ಬೆಂಗಳೂರು : ಸಮಾಜದಲ್ಲಿ ಅಶಾಂತಿ ಮೂಡಿಸಲು, ರಾಜಕೀಯದ ಗುರಿ ಇಟ್ಟುಕೊಂಡು ಒಂದು ಧರ್ಮದ ಮೇಲೆ ಪ್ರಯೋಗ ಮಾಡಲಾಗುತ್ತಿದೆ. ಚುನಾವಣೆ ಹತ್ತಿರ ಬಂದಾಗ ರಾಜಕೀಯ ಸಾಧನೆಗಳೇನು ಇಲ್ಲದ ಕಾರಣ ಈ ರೀತಿ ಧಾರ್ಮಿಕ ವಿಚಾರಗಳನ್ನು ತಂದು ಭಾವನಾತ್ಮಕ ರಾಜಕೀಯ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು, ನಿನ್ನೆ ಪಶುಸಂಗೋಪನಾ ಇಲಾಖೆಯಿಂದ ಆದೇಶ ಹೊರಡಿಸಿ, ಪೊಲೀಸ್ ಹಾಗೂ ಇತರ ಅಧಿಕಾರಿಗಳು ಸೇರಿ ಕೋಳಿ, ಕುರಿ ವ್ಯಾಪಾರ ನಡೆಸುತ್ತಿರುವವರ ಮೇಲೆ ನಿಯಂತ್ರಣ ಮಾಡಲು ಹೊರಟಿದ್ದಾರೆ. ಬೆಂಗಳೂರು ಹಾಗೂ ಇತರ ಎಲ್ಲಾ ಕಡೆಗಳಲ್ಲಿ ಇನ್ನು ಮುಂದೆ ಮಾಂಸದ ವ್ಯಾಪಾರ ಮಾಡುವವರು ಪ್ರಾಣಿ ವಧೆ ಮಾಡುವ ಮುನ್ನ ಸ್ಟನಿಂಗ್ (ಪ್ರಜ್ಞೆ ತಪ್ಪಿಸುವ) ಮಾಡಬೇಕು. ಇನ್ನು ಮುಂದೆ ಎಲ್ಲ ವ್ಯಾಪಾರಿಗಳು ಇದನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ವ್ಯವಸ್ಥೆ ಇದ್ದರಷ್ಟೇ ಇನ್ನು ಮುಂದೆ ಪರವಾನಿಗೆ ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ ಎಂದರು.
ಇಡೀ ರಾಜ್ಯದ ರೈತರು ಕೋಳಿ, ಕುರಿ, ಮೇಕೆಗಳನ್ನು ಸಾಕುತ್ತಾರೆ. ಅವುಗಳನ್ನು ಉಪಕಸುಬಾಗಿ ಮಾಡುತ್ತಿದ್ದಾರೆ. ಮಾಂಸದ ವ್ಯಾಪಾರ ಮಾಡುವವರಿಗೆ ರೈತರು ತಾವು ಸಾಕಿದ ಕೋಳಿ, ಕುರಿಗಳನ್ನು ಮಾರಾಟ ಮಾಡುತ್ತಾರೆ. ಕೆಲವರು ಹಲಾಲ್ ಮಾಡುತ್ತಾರೆ, ಮತ್ತೆ ಕೆಲವರು ಹಲಾಲ್ ಮಾಡುವುದಿಲ್ಲ. ಇದು ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ.
ಈ ದೇಶದಲ್ಲಿ ಯಾರು ಹೇಗೆ ಬದುಕಬೇಕು, ಯಾರು ಏನನ್ನು ತಿನ್ನಬೇಕು ಎಂಬುದು ಸಾವಿರಾರು ವರ್ಷಗಳಿಂದ ಪರಂಪರೆಯಾಗಿ ನಡೆದುಕೊಂಡು ಬಂದಿದೆ. ಅವರೆಲ್ಲ ಅನಾದಿ ಕಾಲದಿಂದ ವ್ಯಾಪಾರ ಮಾಡಿಕೊಂಡು ಬಂದಿದ್ದಾರೆ. ಈ ಹಿಂದೆ ವಸ್ತುಗಳ ವಿನಿಮಯ ವ್ಯಾಪಾರ ಪದ್ಧತಿ ಕೂಡ ಇತ್ತು ಎಂದರು.
ಒಬ್ಬೊಬ್ಬರು ಒಂದೊಂದು ವ್ಯಾಪಾರ ಮಾಡುತ್ತಿದ್ದಾರೆ. ಒಬ್ಬರು ತಮ್ಮ ವ್ಯಾಪಾರ ಬಿಟ್ಟು ಬೇರೆಯದನ್ನು ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ, ನಮ್ಮ ರೈತರು, ವರ್ತಕರು, ಅವರು ಯಾವುದೇ ಸಮುದಾಯದವರಿರಲಿ, ತಮ್ಮ ಬದುಕನ್ನು ಯಾವ ರೀತಿ ನಡೆಸಿಕೊಂಡು ಹೋಗುತ್ತಿದ್ದಾರೋ ಅದರಂತೆ ಸಾಗಲು ಸರ್ಕಾರ ಅವಕಾಶ ನೀಡಬೇಕು. ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ. ಇದನ್ನು ಹಾಳು ಮಾಡುವುದು ಬೇಡ. ಈ ಹೊಸತೊಡುಕು ಆಚರಣೆಯನ್ನು ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿದ್ದೇವೆ ಎಂದರು.
ರೈತರ ಬೆಂಬಲಕ್ಕೆ ಕಾಂಗ್ರೆಸ್: ಇಷ್ಟು ದಿನಗಳ ಕಾಲ ಮಾಂಸ ವ್ಯಾಪಾರ ಮಾಡುವವರು ಇಂತಿಷ್ಟು ದರ ಎಂದು ಹಾಕುತ್ತಿದ್ದರು. ಈಗ ಅವರ ಸ್ಥಿತಿ ಏನಾಗಿದೆ ಎಂದು ಹೋಗಿ ನೋಡಿ. ಆರ್‌ಎಸ್‌ಎಸ್, ಬಿಜೆಪಿಯವರ ಈ ಆದೇಶಕ್ಕೆ ಯಾರೂ ಅಂಜಿಕೊಳ್ಳಬೇಡಿ. ರೈತರು ಹಾಗೂ ವ್ಯಾಪಾರಿಗಳ ಪರವಾಗಿ ಕಾಂಗ್ರೆಸ್ ಪಕ್ಷ ನಿಲ್ಲಲಿದೆ. ರೈತರು ಹಾಗೂ ವ್ಯಾಪಾರಿಗಳು ಸಮಾಜದಲ್ಲಿ ಒಂದಕ್ಕೊಂದು ಕೊಂಡಿಯಾಗಿ ಬೆಸೆದುಕೊಂಡಿದ್ದು, ನಾವು ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ. ನಿಮಗೆ ಏನಾದರೂ ತೊಂದರೆ ಆದರೆ ನಮಗೆ ತಿಳಿಸಿ ಎಂದರು.
ಪ್ರಮಾಣ ವಚನ ಮರೆಯಬೇಡಿ : ನಾನು ಮುಖ್ಯಮಂತ್ರಿಗಳಿಗೆ ಕೈ ಮುಗಿದು ಬೇಡಿಕೊಳ್ಳುತ್ತೇನೆ, ನೀವು ಸಂವಿಧಾನದ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಅದಕ್ಕೆ ಗೌರವ ನೀಡಿ. ಎಲ್ಲರನ್ನು ಒಟ್ಟಾಗಿ ಸೌಹಾರ್ದತೆಯಿಂದ ತೆಗೆದುಕೊಂಡು ಹೋಗುತ್ತೇವೆ ಎಂದು ಪ್ರಮಾಣ ಮಾಡಿದ್ದೀರಿ. ಅವರ ಬದುಕು, ಹೊಟ್ಟೆ ಮೇಲೆ ಹೊಡೆಯಬೇಡಿ. ಈಗಾಗಲೇ ಉದ್ಯೋಗ ನಷ್ಟ ಆಗುತ್ತಿದೆ. ವ್ಯಾಪಾರ, ವ್ಯವಹಾರ ನಷ್ಟ ಆಗುತ್ತಿದೆ. ಎಲ್ಲರೂ ಒಟ್ಟಾಗಿ ಬದುಕಲು ಅವಕಾಶ ಮಾಡಿಕೊಡಿ ಎಂದರು.
ರಾಜಕೀಯದ ಉದ್ದೇಶ: ಸರ್ಕಾರದ ಏಕಾಏಕಿ ಆದೇಶದ ಉದ್ದೇಶ ಏನು ಎಂಬ ಪ್ರಶ್ನೆಗೆ, 'ಚುನಾವಣೆ ಸಮೀಪಿಸುತ್ತಿದ್ದು, ರಾಜಕೀಯ ಮಾಡುವ ಉದ್ದೇಶ. ಚುನಾವಣೆಯನ್ನು ಸರಿಯಾಗಿ ಮಾಡಲು ಅವರ ಬಳಿ ಯಾವುದೇ ಸಾಧನೆಗಳಿಲ್ಲ. ಹೀಗಾಗಿ, ಇಂತಹ ಭಾವನಾತ್ಮಕ ವಿಚಾರವನ್ನು ತರುತ್ತಿದ್ದಾರೆ. ನಾವು ಸಂವಿಧಾನದ ಆಶಯದಂತೆ ಸಮಾಜವನ್ನು ಒಂದು ಮಾಡಲು ಪ್ರಯತ್ನಿಸಿದರೆ, ಅವರು ಸಮಾಜ ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ' ಎಂದರು.
ಹಲಾಲ್ ಕಟ್ಗೆ ಅವಕಾಶ ನೀಡಬಾರದು ಎಂದು ಕೆಲವು ಸಂಘಟನೆಗಳು ಆಗ್ರಹಿಸುತ್ತಿವೆ ಎಂಬ ಪ್ರಶ್ನೆಗೆ, 'ಕೋಳಿ ಮತ್ತು ಕುರಿಗಳಿಗೆ ಪ್ರಜ್ಞೆ ತಪ್ಪಿಸಬೇಕಂತೆ. ಹೇಗೆ ತಪ್ಪಿಸಬೇಕು? ತಲೆಗೆ ಹೊಡೆದರೆ ಅವು ಸಾಯುವುದಿಲ್ಲವೇ? ಅದು ಹಿಂಸೆ ಅಲ್ಲವೇ? ಮಾಂಸ ವ್ಯಾಪಾರದಲ್ಲೂ ಅನೇಕ ಉಪ ವ್ಯಾಪಾರಗಳಿವೆ. ಇವು ಸಾಮಾಜಿಕವಾಗಿ ಬೆಸೆದುಕೊಂಡಿರುವ ವ್ಯಾಪಾರಗಳು. ನಾನು ಈ ವಿಚಾರದಲ್ಲಿ ಧ್ವನಿ ಎತ್ತದಿದ್ದರೆ ನನ್ನ ಸ್ಥಾನ ಹಾಗೂ ಜವಾಬ್ದಾರಿಗೆ ದ್ರೋಹ ಬಗೆದಂತಾಗುತ್ತದೆ. ಮುಖ್ಯಮಂತ್ರಿಗಳು ಸಂಜೆ ಒಳಗಾಗಿ ಉತ್ತರ ನೀಡಬೇಕು ಎಂದು ಆಗ್ರಹಿಸುತ್ತೇನೆ ' ಎಂದರು.
ಇದನ್ನೂ ಓದಿ: ಹಲಾಲ್ - ಜಟ್ಕಾ ಕಟ್ ವಿವಾದದ ಮಧ್ಯೆ ಪಶುಪಾಲನೆ ಇಲಾಖೆ 'ಸ್ಟನ್ನಿಂಗ್' ಆದೇಶ: ಏನಿದು ಸುತ್ತೋಲೆ?