ಬೆಂಗಳೂರು: ಭೋಜನ ವಿರಾಮದ ನಂತರ ವಿಧಾನ ಪರಿಷತ್ ಕಲಾಪ ಸಮಾವೇಶಗೊಂಡಾಗ ಭಾರತ ಸಂವಿಧಾನದ ಮೇಲೆ ಬಿಜೆಪಿಯ ವೈ.ಎ. ನಾರಾಯಣಸ್ವಾಮಿ ಭಾಷಣ ಆರಂಭಿಸಿದರು. 70 ವರ್ಷಗಳ ಬಳಿಕ ಸಂವಿಧಾನವನ್ನು ಪುನರ್ ಮನನ ಮಾಡಿಕೊಳ್ಳುತ್ತಿರುವುದು ಪ್ರಶಂಸನೀಯ, ಸಂವಿಧಾನ ಈ ನೆಲದ ಶ್ರೇಷ್ಠ ಗ್ರಂಥ ಎಂದು ಬಣ್ಣಿಸಿದರು.
ಸಂವಿಧಾನದ ಮಹತ್ವವನ್ನು ಮುಂದಿನ ಪೀಳಿಗೆಗೆ ಗಟ್ಟಿಯಾಗಿ ಉಳಿಸಿಕೊಳ್ಳದೇ ಇದ್ದಲ್ಲಿ ಭವಿಷ್ಯದ ಪೀಳಿಗೆ ಕಷ್ಟ ಎದುರಿಸಬೇಕಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಸಂವಿಧಾನದ ಉದ್ದೇಶಗಳು ನಮ್ಮ ಸ್ವಾರ್ಥ ಸಾಧನೆಗಾಗಿ, ಜನಸಾಮಾನ್ಯರ ಜೊತೆ ಬದುಕಿನ ಚೆಲ್ಲಾಟವಾಡಲು ಉಪಯೋಗವಾಗುತ್ತಿವೆ. ಇಂದಿಗೂ ಸಮ ಸಮಾಜ ನಿರ್ಮಾಣ ಕನಸಾಗಿಯೇ ಉಳಿದಿದೆ. ಸಂವಿಧಾನದ ಬಗ್ಗೆ ಪಶ್ಚಾತ್ತಾಪ ಪಡುವಂತಾಗಿದೆ ಎಂದು ನಾರಾಯಣಸ್ವಾಮಿ ಕಳವಳ ವ್ಯಕ್ತಪಡಿಸಿದರು.
ಬೇಲಿಯೇ ಎದ್ದು ಹೊಲ ಮೇಯ್ದಂತಾಗುತ್ತಿದೆ. ಸ್ವಾತಂತ್ರ್ಯ ಬಳಿಕ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬಲಿಯಾಗುತ್ತಿದ್ದೇವೆ. ಸಂವಿಧಾನ ಬಂದ ನಂತರ ನಿರೀಕ್ಷಿತ ಮಟ್ಟ ತಲುಪಿಲ್ಲ ಎಂದಾಗ, ಮಧ್ಯಪ್ರವೇಶಿಸಿದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಎಪ್ಪತ್ತು ವರ್ಷಗಳಾದರೂ ಸಹ ಮೀಸಲಾತಿ ಇನ್ನೂ ಗುರಿಮುಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮೀಸಲಾತಿ ಜಾರಿಗೊಳಿಸುವವರ ಮನಸ್ಥಿತಿ ಸರಿಯಾಗಿರದಿದ್ದಲ್ಲಿ ಅದು ನಿರ್ದಿಷ್ಟ ಗುರಿ ತಲುಪದು. ಮೀಸಲಾತಿ ಜಾರಿಗೆ ಬಂದಾಗಿನಿಂದಲೂ ಕಾಗದದಲ್ಲಿಯೇ ಉಳಿದುಕೊಂಡಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಈ ಮಧ್ಯೆ ನಾರಾಯಣಸ್ವಾಮಿ, ಸದನದಲ್ಲಿ ರಾಜಕೀಯ ಮುತ್ಸದ್ಧಿಗಳಿದ್ದಾರೆ. ಜೆಡಿಎಸ್ನ ಶ್ರೀಕಂಠೇಗೌಡರು ರಾಜ್ಯ ಶಾಸ್ತ್ರದ ಉಪನ್ಯಾಸಕರಾದರೆ, ನಿಂಗಪ್ಪ ರಾಜ್ಯಶಾಸ್ತ್ರದ ವಿದ್ಯಾರ್ಥಿಗಳು. ತೇಜಸ್ವಿನಿಗೌಡ ರಾಜ್ಯಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದವರು. ಇಂತಹವರ ಮಧ್ಯೆ ಮಾತನಾಡುವುದು ಅಷ್ಟು ಸುಲಭವಲ್ಲ ಎಂದಾಗ ಕೆಲವು ಸದಸ್ಯರು ನೀವು ಪಿಹೆಚ್‌ಡಿ ಪಡೆದವರೇ ಎಂದರು. ಬಿಜೆಪಿಯ ತೇಜಸ್ವಿನಿಗೌಡ ಹಾಗೂ ಪ್ರಾಣೇಶ್, ಆಯನೂರು ಮಂಜುನಾಥ್ ಅವರೇ ಒಂದು ವಿಶ್ವವಿದ್ಯಾಲಯವಿದ್ದಂತೆ. ನಾಲ್ಕು ಸದನಗಳನ್ನು ನೋಡಿದ ಹಿರಿಯರು ನಮ್ಮ ನಡುವೆ ಇರುವುದು ಇದರ ಹೆಮ್ಮೆ ಎಂದರು. ಇದಕ್ಕೆ ವಿಪಕ್ಷ ಎಸ್.ಆರ್.ಪಾಟೀಲ್, ಆಯನೂರು ಮಂಜುನಾಥ್ ಮೇಲ್ಮನೆಯಲ್ಲಿರುವುದು ಸದನದ ಹೆಮ್ಮೆ ಎಂದರು.