ಬೆಂಗಳೂರು: ವಿಧಾನ ಪರಿಷತ್ ಕಲಾಪ ಏಕಾಏಕಿ ಅನಿರ್ದಿಷ್ಟಾವದಿಗೆ ಮಂದೂಡಿಕೆ ಮಾಡಿದ್ದು ಸರಿಯಲ್ಲ. ಹಾಗಾಗಿ ಮಂಗಳವಾರ ಮತ್ತೆ ಪರಿಷತ್ ಕಲಾಪ ನಡೆಸಲು ನಿರ್ಧರಿಸಿದ್ದು, ಪರಿಷತ್ ಅಧಿವೇಶನ ಕರೆಯಲು ರಾಜ್ಯಪಾಲರಿಗೆ ಮನವಿ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಬಿಜೆಪಿಯ ಬಹುಮುಖ್ಯ ಅಜೆಂಡಾದಲ್ಲಿ ಒಂದಾಗಿದ್ದ ಕರ್ನಾಟಕ ಗೋಹತ್ಯೆ ನಿಯಂತ್ರಣ ಮತ್ತು ಜಾನುವಾರು ಸಂರಕ್ಷಣೆ ವಿಧೇಯಕ 2020ಕ್ಕೆ ಅಂಗೀಕಾರ ಸಿಕ್ಕ ಹಿನ್ನೆಲೆಯಲ್ಲಿ ಇಂದು ಸರ್ಕಾರಿ ನಿವಾಸದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಗೋ ಪೂಜೆ ನೆರವೇರಿಸಿದರು. ಪುತ್ರ ಬಿ.ವೈ ರಾಘವೇಂದ್ರ, ವಿಜಯೇಂದ್ರ ಸೇರಿದಂತೆ ಕುಟುಂಬ ಸದಸ್ಯರ ಜೊತೆಗೂಡಿ ಗೋಪೂಜೆ ನೆರವೇರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿರುವುದರಿಂದ ನೂರಕ್ಕೆ ತೊಂಭತ್ತರಷ್ಟು ಜನ ಸಮಾಧಾನ ಪಟ್ಟಿದ್ದಾರೆ. ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿಯೂ ಇದನ್ನು ಹೇಳಿದ್ದೆವು. 2010 ಬರಲ್ಲಿ ಬಿಲ್ ಪಾಸ್ ಮಾಡಿದಿದ್ದೆವು. ಆದರೆ, ಕಾರಣಗಳಿಂದಾಗಿ ರಾಜ್ಯಪಾಲರು ಜಾರಿಗೆ ತಂದಿರಲಿಲ್ಲ ಈಗ ಜಾರಿಗೆ ತರಲಿದ್ದೇವೆ ಎಂದರು.
ಸುಗ್ರೀವಾಜ್ಞೆ ಮೂಲಕ ಗೋಹತ್ಯೆ ಕಾಯ್ದೆ ಜಾರಿ:
ವಿಧಾನಸಭೆಯಲ್ಲಿ ಅಂಗೀಕಾರವಾಗಿರುವ ಗೋಹತ್ಯೆ ವಿಧೇಯಕ ವಿಧಾನ ಪರಿಷತ್ನಲ್ಲಿ ಮಂಡನೆಯಾಗಿಲ್ಲ. ಹಾಗಾಗಿ ಸುಗ್ರೀವಾಜ್ಞೆ ಮೂಲಕ ಕಾಯ್ದೆಯನ್ನು ಜಾರಿಗೊಳಿಸಲಾಗುತ್ತದೆ. ಪರಿಷತ್ನಲ್ಲಿ ಸಭಾಪತಿಗಳು ಸಹಕಾರ ಕೊಡುತ್ತಿರಲಿಲ್ಲ. ಹಾಗಾಗಿ ಸುಗ್ರೀವಾಜ್ಞೆ ಮೂಲಕ ಕಾನೂನು ತರುವಂತಹ ಕೆಲಸವನ್ನು ಮಾಡುತ್ತೇವೆ ಎಂದರು.
ಮಂಗಳವಾರ ಮತ್ತೆ ಅಧಿವೇಶನ:
ಮಂಗಳವಾರ ಮತ್ತೊಮ್ಮೆ ಅಧಿವೇಶನ ಕರೆಯಬೇಕು ಎಂದು ತೀರ್ಮಾನ ಮಾಡಿದ್ದೇವೆ. ರಾಜ್ಯಪಾಲರಿಗೆ ಈ ಬಗ್ಗೆ ಮನವಿ ಮಾಡುತ್ತೇವೆ ಈ ರೀತಿ ಏಕಾಏಕಿ ಅಧಿವೇಶನ ಮುಂದೂಡುವ ಅಧಿಕಾರ ಸಭಾಪತಿಗಳಿಗೆ ಇಲ್ಲ, ಬಿಎಸಿ ಸಭೆಯಲ್ಲಿ ಮಂಗಳವಾರ, ಬುಧವಾರದವರೆಗೂ ಅಧಿವೇಶನ ನಡೆಸಲು ನಿರ್ಧರಿಸಲಾಗಿತ್ತು, ಸಭಾಪತಿಗಳು ಕೂಡ ಸಭೆಯಲ್ಲಿದ್ದರು. ಆದರೂ ಸದನ ಅನಿರ್ದಿಷ್ಟಾವಧಿಗೆ ಏಕಾಏಕಿ ಮುಂದೂಡಿದ್ದಾರೆ. ಹಾಗಾಗಿ ಮಂಗಳವಾರ ಅಧಿವೇಶನ ಕರೆಯಲು ರಾಜ್ಯಪಾಲರಿಗೆ ಮನವಿ ಮಾಡುತ್ತೇವೆ ಎಂದರು.
ಸಾರಿಗೆ ಸಿಬ್ಬಂದಿ ಮುಷ್ಕರ ಬಿಡಬೇಕು:
ಸಾರಿಗೆ ಸೌಕರರು ವಾಸ್ತವ ಸ್ಥಿತಿ ಅರ್ಥಮಾಡಿಕೊಳ್ಳಬೇಕು, ಕೊರೊನಾ, ನೆರೆ ಹಾನಿಯಿಂದ ಸಂಕಷ್ಟದಲ್ಲಿದ್ದೇವೆ. ಈಗಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಿ, ಗೊಂದಲ ಉಂಟುಮಾಡದೇ ದಯಮಾಡಿ ವಾಪಸ್ ಹೋಗಿ ತಮ್ಮ ಕೆಲಸ ಕಾರ್ಯಗಳಲ್ಲಿ ಭಾಗವಹಿಸಿ ಎಂದು ಪ್ರತಿಭಟನಾನಿರತ ಸಾರಿಗೆ ಸಿಬ್ಬಂದಿಗೆ ಸಿಎಂ ಮನವಿ ಮಾಡಿದರು. ಈಗಾಗಲೇ ಸಂಬಂಧಪಟ್ಟ ಸಚಿವರು ಸಾರಿಗೆ ಸಿಬ್ಬಂದಿ ಜೊತೆ ಮಾತನಾಡಿದರೆ ಮತ್ತೊಮ್ಮೆ ಮನವಿ ಮಾಡುತ್ತೇನೆ ಸಹಕಾರ ಕೊಡಿ ಎಂದು ಮನವಿ ಮಾಡಿದರು.