ಸಲ್ಲಿಕೆ ಮಾಡಬೇಕಿದೆ. ಶತಾಯಗತಾಯ ಇಂದು ಸಂಜೆಯೊಳಗೆ ಅಭ್ಯರ್ಥಿಯ ಆಯ್ಕೆಯನ್ನು ಅಂತಿಮವಾಗಿ ಹೈಕಮಾಂಡ್ ನಾಯಕರಿಗೆ ಕಳುಹಿಸಿಕೊಟ್ಟು ಅವರ ಮೂಲಕ ಪಟ್ಟಿ ಬಿಡುಗಡೆ ಮಾಡಿಸಿ ಕೊಳ್ಳಬೇಕಿದೆ.
ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ರಾಜ್ಯ ನಾಯಕರ ನಡುವೆ ಉಂಟಾದ ಗೊಂದಲ ಪರಿಹರಿಸುವ ಉದ್ದೇಶಕ್ಕೆ ರಾಷ್ಟ್ರೀಯ ನಾಯಕರು ಡಿಕೆಶಿ ಹಾಗೂ ಸಿದ್ದರಾಮಯ್ಯರನ್ನು ಕರೆಸಿಕೊಂಡಿದ್ದರು. ಅಲ್ಲಿ ಸಾಕಷ್ಟು ಮಾರ್ಗದರ್ಶನ ನೀಡಿ ಕಳುಹಿಸಿರುವ ರಾಷ್ಟ್ರೀಯ ನಾಯಕರು ರಾಜ್ಯ ನಾಯಕರಿಂದ ಪಟ್ಟಿ ನಿರೀಕ್ಷಿಸುತ್ತಿದ್ದಾರೆ. ಆದರೆ, ರಾಜ್ಯ ನಾಯಕರ ವಿಳಂಬ ಹೈಕಮಾಂಡ್ ನಾಯಕರನ್ನು ಸಿಟ್ಟಾಗುವಂತೆ ಮಾಡಿದೆ. ತ್ವರಿತವಾಗಿ ಪಟ್ಟಿ ಕಳುಹಿಸಿಕೊಡುವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಮೂಲಕ ರಾಷ್ಟ್ರೀಯ ನಾಯಕರು ಡಿಕೆಶಿ ಹಾಗೂ ಸಿದ್ದರಾಮಯ್ಯಗೆ ಸೂಚನೆ ರವಾನಿಸಿದ್ದಾರೆ ಎನ್ನಲಾಗಿದೆ.
ಹೆಚ್ಚಿದ ಆಕಾಂಕ್ಷಿಗಳ ಒತ್ತಡ: ವಿಧಾನ ಪರಿಷತ್ನ 2 ಸ್ಥಾನಗಳಿಗೆ ಹಾಗೂ ರಾಜ್ಯಸಭೆಯ 1 ಸ್ಥಾನಕ್ಕೆ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಅವಕಾಶವಿದ್ದು ಇದಕ್ಕೆ ಆಕಾಂಕ್ಷಿಗಳ ಒತ್ತಡ ದೊಡ್ಡ ಮಟ್ಟದಲ್ಲಿದೆ. ನಾವು ಸಹ ಎಲ್ಲರ ಮನವೊಲಿಸಿ ಒಮ್ಮತದ ಅಭ್ಯರ್ಥಿಯ ಆಯ್ಕೆಗೆ ಪ್ರಯತ್ನ ನಡೆಸಿದ್ದೇವೆ. ನಾಳೆ ಸಂಜೆಯ ಒಳಗೆ ನಾಮಪತ್ರ ಸಲ್ಲಿಕೆ ಮಾಡಬೇಕಿದ್ದು, ಹಿಂದೆ ಹೈಕಮಾಂಡ್ ಮೂಲಕ ಅಂತಿಮ ಪಟ್ಟಿಯನ್ನು ಘೋಷಿಸಿಕೊಳ್ಳಲಿದ್ದೇವೆ. ಗೊಂದಲ ರಹಿತವಾಗಿ ಪಟ್ಟಿ ಅಂತಿಮಗೊಳಿಸುವುದು ನಮ್ಮ ಗುರಿಯಾಗಿದೆ ಎಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ತಿಳಿಸಿದ್ದಾರೆ.
ಇದನ್ನೂ ಓದಿ: 'ವಾಹ್..! ನೀನು ಇದನ್ನು ಹೇಗೆ ಕಲಿತೆ?': ಜಪಾನಿ ಬಾಲಕನ ಮಾತಿನಿಂದ ಸಂತಸಗೊಂಡ ಮೋದಿ