ಬೆಂಗಳೂರು: ಕನ್ನಡ ಬಾವುಟದ ಬಗ್ಗೆ ಅಪಮಾನ ಮಾಡಿದ ರೋಹಿತ್ ಚಕ್ರತೀರ್ಥ ವಿರುದ್ಧ ಹೋರಾಟ ಮಾಡಬೇಕು. ಆತ ಕನ್ನಡ ಬಾವುಟ ಅಂಡರ್ ವೇರ್ಗೆ ಹೋಲಿಸಿದ್ದ. ಕನ್ನಡ ಸಂಘಟನೆಗಳು ಏನು ಮಾಡುತ್ತಿವೆ. ನಾನು ಕರೆ ಕೊಡ್ತೇನೆ ಕನ್ನಡ ನೆಲ, ಜಲ ಉಳಿಸಿಕೊಳ್ಳಬೇಕಾದರೆ ಹೋರಾಡಿ. ಕನ್ನಡಪರ ಸಂಘಟನೆಗಳು ಏನು ಮಾಡುತ್ತಿವೆ? ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕರೆ ನೀಡಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಇದರ ವಿರುದ್ಧ ಹೋರಾಟ ಮಾಡಬೇಕು. ನಮ್ಮ ಕನ್ನಡಧ್ವಜ ಉಳಿಸಿಕೊಳ್ಳಬೇಕು. ನಾವು ಮಾತನಾಡಿದರೆ ಕಾಂಗ್ರೆಸ್ನವರದ್ದು ಅಂತಾರೆ. ಇವರೇನು ಗೂಟ ಹೊಡೆದು ಕೂರ್ತಾರಾ?. ರಾಷ್ಟ್ರೀಯ ಶಿಕ್ಷಣ ನೀತಿ ಇಲ್ಲಿ ಏಕೆ ತಂದಿದ್ದು, ಯುಪಿಯಲ್ಲಿ ಯಾಕೆ ಮೊದಲು ತರುತ್ತಿಲ್ಲ. ಮಧ್ಯಪ್ರದೇಶದಲ್ಲಿ ಯಾಕೆ ತರಲಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದರು.
ಹೊಸ ಶಿಕ್ಷಣ ನೀತಿಯ ಅವಶ್ಯಕತೆಯೇ ಇಲ್ಲ: ದೇಶದಲ್ಲಿ ಇಷ್ಟು ದೊಡ್ಡ ಮಟ್ಟದ ವಿಶ್ವವಿದ್ಯಾನಿಲಯಗಳು, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿದ್ದರೂ ವಿದೇಶಗಳ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದರೂ, ಇಡಿ ವಿಶ್ವವೇ ನಮ್ಮ ಶಿಕ್ಷಣ ನೀತಿಯನ್ನು ಹೋಗಳುತ್ತಿರುವಾಗ ಈಗ ಇಲ್ಲಿನ ಶಿಕ್ಷಣ ನೀತಿಯನ್ನು ಬದಲಿಸಲು ಮುಂದಾಗಿದ್ದಾರೆ.
ಇಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿ ವ್ಯಾಸಂಗ ಮಾಡಿ ವಿಶ್ವದ ಪ್ರತಿಷ್ಠಿತ ವಿಶ್ವ ವಿದ್ಯಾಲಯಗಳಲ್ಲಿ ಅನೇಕರು ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ನಾವು ಅವರಿಗೆ ಕೊಟ್ಟ ಶಿಕ್ಷಣ ಉತ್ತಮವಾಗಿರಲಿಲ್ಲವೇ? ಈಗ ಹೊಸದಾಗಿ ನಾಲ್ಕು ಶಿಕ್ಷಣ ನೀತಿಯನ್ನು ತರುತ್ತಿದ್ದಾರೆ ಎಂದ ವಾಗ್ದಾಳಿ ನಡೆಸಿದರು.
ಜೂನ್ ಎರಡು ಹಾಗೂ ಮೂರರಂದು ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರೆಲ್ಲ ಸೇರಿ ಚರ್ಚೆ ಮಾಡಿ, ಈ ರಾಜ್ಯವನ್ನು ನಾವು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕು ಎಂದು ತೀರ್ಮಾನ ಕೈಗೊಳ್ಳುತ್ತೇವೆ. ನೆಹರು ಅವರು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ, ಇಡೀ ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಅಡಿಪಾಯ ಹಾಕಿಕೊಟ್ಟಿದ್ದಾರೆ ಎಂದರು.
ಇದನ್ನೂ ಓದಿ: ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಗೆ ನಾನು ತಟಸ್ಥ: ಸುಮಲತಾ ಅಂಬರೀಶ್