ಬೆಂಗಳೂರು: ಕೊರೊನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ನಗರದಲ್ಲಿ ದಿನಕ್ಕೆ ಐದರಿಂದ ಎಂಟು ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ಆರೋಗ್ಯ ಇಲಾಖೆ ಈಗಾಗಲೇ ಸೋಂಕು ಗುರುತಿಸುವ ನಿಟ್ಟಿನಲ್ಲಿ ಹಾಗೂ ಸೋಂಕು ನಿಯಂತ್ರಿಸಲು ರ‍್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಅನ್ನ ಶುರು ಮಾಡಿದೆ. ಈ ಟೆಸ್ಟ್ ಮೂಲಕ ಈವರೆಗೆ 5,08,369, ಆರ್ಟಿಪಿಸಿಆರ್ ಮೂಲಕ 15,29,017 ಮಂದಿಗೆ ಹಾಗೂ ಒಟ್ಟಾರೆ ರಾಜ್ಯದಲ್ಲಿ 20,373,86 ಕೊರೊನಾ ಪರೀಕ್ಷೆ ಮಾಡಲಾಗಿದೆ.
ಕೊರೊನಾ ರೋಗ ಲಕ್ಷಣಗಳು ಇದ್ದು ರ‍್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಮಾಡಿಸಿದಾಗ ನೆಗೆಟಿವ್ ಬಂದರೆ ಹಾಗೂ ದೀರ್ಘಕಾಲದ ರೋಗದಿಂದ ಬಳಲುತ್ತಿರುವವರು ಹಾಗೂ ಉಸಿರಾಟದ ತೊಂದರೆ, ಶ್ವಾಸಕೋಶದ ಸಮಸ್ಯೆ ಇರುವವರು ಆ್ಯಂಟಿಜೆನ್ ಪರೀಕ್ಷೆ ನಂತರವೂ ಸಿ.ಟಿ. ಸ್ಕ್ಯಾನ್ ಮಾಡಿಸುವ ಅಗತ್ಯವಿದೆ ಅಂತ ವೈದ್ಯರು ಸಲಹೆ ನೀಡುತ್ತಾರೆ. ಯಾಕೆಂದರೆ ಕೊರೊನಾ ಬಗ್ಗೆ ಇನ್ನೂ ಅಧ್ಯಯನಗಳು ನಡೆಯುತ್ತಿದ್ದು, ವೈರಸ್ನ ಸ್ವರೂಪದ ಬಗ್ಗೆ ಈವರೆಗೆ ನಿಖರ ಮಾಹಿತಿ ಹೊರಬಿದ್ದಿಲ್ಲ.
ರ‍್ಯಾಪಿಡ್ ಟೆಸ್ಟ್ನಿಂದ ಹಾಗೂ ಆರ್ಟಿಪಿಆರ್ ಪರೀಕ್ಷೆ ಮಾಡಿದಾಗ ಪಾಸಿಟಿವ್ ಬಂದಿರುವ ಸಂಖ್ಯೆ ಹೆಚ್ಚಾಗಿ ಕಾಣಿಸುತ್ತಿದೆ. ಆದರೆ ರೋಗ ಲಕ್ಷಣಗಳು ಇದ್ದು ಕೋವಿಡ್ ನೆಗೆಟಿವ್ ಬಂದಿರುವವರು ತುಂಬಾ ಜನರಿದ್ದಾರೆ. ಆರ್ಟಿಪಿಸಿಆರ್ ಹಾಗೂ ಆ್ಯಂಟಿಜೆನ್ನಲ್ಲಿ ಫಲಿತಾಂಶ ಎಲ್ಲರಿಗೂ 100ರಷ್ಟು ಫಲಿತಾಂಶ ಸಿಗುತ್ತಿಲ್ಲ. ರೋಗ ಇದ್ದರೂ ಫಲಿತಾಂಶದಲ್ಲಿ ನೆಗೆಟಿವ್ ಬರುತ್ತಿದ್ದು, ಇಂತಹವರಿಗೆ ಸಿ.ಟಿ. ಸ್ಕ್ಯಾನ್ ಮಾಡಿಸುವ ಅಗತ್ಯ ಇರುತ್ತದೆ ಎಂದು ಶ್ವಾಸಕೋಶ ತಜ್ಞ ಪ್ರಸನ್ನ ಕುಮಾರ್. ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶ್ವಾಸಕೋಶದಲ್ಲಿ ಸೋಂಕಿನ ಲಕ್ಷಣ ಇರುವಾಗಲೇ ಸಿ.ಟಿ. ಸ್ಕ್ಯಾನ್ ಮಾಡಿಸಿದಾಗ ಅಂತಹವರಿಗೆ ಮುಂದೆ ರೋಗದ ತೀವ್ರತೆ ಹೆಚ್ಚಾಗುವ ಮುನ್ನವೇ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ. ಇದರಿಂದಾಗಿ ಉಸಿರಾಟದ ತೊಂದರೆ ತಪ್ಪಿಸಬಹುದು. ಇದನ್ನೇ ಬಂಡವಾಳವನ್ನಾಗಿಸಿಕೊಂಡು ರೋಗಿಗಳಿಗೆ ಸಿ.ಟಿ. ಸ್ಕ್ಯಾನ್ ಮಾಡಿಸುವಂತೆ ಖಾಸಗಿ ಲ್ಯಾಬ್ಗಳು ಪ್ರೇರೇಪಿಸುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ಏನಾದರೂ ಕ್ರಮ ಕೈಗೊಳ್ಳುತ್ತಾ ಎಂಬುದನ್ನು ಕಾದುನೋಡಬೇಕಿದೆ.