ಬೆಂಗಳೂರು: ಖಾಸಗಿ ಲ್ಯಾಬ್ಗಳಲ್ಲಿ ಸಿಟಿ ಸ್ಕ್ಯಾನ್ ದರವನ್ನು ಪರಿಷ್ಕರಿಸಿ ಸರ್ಕಾರ ಆದೇಶ ಹೊರಡಿಸಿದೆ.
ಹೊಸ ಪರಿಷ್ಕೃತ ದರದಂತೆ ಬಿಪಿಎಲ್ ಕಾರ್ಡ್ ಹೊಂದಿದ ರೋಗಿಗಳಿಗೆ 1,500 ರೂ. ನಿಗದಿಗೊಳಿಸಿದ್ದರೆ, ಇತರ ರೋಗಿಗಳಿಗೆ 2,500 ರೂ. ನಿಗದಿಪಡಿಸಿ ಸರ್ಕಾರ ಆದೇಶಿಸಿದೆ.
ಶುಕ್ರವಾರವಷ್ಟೇ ಖಾಸಗಿ ಲ್ಯಾಬ್ಗಳಲ್ಲಿ ಮಾಡಲಾಗುವ ಸಿಟಿ ಸ್ಕ್ಯಾನ್ ದರವನ್ನು 1500 ರೂ.ಗೆ ನಿಗದಿಗೊಳಿಸಿ ಸರ್ಕಾರ ಆದೇಶಿಸಿತ್ತು. ಆದರೆ ಬೆಂಗಳೂರು ಡಯಗ್ನೊಸ್ಟಿಕ್ ಕೇಂದ್ರಗಳ ಒಕ್ಕೂಟ ಸಿಎಂ ಭೇಟಿಯಾಗಿ ಆಸ್ಪತ್ರೆಗಳಂತೆ ಡಯಗ್ನೊಸ್ಟಿಕ್ ಕೇಂದ್ರಗಳಿಗೆ ವಿದ್ಯುತ್ ಬಿಲ್ನಲ್ಲಿ ಯಾವುದೇ ವಿನಾಯಿತಿ ನೀಡಿಲ್ಲ. ಸಿಬ್ಬಂದಿ ವೇತನಕ್ಕಾಗಿ ಭಾರಿ ವೆಚ್ಚವನ್ನು ಭರಿಸಬೇಕಾಗಿರುವುದರಿಂದ ಪ್ರತಿ ಸಿಟಿ ಸ್ಕ್ಯಾನ್ ದರ 4,000 ರೂ. ಆಗುತ್ತದೆ. ಸರ್ಕಾರ ನಿಗದಿ ಮಾಡಿದ ದರ ಕಾರ್ಯಸಾಧುವಲ್ಲ. ಹೀಗಾಗಿ ಸಿಟಿ ಸ್ಕ್ಯಾನ್ ದರವನ್ನು 3,500-4,500 ರೂ.ಗೆ ನಿಗದಿಗೊಳಿಸುವಂತೆ ಮನವಿ ಮಾಡಿದ್ದರು.
ಅವರ ಮನವಿಯನ್ನು ಪುರಸ್ಕರಿಸಿರುವ ಸರ್ಕಾರ, ಇದೀಗ ಸಿಟಿ ಸ್ಕ್ಯಾನ್ ದರವನ್ನು ಪರಿಷ್ಕರಿಸಿ ಆದೇಶಿಸಿದೆ.