ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಸದಾಶಿವನಗರ ನಿವಾಸಕ್ಕೆ ಭಾನುವಾರ ತೆರಳಿ ಸಮಾಲೋಚನೆ ನಡೆಸಿದರು. ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಎಂಎಲ್ಸಿ ಯು.ಬಿ. ವೆಂಕಟೇಶ್, ಮಾಜಿ ಶಾಸಕ ದಿವಾಕರ್ ಬಾಬು ಉಪಸ್ಥಿತರಿದ್ದರು.
ರಾಜ್ಯದಲ್ಲಿ ಕಾಂಗ್ರೆಸ್ ಸಂಘಟನೆ ಹಾಗೂ ಮುಂಬರುವ ದಿನಗಳಲ್ಲಿ ನಡೆಯುವ ವಿವಿಧ ಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಿಸಿಕೊಳ್ಳುವ ಕುರಿತು ಕಾರ್ಯತಂತ್ರ ರೂಪಿಸುವ ವಿಚಾರವಾಗಿ ಸುದೀರ್ಘ ಚರ್ಚೆ ನಡೆಯಿತು. ಪಕ್ಷದ ರಾಷ್ಟ್ರೀಯ ನಾಯಕರು ನೀಡಿರುವ ಗುರಿ ತಲುಪುವ ನಿಟ್ಟಿನಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ರಾಜ್ಯ ಕಾಂಗ್ರೆಸ್ ನಾಯಕರ ಸಹಕಾರ ಅತ್ಯಗತ್ಯ ಎಂದು ಶಿವಕುಮಾರ್ ಹೇಳಿದರು.
ಮುಂಬರುವ ದಿನಗಳಲ್ಲಿ ಕಾಂಗ್ರೆಸ್ನ ಎಲ್ಲ ನಾಯಕರು ಒಟ್ಟಾಗಿ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನಕ್ಕೆ ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ಎಲ್ಲಾ ನಾಯಕರನ್ನು ಸಂಪರ್ಕಿಸಿ ಸಹಕಾರ ಕೋರುತ್ತಿದ್ದು, ಇದರ ಮೊದಲ ಭಾಗವಾಗಿ ಖರ್ಗೆ ಅವರನ್ನು ಭೇಟಿಯಾಗಿದ್ದಾಗಿ ಡಿ ಕೆ ಶಿವಕುಮಾರ್ ತಿಳಿಸಿದರು.
ಪಕ್ಷಕ್ಕೆ ಸಕಲ ರೀತಿಯ ಸಹಕಾರವನ್ನು ನೀಡುವುದಾಗಿಯೂ ಖರ್ಗೆ ಇದೇ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಲ್ಲ ನಾಯಕರಿಗೂ ಮುಂಬರುವ ದಿನಗಳಲ್ಲಿ ಅಧಿಕಾರ ನೀಡಿ. ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದು, ತಳಮಟ್ಟದಿಂದ ಪಕ್ಷವನ್ನು ಸಂಘಟಿಸಿ. ಪಕ್ಷಕ್ಕೆ ಸುದೀರ್ಘ ಇತಿಹಾಸವಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನಮೆಚ್ಚುವ ರೀತಿಯ ಆಡಳಿತ ನೀಡಬೇಕು ಎಂದು ಡಿಕೆಶಿಗೆ ಸಲಹೆ ನೀಡಿದ್ದಾರೆ.
ಎಸ್ಎಂಕೆಗೆ ಜನ್ಮದಿನದ ಶುಭಾಶಯ: ಕೇಂದ್ರದ ಮಾಜಿ ಸಚಿವ, ಮಾಜಿ ರಾಜ್ಯಪಾಲ ಎಸ್.ಎಂ. ಕೃಷ್ಣ ಅವರ 90 ನೇ ಜನ್ಮದಿನದ ನಿಮಿತ್ತ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಸದಾಶಿವನಗರದಲ್ಲಿರುವ ಕೃಷ್ಣ ಅವರ ಮನೆಗೆ ಭಾನುವಾರ ತೆರಳಿ ಶುಭಾಶಯ ಕೋರಿದರು.
ಓದಿ: ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ವಿರೋಧ: ಪೊಲೀಸ್ ಅಧಿಕಾರಿಗಳ ಜೊತೆ ಪ್ರಜ್ವಲ್, ಸೂರಜ್ ರೇವಣ್ಣ ಮಾತಿನ ಚಕಮಕಿ