ಬೆಂಗಳೂರು: ಲಾಕ್‍ಡೌನ್ ವಿಚಾರದಲ್ಲಿ ಜನರ ಸಹಕಾರದಿಂದ ಪಾಸಿಟಿವಿಟಿ ದರ ಇನ್ನಷ್ಟು ಕಡಿಮೆ ಆಗಲಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಡಾ. ಗಿರಿಧರ ಉಪಾಧ್ಯಾಯ ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ನಗರ ಕಾರ್ಯಾಲಯದ ಭಾವುರಾವ್ ದೇಶಪಾಂಡೆ ಭವನದಲ್ಲಿ ಬಿಜೆಪಿ ವೈದ್ಯಕೀಯ ಪ್ರಕೋಷ್ಠದಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆಬ್ರವರಿ 2021ರಲ್ಲಿ ಕೋವಿಡ್ ಪ್ರಕರಣಗಳು ಕಡಿಮೆ ಆಗಿದ್ದವು. ಪಾಸಿಟಿವಿಟಿ ರೇಟ್ 0.58ಕ್ಕೆ ಬಂದಿತ್ತು. ಆದರೆ, ಏಕಾಏಕಿ ಚಂಡಮಾರುತದ ರೀತಿಯಲ್ಲಿ ಮಾರ್ಚ್ 15ರ ವೇಳೆಗೆ ಪ್ರಕರಣಗಳು ಹೆಚ್ಚಿದವು. ಒಂದು ಸಂದರ್ಭದಲ್ಲಿ ಪಾಸಿಟಿವಿಟಿ ದರ ಗರಿಷ್ಠ ಏರಿಕೆಯಾಗಿತ್ತು. ಜನತಾ ಕರ್ಫ್ಯೂ ಮತ್ತು ಲಾಕ್‍ಡೌನ್ ಪರಿಣಾಮವಾಗಿ ಪಾಸಿಟಿವಿಟಿ ದರ ಶೇ 20ಕ್ಕಿಂತ ಕಡಿಮೆ ಆಗಿದೆ ಎಂದಿದ್ದಾರೆ.
ಪಾಸಿಟಿವಿಟಿ ದರ ಶೇ 10ಕ್ಕಿಂತ ಕಡಿಮೆ ಇರುವಂತೆ ನೋಡಿಕೊಳ್ಳಬೇಕಿದೆ. ಇದರಿಂದ ವೈದ್ಯಕೀಯ ರಂಗವು ಹೆಚ್ಚು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಿದೆ ಎಂದರು.
2020ರಿಂದ ಇಲ್ಲಿನವರೆಗೆ ವೈದ್ಯಕೀಯ ಲೋಕದಲ್ಲಿ ಒಂದು ರೀತಿಯ ವಿಶ್ರಾಂತಿ ಇಲ್ಲದೇ ಕೆಲಸ ಮಾಡಿದ ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ಅನಂತಾನಂತ ಧನ್ಯವಾದಗಳು. ಪ್ರಕರಣ ಕಡಿಮೆ ಆಗುವುದರಲ್ಲಿ ಅವರ ಪಾತ್ರವೂ ಪ್ರಮುಖವಾಗಿದೆ. ಆಕ್ಸಿಜನೇಟೆಡ್ ಬೆಡ್ 2020ರಲ್ಲಿ ಸುಮಾರು ಒಂದು ಸಾವಿರ ಇದ್ದದ್ದು ಈಗ 24 ಸಾವಿರಕ್ಕೆ ಅಭೂತಪೂರ್ವ ಮಾದರಿಯಲ್ಲಿ ಹೆಚ್ಚಾಗಿದೆ. 444 ವೆಂಟಿಲೇಟರ್ ಇದ್ದದ್ದು, ಸುಮಾರು 2 ಸಾವಿರಕ್ಕೆ ಹೆಚ್ಚಾಗಿದೆ. ಒಮ್ಮಿಂದೊಮ್ಮೆಲೆ ಪ್ರಕರಣ ಹೆಚ್ಚಾದಾಗ ವೆಂಟಿಲೇಟರ್ ಸುಲಭವಾಗಿ ಸಿಗುವುದಿಲ್ಲ ಎಂದು ವಿವರಿಸಿದರು.
ಆಕ್ಸಿಜನ್ ನಿರ್ವಹಣೆ ಮತ್ತು ಸರಬರಾಜಿನಲ್ಲಿ ಸ್ವಲ್ಪ ಸಮಸ್ಯೆ ಇತ್ತು. ಈಗ ಅದು ಸರಿಯಾಗಿದೆ. ನಿನ್ನೆ 850 ಮೆಟ್ರಿಕ್ ಟನ್ ಆಮ್ಲಜನಕವಷ್ಟೇ ಬಳಸಲಾಗಿದೆ. ಬೆಳಗ್ಗೆ 6ರಿಂದ 10ರವರೆಗೆ ಜನರಿಗೆ ಲಾಕ್‍ಡೌನ್ ವಿಷಯದಲ್ಲಿ ವಿರಾಮ ನೀಡಲಾಗಿದೆ. ಆದರೆ, ವೈರಸ್‍ಗೆ ವಿರಾಮ ಇಲ್ಲ ಎಂದು ಜನರು ನೆನಪಿನಲ್ಲಿ ಇಡಬೇಕು ಎಂದು ಎಚ್ಚರಿಸಿದರು.
ಸ್ಫುಟ್ನಿಕ್ ಬಗ್ಗೆ ಅಧ್ಯಯನ ನಡೆದ ಬಳಿಕ ಲಸಿಕೆ ಕೊಡಲಾಗುತ್ತಿದೆ. ಭಾರತದಲ್ಲಿ ಲಸಿಕೆ ಹಾಕುವುದೆಂದರೆ ಅದು ಪ್ರಪಂಚದ ಶೇ 33 ಜನರಿಗೆ ಲಸಿಕೆ ಕೊಡುವಂತಹ ದೊಡ್ಡ ಕಾರ್ಯಕ್ರಮ. ದೇಶದ ಸುಮಾರು 20 ಕೋಟಿ ಜನರಿಗೆ ಮತ್ತು ಕರ್ನಾಟಕದ 1.2 ಕೋಟಿ ಡೋಸ್ ವ್ಯಾಕ್ಸಿನ್ ಕೊಡಲಾಗಿದೆ ಎಂದು ಮಾಹಿತಿ ನೀಡಿದರು.
ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಬಿಜೆಪಿಯ ಲಕ್ಷಾಂತರ ಕಾರ್ಯಕರ್ತರು ಈ ಸೋಂಕಿತರ ಸೇವೆಯಲ್ಲಿ ತೊಡಗಿದ್ದಾರೆ. ಸೇವೆಯ ವೇಳೆ ಅನೇಕ ಕಾರ್ಯಕರ್ತರನ್ನು ನಾವು ಕಳೆದುಕೊಂಡಿದ್ದೇವೆ. ಆದರೆ, ವಿರೋಧ ಪಕ್ಷಗಳು ಕೋವಿಡ್ ವಿಚಾರದಲ್ಲಿ ರಾಜಕೀಯ ಬೆರೆಸುತ್ತಿರುವುದು ದುರ್ದೈವದ ಸಂಗತಿ ಎಂದರು.