ಬೆಂಗಳೂರು: ಮರಿ ಕೋತಿಗೆ ಜನ್ಮ ನೀಡಿದ ಮರುಗಳಿಗೆಯಲ್ಲೇ ಗಾಯಗೊಂಡಿದ್ದ ಕೋತಿ ಸಾವನ್ನಪ್ಪಿರುವ ಘಟನೆ ಯಶವಂತಪುರದ ಬಳಿ ನಡೆದಿದೆ.
ಯಶವಂತಪುರದ ಟಿಕೆ ಕಂಪನಿಯ ಟೆರೇಸ್ ಮೇಲೆ ಮರಿ ಹಾಕಿದ ಬೆನ್ನಲ್ಲೇ ತಾಯಿ ಕೋತಿ ಕೊನೆಯುಸಿರೆಳೆದಿದೆ. ಕೂಡಲೇ ಕಂಪನಿಯ ಸಿಬ್ಬಂದಿ ಪಾಲಿಕೆಯ ಗಮನಕ್ಕೆ ತಂದಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ವನ್ಯಜೀವಿ ರಕ್ಷಣಾ ತಂಡದ ಪ್ರಸನ್ನಕುಮಾರ್ ಹಾಗೂ ಪ್ರೀತಮ್, ತಾಯಿಯ ಹೊಕ್ಕಳ ಬಳ್ಳಿ ಕತ್ತರಿಸಿ ಕೋತಿ ಮರಿಯನ್ನು ರಕ್ಷಿಸಿದ್ದಾರೆ.
ಬಳಿಕ ಕೆಂಗೇರಿಯ ವನ್ಯಜೀವಿ ಪುನರ್ವಸತಿ ಕೇಂದ್ರದಲ್ಲಿ ಮರಿಯನ್ನು ಆರೈಕೆ ಮಾಡಲಾಗ್ತಿದ್ದು, ಹಸುವಿನ ಹಾಲನ್ನು ಕುಡಿಸಲಾಗುತ್ತಿದೆ. ಮೃತಪಟ್ಟ ಕೋತಿಯ ಅಂತ್ಯ ಸಂಸ್ಕಾರ ಮಾಡಲಾಗಿದೆ. ಈ ಬಗ್ಗೆ ಪಾಲಿಕೆ ಆಯುಕ್ತರು ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದಾರೆ.