ಬೆಂಗಳೂರು : ಕೊರೊನಾ ಲಕ್ಷಾಂತರ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡ್ಡಗಾಲು ಹಾಕಿದೆ. ಪ್ರತಿ ವರ್ಷ ಸಂಭ್ರಮದ ದಿನವನ್ನಾಗಿ ಮಕ್ಕಳ ದಿನಾಚರಣೆಯನ್ನ ಆಚರಿಸಲಾಗುತ್ತಿತ್ತು. ಆದರೆ, ಕಳೆದ 2 ವರ್ಷದಿಂದ ಈ ಸಂಭ್ರಮ ಮಂಕಾಗಿದೆ. ಕೊರೊನಾ ಭೀತಿಗೆ ಮಕ್ಕಳು ಮನೆಯಲ್ಲೇ ಉಳಿಯುವಂತಾಗಿದೆ.
ಸುದೀರ್ಘ ಕಾಲದವರೆಗೆ ಶಾಲೆಗಳು ಬಾಗಿಲು ಮುಚ್ಚಿದ ಪರಿಣಾಮ, ಸಾವಿರಾರು ಮಕ್ಕಳು ಶಾಲೆಯನ್ನ ತ್ಯಜಿಸಿದ್ದಾರೆ(Covid-19 effect on Education). ಮಕ್ಕಳ ಶಿಕ್ಷಣಕ್ಕೆ ಕುತ್ತು ತಂದ ಕೋವಿಡ್ ಸೋಂಕು ಕೌಟುಂಬಿಕ, ಆರ್ಥಿಕ, ವೈದ್ಯಕೀಯ ಕಾರಣದಿಂದ ಶಾಲೆಯಿಂದ ಮಕ್ಕಳು ದೂರ ಅಥವಾ ಹೊರಗೆ ಉಳಿದಿದ್ದಾರೆ. ಅದರಲ್ಲೂ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೇ ಮಕ್ಕಳು ಹೊರಗೆ ಉಳಿದಿರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ.
ಮಕ್ಕಳನ್ನ ಮುಖ್ಯವಾಹಿನಿಗೆ ತರುವ ಕೆಲಸದಲ್ಲಿ ಶಿಕ್ಷಣ ಇಲಾಖೆ : ಅಂದಹಾಗೇ 6 ರಿಂದ 14 ವರ್ಷ ವಯಸ್ಸಿನ ಎಲ್ಲಾ ಮಕ್ಕಳು ಶಾಲಾ ಶಿಕ್ಷಣವನ್ನು ಪಡೆಯುವುದು ಮೂಲಭೂತ ಹಕ್ಕು(Right to Education). ರಾಷ್ಟ್ರೀಯ ಶಿಕ್ಷಣ ನೀತಿ-2020ರ(National Education Policy 2020) ಪ್ರಕಾರ ಎಲ್ಲಾ ಮಕ್ಕಳನ್ನು ಶಾಲಾ ಮುಖ್ಯವಾಹಿನಿಗೆ ತರುವುದು, ಶಾಲೆಗೆ ಮಕ್ಕಳ ಸಾರ್ವತ್ರಿಕ ದಾಖಲಾತಿ ಮತ್ತು ಹಾಜರಾತಿಯನ್ನು ಖಚಿತಪಡಿಸಿಕೊಳ್ಳುವುದು ಪ್ರಮುಖವಾದ ಕಾರ್ಯವಾಗಿದೆ.
ಹೀಗಾಗಿ, ಶಿಕ್ಷಣ ಇಲಾಖೆಯು ಸ್ಥಳೀಯ ಸಂಸ್ಥೆಗಳ ವತಿಯಿಂದ ಮಕ್ಕಳ ಮನೆ ಮನೆ ಸಮೀಕ್ಷೆಯನ್ನು ನಡೆಸಿದೆ. ಇದರಲ್ಲಿ ಮಕ್ಕಳು ವೈದ್ಯಕೀಯ, ಆರ್ಥಿಕ ಹಾಗೂ ಕೌಟಂಬಿಕ ಸಮಸ್ಯೆಯ ಕಾರಣಗಳಿಂದ ಶಾಲೆಗಳಿಗೆ ದಾಖಲಾಗಿಲ್ಲವೆಂದು ಗುರುತಿಸಲಾಗಿದೆ.
ಈ ನಿಟ್ಟಿನಲ್ಲಿ ಗುರುತಿಸಲಾಗಿರುವ ಮಕ್ಕಳ ಮಾಹಿತಿಯನ್ನು ಪಡೆದು ಆಯಾ ಜಿಲ್ಲೆಯ ಉಪನಿರ್ದೇಶಕರು ಪರಿಶೀಲಿಸಿ ಬ್ಲಾಕ್‌ವಾರು ವಿಂಗಡಿಸಿ ತಾಲೂಕುಗಳಿಗೆ ಕಳುಹಿಸುವಂತೆ ಸೂಚಿಸಲಾಗಿದೆ. ಜಿಲ್ಲೆಯಿಂದ ಪಡೆದ ಮಕ್ಕಳ ಮಾಹಿತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು ಹಾಗೂ ಹಾಜರಾತಿ ಅಧಿಕಾರಿಗಳ ಸಭೆ ಕರೆದು ಸಭೆಯಲ್ಲಿ ಪಟ್ಟಿಯನ್ನು ಪರಿಶೀಲಿಸಿ ಕ್ಲಸ್ಟರ್‌ವಾರು ವಿಂಗಡಿಸಿ ಸಿಆರ್‌ಪಿಗಳಿಗೆ ನೀಡುವ ಕೆಲಸ ಮಾಡ್ತಿದೆ.
ಬ್ಲಾಕ್‌ನಿಂದ ಪಡೆದ ಮಕ್ಕಳ ಪಟ್ಟಿಯನ್ನು ಸಿಆರ್‌ಪಿಗಳು ಮತ್ತು ಹಾಜರಾತಿ ಅಧಿಕಾರಿಗಳು ಮತ್ತೊಮ್ಮೆ ಪರಿಶೀಲಿಸಬೇಕು. ಮುಖ್ಯ ಶಿಕ್ಷಕರ ಸಭೆ ಕರೆದು ಚರ್ಚಿಸಿ ಪಟ್ಟಿಯಲ್ಲಿರುವ ಮಕ್ಕಳು ಈಗಾಗಲೇ ಶಾಲೆಯಲ್ಲಿ ದಾಖಲಾಗಿರುವ ಬಗ್ಗೆ ಶಾಲೆಗಳಿಗೆ ಖುದ್ದು ಭೇಟಿ ನೀಡಿ ಖಾತ್ರಿ ಪಡಿಸಿಕೊಳ್ಳುವುದು, ದಾಖಲಾದ ಮಕ್ಕಳ ಮಾಹಿತಿಯನ್ನ ಸಂಗ್ರಹಿಸಲಾಗುತ್ತಿದೆ.
ಒಂದು ವೇಳೆ ಮಕ್ಕಳು ಶಾಲೆಯನ್ನ ತೊರೆದಿದ್ದರೆ ಹಾಜರಾತಿ ಅಧಿಕಾರಿಗಳು ಸಂಬಂಧಿಸಿದ ಪೋಷಕರನ್ನು ಭೇಟಿ ಮಾಡಬೇಕು. ಮಗುವಿನ ಗೈರು ಹಾಜರಿಗೆ ನಿಖರವಾದ ಕಾರಣವನ್ನು ಪತ್ತೆ ಹಚ್ಚಿ ಮಗು ಮತ್ತು ಪೋಷಕರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು.
ಮಗುವಿನ ಹಾಜರಾತಿ ಗಾಗಿ ನಿಯಮ 6ಬಿ(2) ಆಡಿಯಲ್ಲಿ ಹಾಜರಾತಿ ನೋಟೀಸ್ ನೀಡಿ, ಸ್ವೀಕೃತಿ ಪಡೆಯಲಾಗುತ್ತಿದೆ. ಹಾಜರಾತಿ ನೋಟಿಸ್ ಅವಧಿ ಮುಗಿದ ನಂತರ ಮಗು ಹಾಜರಾಗದಿದ್ದರೆ, ಹಾಜರಾತಿ ಅಧಿಕಾರಿಯು ಎಸ್‌ಡಿಎಂಸಿ ಸದಸ್ಯರು, ಜನಪ್ರತಿನಿಧಿಗಳು, ಸ್ವಯಂಸೇವಾ ಸಂಸ್ಥೆಗಳ ಸಹಕಾರದಿಂದ ಪೋಷಕರು ಡಯಟ್ ಮತ್ತು ತಜ್ಞರಿಂದ ಮಗುವಿಗೆ ಕೌನ್ಸಿಲಿಂಗ್ ಮಾಡಿ ಶಾಲೆಯಿಂದ ಹೊರಗುಳಿಯದಂತೆ ಕ್ರಮವಹಿಸಲಾಗುತ್ತಿದೆ.
ಶಾಲೆಯಿಂದ ಹೊರಗೆ ಉಳಿದ/ಬಿಟ್ಟು ಹೋದ ಮಕ್ಕಳು : ಶಾಲೆಗೆ ದಾಖಲಾಗದ ಹಾಗೂ ಶಾಲೆಯನ್ನ ಅರ್ಧಕ್ಕೆ ತ್ಯಜಿಸಿದ ಎಲ್ಲ ಜಿಲ್ಲೆಗಳ ಮಕ್ಕಳ ಸಮೀಕ್ಷೆ ನಡೆಸಲಾಗಿದೆ. ಅದರಲ್ಲಿ 6-14 ವರ್ಷ ಹಾಗೂ 14 ವರ್ಷದಿಂದ 16 ವರ್ಷ ವಯಸ್ಸಿನ ಮಕ್ಕಳು ಒಟ್ಟು 34,411 ಶಿಕ್ಷಣದಿಂದ ದೂರ ಉಳಿದಿದ್ದಾರೆ. ಅದರಲ್ಲಿ ಪಾಲಿಕೆ ವ್ಯಾಪ್ತಿಯ ಮಕ್ಕಳ ಸಂಖ್ಯೆಯೇ ಹೆಚ್ಚಿದ್ದು, ಬರೋಬ್ಬರಿ 6,608 ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.
ಜಿಲ್ಲೆ | ಮಕ್ಕಳ ಸಂಖ್ಯೆ |
ಬಿಬಿಎಂಪಿ | 6608 |
ಬೀದರ್ | 2609 |
ಕಲಬುರಗಿ | 2129 |
ಯಾದಗಿರಿ | 1608 |
ವಿಜಯಪುರ | 1152 |
ಶಿವಮೊಗ್ಗ | 1046 |
ರಾಯಚೂರು | 1966 |
ಕೊಪ್ಪಳ | 1159 |
ಧಾರವಾಡ | 1463 |
ಚಿತ್ರದುರ್ಗ | 1587 |
ಬೆಳಗಾವಿ | 1265 |
ಬಳ್ಳಾರಿ | 1279 |
ಉತ್ತರ ಕನ್ನಡ | 509 |
ಬಾಗಲಕೋಟೆ | 763 |
ಬೆಂಗಳೂರು | 527 |
ಬೆಂಗಳೂರು ಗ್ರಾಮಾಂತರ | 489 |
ಚಾಮರಾಜನಗರ | 481 |
ಚಿಕ್ಕಮಗಳೂರು | 534 |
ದಕ್ಷಿಣ ಕನ್ನಡ | 195 |
ದಾವಣಗೆರೆ | 790 |
ಗದಗ | 505 |
ಹಾಸನ | 772 |
ಹಾವೇರಿ | 753 |
ಕೊಡಗು | 311 |
ಕೋಲಾರ | 338 |
ಮೈಸೂರು | 751 |
ರಾಮನಗರ | 540 |
ಉಡುಪಿ | 172 |
ತುಮಕೂರು | 890 |
ಉತ್ತರ ಕನ್ನಡ | 509 |
ಚಿಕ್ಕಬಳ್ಳಾಪುರ | 441 |