ಬೆಂಗಳೂರು: ನಗರದಲ್ಲಿ ದಿನೇ ದಿನೆ ಕೋವಿಡ್ ಪ್ರಕರಣಗಳು ಅಪಾಯಕಾರಿ ಮಟ್ಟದಲ್ಲಿ ಹರಡುತ್ತಿದೆ. ನಿನ್ನೆ 10,800 ಜನರಲ್ಲಿ ಕೋವಿಡ್ ತಗುಲಿರುವುದು ದೃಢಪಟ್ಟಿತ್ತು. ಇಂದು 15,617 ಜನರಿಗೆ ಕೋವಿಡ್ ಪಾಸಿಟಿವ್ ವರದಿ ಬಂದದೆ. ಸಂಜೆ ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ನಲ್ಲಿ ಅಧಿಕೃತವಾಗಿ ಈ ಸಂಖ್ಯೆ ಪ್ರಕಟವಾಗಲಿದೆ.
ನಿನ್ನೆ ಹತ್ತು ಸಾವಿರದ ಗಡಿ ದಾಡಿದ್ದ ಪ್ರಕರಣಗಳ ಸಂಖ್ಯೆ ಇಂದು ಹದಿನೈದು ಸಾವಿರದ ಗಡಿ ದಾಟಿದೆ. ಒಂದೇ ದಿನದಲ್ಲಿ 4,817 ಹೆಚ್ಚಿನ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಕೊರೊನಾ ಪಾಸಿಟಿವಿಟಿ ರೇಟ್ ಶೇ.15ಕ್ಕೆ ಏರಿಕೆಯಾಗಿದೆ.
ಸೋಂಕು ತಡೆಗೆ ಮಾಸ್ಕ್ ಸಾಧನ:
ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ನಗರದಲ್ಲಿ ಹದಿನೈದು ಸಾವಿರ ಪ್ರಕರಣಗಳು ದಾಖಲಾಗಿದೆ. ಈ ಸಂಖ್ಯೆ ಮುಂದಿನ ದಿನ ಇನ್ನೂ ಹೆಚ್ಚಾಗಲಿದೆ. ಯುಎಸ್, ಯುಕೆ ಸೇರಿದಂತೆ ಮುಂಬೈ, ದೆಹಲಿಯಲ್ಲೂ ಪ್ರಕರಣಗಳು ಹೆಚ್ಚಾಗುತ್ತಿವೆ. ಸೋಂಕಿನ ಹರಡುವಿಕೆ ತಡೆಯಲು ಸದ್ಯ ಮಾಸ್ಕ್ ಮಾತ್ರ ಸಾಧನ ಎಂದರು.
ಸೋಂಕು ತಡೆಗಟ್ಟಲು ಕ್ರಮ ವಹಿಸಬೇಕಿದೆ:
ಸೋಂಕು ಬಂದರೂ ಶೇ.90ರಷ್ಟು ಜನರಿಗೆ ಆಸ್ಪತ್ರೆ ಅಗತ್ಯ ಬೀಳುವುದಿಲ್ಲ. ಟ್ರಯಾಜಿಂಗ್ ಸೆಂಟರ್ಗಳಲ್ಲಿ ಪರೀಕ್ಷಿಸಿಕೊಂಡರೆ ಸಾಕು. ಟೆಲಿ ಟ್ರಯಾಜಿಂಗ್ ಕೂಡಾ ಮಾಡಲಾಗುವುದು. ಬರುವ ದಿನಗಳಲ್ಲಿ ಕೋವಿಡ್ಗೆ ಸೀಮಿತವಾಗುವ ಆಸ್ಪತ್ರೆಗಳು, ಬೆಡ್ಗಳ ಸಂಖ್ಯೆ ಹೆಚ್ಚಿಸಲಾಗುವುದು. ಕೋವಿಡ್ ಕೇರ್ ಸೆಂಟರ್ಗಳನ್ನು ಕೂಡಾ ಹೆಚ್ಚು ಮಾಡಲಾಗುತ್ತದೆ.
ಕಳೆದ ಎರಡು ಕೋವಿಡ್ ಅಲೆಗಳಂತೆ ಸದ್ಯ ಸೋಂಕಿತರಿಗೆ ಉಸಿರಾಟದ ಸಮಸ್ಯೆ ಉಂಟಾಗುವುದಿಲ್ಲ. ಅಪಾರ್ಟ್ಮೆಂಟ್ ಓನರ್ಸ್, ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ತಮ್ಮ ವ್ಯಾಪ್ತಿಯಲ್ಲಿ ಸರಿಯಾಗಿ ಜವಾಬ್ದಾರಿ ವಹಿಸಿಕೊಂಡು ಸೋಂಕು ತಡೆಗಟ್ಟಲು ಕ್ರಮ ವಹಿಸಬೇಕಿದೆ ಎಂದರು.
ಲಾಕ್ಡೌನ್?: ನಿನ್ನೆ ಸಿಎಂ ಜೊತೆ ನಡೆದ ಸಭೆಯಲ್ಲಿ ಲಾಕ್ಡೌನ್ ಕುರಿತು ಚರ್ಚೆಯಾಗಿಲ್ಲ. ಹೊರರಾಜ್ಯದಿಂದ ಬರುತ್ತಿರುವ ಕಾರ್ಮಿಕರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಒಂದೆಡೆ ಮೂರಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳು ಕಂಡು ಬಂದರೆ ಮೈಕ್ರೋ ಕಂಟೈನ್ಮೆಂಟ್ ಮಾಡಲಾಗುವುದು. ನಗರದಲ್ಲಿ ಸದ್ಯ 300ಕ್ಕೂ ಹೆಚ್ಚು ಕಂಟೈನ್ಮೆಂಟ್ ವಲಯಗಳಿವೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಅನಿವಾರ್ಯ ಆದ್ರೆ ಲಾಕ್ ಡೌನ್, ನಮ್ಮಲ್ಲಿ ಸದ್ಯಕ್ಕೆ ಆ ಸ್ಥಿತಿ ಬಂದಿಲ್ಲ: ಆರಗ ಜ್ಞಾನೇಂದ್ರ