ಬೆಂಗಳೂರು: ಐಟಿ-ಬಿಟಿ ಸಂಸ್ಥೆಗಳಿಗೆ ಮೂರು- ನಾಲ್ಕು ತಿಂಗಳು ಹೊಸ ವ್ಯವಹಾರಗಳು ಸಿಗುವುದು ಕಷ್ಟ. ಹೀಗಾಗಿ ಸಂಬಳದಲ್ಲಿ ಕಡಿತ ಮಾಡಲಾಗುತ್ತದೆಯೇ ಹೊರತು ಕೆಲಸದಿಂದ ವಜಾ ಮಾಡಲಾವುದಿಲ್ಲ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಸ್ಪಷ್ಟನೆ ನೀಡಿದ್ದಾರೆ.
ಇಂದು ಐಟಿ- ಬಿಟಿ ಕ್ಷೇತ್ರದ ಪ್ರಮುಖರ ಜೊತೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ನಲ್ಲಿ ವಿಷನ್ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಮ್ದಾರ್ ಶಾ ಸೇರಿದಂತೆ ಐಟಿ ಬಿಟಿ ಕ್ಷೇತ್ರದ ಪ್ರಮುಖರು ಭಾಗಿಯಾಗಿದ್ದರು. ಇವರೊಂದಿಗೆ ನಡೆಸಿದ ಚರ್ಚೆಯಲ್ಲಿ ಐಟಿ-ಬಿಟಿ ಕ್ಷೇತ್ರ ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಉದ್ಯೋಗಿಗಳ ಕಷ್ಟಗಳನ್ನು ಗಮನಿಸಿ ಸಂಸ್ಥೆಗಳು ನೌಕರರನ್ನು ಕೆಲಸದಿಂದ ವಜಾಗೊಳಿಸಲಾಗದು. ಬದಲಾಗಿ 20 ರಿಂದ 40 ರಷ್ಟು ಹಣವನ್ನು ಕಡಿತಗೊಳಿಸಬಹುದು ಎಂಬುದರ ಬಗ್ಗೆ ಚರ್ಚೆ ನಡೆಸಿದ್ರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ್, ಐಟಿ-ಬಿಟಿ ಸಂಸ್ಥೆಗಳಿಗೆ ಮೂರು, ನಾಲ್ಕು ತಿಂಗಳು ಹೊಸ ವ್ಯವಹಾರಗಳು ಸಿಗುವುದು ಕಷ್ಟವಾಗಿರುತ್ತದೆ. ಹೀಗಾಗಿ ಸಂಬಳದಲ್ಲಿ ಕಡಿತ ಮಾಡಿ, ನೌಕರರನ್ನು ಕಷ್ಟ ಕಾಲದಲ್ಲಿ ಕೈ ಹಿಡಿಯುವ ಕೆಲಸ ಆಗಬೇಕು. ಕೆಲಸದಿಂದ ವಜಾ ಆಗಿದ್ದರೆ ಹೊಸ ಕೆಲಸ ಈ ಸಂದರ್ಭದಲ್ಲಿ ಸಿಗುವುದು ಕಷ್ಟವಾಗುತ್ತದೆ. ಐಟಿ-ಬಿಟಿ ಕ್ಷೇತ್ರಕ್ಕೆ ಯಾವುದೇ ಕಟ್ಟುನಿಟ್ಟಿನ ನಿಯಮಗಳು ಇಲ್ಲ. ಆದರೆ ಸಂಸ್ಥೆಯ ಮುಖ್ಯಸ್ಥರು ಸ್ವ-ಇಚ್ಛೆಯಿಂದ ಹಾಗೂ ವಿಶ್ವಾಸದಿಂದ ಈ ಕ್ರಮವನ್ನು ಅನುಸರಿಸಲಿದ್ದಾರೆ ಎಂದು ತಿಳಿಸಿದರು.