ಬೆಂಗಳೂರು : ಕೊರೊನಾ ಬಂದು ಅದೆಷ್ಟೋ ಜನ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅದ್ರಲ್ಲೂ ಕೊರೊನಾ ಅಂತ ಆಸ್ಪತ್ರೆಗೆ ದಾಖಲಾದವರಿಗೆ ರೆಮ್ಡಿಸಿವಿರ್ ಔಷಧಿ ರಾಮಬಾಣ ಇದ್ದಂತೆ. ಈ ಔಷಧಿ ಸಿಕ್ಕರೆ ಎಂಥವರೂ ಬೇಗ ಗುಣಮುಖರಾಗ್ತಾರೆ ಅನ್ನೋದು ಎಲ್ಲರ ನಂಬಿಕೆಯಾಗಿದೆ. ಆದ್ರೆ ಸೈಬರ್ ಖದೀಮರು ಇದೇ ನಂಬಿಕೆಯನ್ನ ದುರುಪಯೋಗ ಪಡಿಸಿಕೊಂಡಿದ್ದಾರೆ.
ಕೊರೊನಾ ಸಂಕಷ್ಟದ ನಡುವೆಯೂ ತಮ್ಮ ಕಳ್ಳಾಟ ನಡೆಸಿದ್ದಾರೆ. ರೆಮ್ಡಿಸಿವಿರ್ ಇಂಜೆಕ್ಷನ್ ಕೊರತೆಯನ್ನೇ ಎನ್ಕ್ಯಾಶ್ ಮಾಡಿಕೊಂಡಿರುವ ಸೈಬರ್ ಕ್ರಿಮಿನಲ್ಸ್, ವಾಟ್ಸ್ಆ್ಯಪ್ ಮೂಲಕ ರೆಮ್ಡಿಸಿವಿರ್ ಅವಶ್ಯಕತೆ ಇರುವವರ ನಂಬರ್‌ಗಳಿಗೆ ತಮ್ಮ ಬಳಿ ಇಂಜೆಕ್ಷನ್ ಇರುವುದಾಗಿ ಮೆಸೇಜ್ ಮಾಡಿದ್ದಾರೆ.
ಅಡ್ವಾನ್ಸ್ ಹಣ ನೀಡಿದ್ರೆ ಮಾತ್ರ ಇಂಜೆಕ್ಷನ್ ಕೊಡುವುದಾಗಿ ಸಂದೇಶ ಕಳಿಸಿ ಮೋಸ ಮಾಡಿದ್ದಾರೆ. ಅತಿ ಹೆಚ್ಚು ಅವಶ್ಯಕತೆ ಇರುವವರು ಇದನ್ನೇ ನಂಬಿ ಹಣ ವರ್ಗಾವಣೆ ಮಾಡಿದವರಿಗೆ ಈ ಸೈಬರ್ ಖದೀಮರು ವಂಚನೆ ಮಾಡಿದ್ದಾರೆ. ಇದೀಗ ಎಚ್ಚೆತ್ತುಕೊಂಡು ಸೈಬರ್ ಖದೀಮರ ಬಲೆಗೆ ಬಿದ್ದು ಹಣ ಕಳೆದುಕೊಂಡವರು ಬೆಂಗಳೂರು ಪೊಲೀಸರಿಗೆ ಟ್ವಿಟರ್‌ನಲ್ಲಿ ದೂರು ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮೆಸೇಜುಗಳ ಬಗ್ಗೆ ಎಚ್ಚರವಹಿಸಿ ಜಾಗ್ರತೆ ವಹಿಸುವಂತೆ ಸಾರ್ವಜನಿಕರಲ್ಲಿ ಪೊಲೀಸರು ಮನವಿ ಮಾಡಿದ್ದು, ಈ ಸೈಬರ್ ಖದೀಮರನ್ನ ಸೆರೆ ಹಿಡಿಯಲು ಬಲೆ ಬೀಸಿದ್ದಾರೆ.