ಬೆಂಗಳೂರು: ಕೊರೊನಾ ಮಹಾಮಾರಿ ತಂದಿರುವ ಸಂಕಷ್ಟ ಒಂದಲ್ಲ, ಎರಡಲ್ಲ. ಭದ್ರತೆಗೆಂದು ನಿಯೋಜಿಸಿದ್ದ ಪೊಲೀಸರಲ್ಲೂ ಕೊರೊನಾ ಪತ್ತೆಯಾಗಿರುವ ಕಾರಣ ಬಹುತೇಕ ಪೊಲೀಸರು ತಮಗೆಲ್ಲಿ ಸೋಂಕು ತಗುಲುತ್ತೊ ಅನ್ನೋ ಭಯದಲ್ಲಿ ಕೆಲಸ ಮಾಡುವ ಪರಿಸ್ಥಿತಿ ಎದುರಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಸದ್ಯದ ಮಟ್ಟಿಗೆ ಕ್ರೈಂ ರೇಟ್ಗಳು ಕಡಿಮೆಯಾಗಿವೆ. ಆದರೂ ನಗರದ ಬಹುತೇಕ ಕಡೆ ಕೆಲವೊಂದು ಕುಡುಕರ ಹಾವಳಿ, ಸಣ್ಣ ಪುಟ್ಟ ವಿಚಾರಕ್ಕೆ ಗಲಾಟೆ ನಡೆದ್ರೆ ಬಹುತೇಕ ಆರೋಪಿಗಳನ್ನು ಪೊಲೀಸರು ಹಿಡಿಯಲು ಹೋಗುತ್ತಿಲ್ಲ. ಯಾಕಂದ್ರೆ, ಆರೋಪಿಗಳನ್ನ ಹಿಡಿದ್ರೂ ಕೂಡ ಅವರ ಕೋವಿಡ್ -19 ಆರೋಗ್ಯ ತಪಾಸಣೆ ನಡೆಸಿ ನಂತ್ರ ಜೈಲಿಗೆ ಕಳುಹಿಸಬೇಕು. ಕೊರೊನಾ ಬರುವ ಮುನ್ನದ ಪರಿಸ್ಥಿತಿಗೆ ಹೋಲಿಸಿದ್ರೆ ಸದ್ಯ ಯಾವುದೇ ರೀತಿಯಾದ ದೊಡ್ಡಮಟ್ಟ ಅಪರಾಧ ಪ್ರಕರಣಗಳು ಅಷ್ಟಾಗಿ ನಡೆದಿಲ್ಲ. ಹಾಗಾಗಿ ಪ್ರತಿ ಠಾಣೆಗಳಲ್ಲಿ ಪೊಲೀಸರು ಆರೋಪಿಗಳನ್ನ ಪತ್ತೆ ಹಚ್ಚುವ ಸಂಖ್ಯೆ ಕಡಿಮೆಯಾಗಿದೆ ಎನ್ನಲಾಗ್ತಿದೆ.
ಇನ್ನು, ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಾಹಿತಿ ಪ್ರಕಾರ ಕೊರೊನಾ ಸೋಂಕು ಬಂದ ನಂತ್ರ ಪ್ರತಿ ದಿನ 5-6 ಜನ ಮಾತ್ರ ಆರೋಪಿಗಳು ಜೈಲಿಗೆ ಬರ್ತಾರೆ. ಪರಪ್ಪನ ಅಗ್ರಹಾರ ಜೈಲಿಗೆ ಬರುವ ಕೈದಿಗಳ ಸಂಖ್ಯೆ ಕೂಡ ಕಡಿಮೆಯಾಗಿದೆ. ಲಾಕ್ಡೌನ್ಗೂ ಮುಂಚೆ ದಿನಕ್ಕೆ 40 ರಿಂದ 50 ಆರೋಪಿಗಳು ಬರುತ್ತಿದ್ದರು. ಹಾಗೆಯೇ ಅಷ್ಟೇ ಜನ ಬೇಲ್ ಪಡೆದು ಜೈಲಿನಿಂದ ಹೊರ ಹೋಗುತ್ತಿದ್ರು. ಸದ್ಯ ನ್ಯಾಯಾಲಯಗಳಲ್ಲಿ ಆರೋಪಿಗಳಿಗೆ ಬೇಲ್ ಸಿಗ್ತಿಲ್ಲ, ಜೊತೆಗೆ ಸಿಲಿಕಾನ್ ಸಿಟಿಯಲ್ಲಿ ಕ್ರೈಂ ರೇಟ್ಗಳು ಕಡಿಮೆಯಾಗಿರುವ ಕಾರಣ ಸಿಟಿ ಪೊಲೀಸರು ಆರೋಪಿಗಳನ್ನು ಹಿಡಿಯಲು ಮುಂದಾಗ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಹಾಗೆಯೇ ಜೈಲಿಗೆ ಕರೆದುಕೊಂಡು ಬರುವ ಮೊದಲು ಆರೋಪಿಗಳಿಗೆ ಕೋವಿಡ್ ಟೆಸ್ಟ್ ಮಾಡಬೇಕು. ಒಂದು ವೇಳೆ ಕಳ್ಳನಿಗೆ ಪಾಸಿಟಿವ್ ಬಂದ್ರೆ ಹಿಡಿದಿರುವ ಪೊಲೀಸ್ ಸೇರಿ ಠಾಣಾಧಿಕಾರಿ, ಠಾಣಾ ಸಿಬ್ಬಂದಿ ಕ್ವಾರಂಟೈನ್ ಆಗಬೇಕು. ಸದ್ಯಕ್ಕೆ ಪೊಲೀಸ್ ಇಲಾಖೆಯಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೀಗಾಗಿ ಪೊಲೀಸರು ಎಚ್ಚರಿಕೆಯಿಂದ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.