ಬೆಂಗಳೂರು: ರಾಜ್ಯದಲ್ಲಿ ಸಕ್ಕರೆ ಉತ್ಪಾದನೆಯಲ್ಲಿ ಸಾಧನೆ ಆಗಿದ್ದರೆ ಅದು ಉತ್ತರ ಕರ್ನಾಟಕ ಭಾಗದ ಸಕ್ಕರೆ ಕಾರ್ಖಾನೆಗಳಿಂದ ಎಂಬುದು ಪ್ರಮುಖವಾಗಿದೆ. ಹೀಗಾಗಿ, ದುಸ್ಥಿತಿಯಲ್ಲಿರುವ ಇವುಗಳ ಪುನಶ್ಚೇತನಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ನಷ್ಟದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಆರ್ಥಿಕ ನೆರವು ನೀಡುವ ಕಾರ್ಯ ಆಗಬೇಕು. ಇವರಿಗೆ ಆರ್ಥಿಕ ಸಹಕಾರ ನೀಡುತ್ತಿದ್ದ ಸಹಕಾರಿ ಬ್ಯಾಂಕುಗಳು ಕೂಡ ದುಸ್ಥಿತಿಯಲ್ಲಿವೆ. ಬ್ಯಾಂಕ್‌ಗಳು, ಕಾರ್ಖಾನೆ ಸುಸ್ಥಿತಿಗೆ ತರುವ ಸಂಬಂಧ ಸೂಕ್ತ ಮಾರ್ಗೋಪಾಯ ಕಂಡುಕೊಳ್ಳಬೇಕು ಎಂದು ಸರ್ಕಾರದ ಗಮನ ಸೆಳೆದರು.
'ಕಾರ್ಖಾನೆಗಳಲ್ಲಿನ ಆದಾಯ ಬ್ಯಾಂಕ್ ಸಾಲಕ್ಕೆ ಬಡ್ಡಿ ಕಟ್ಟೋಕೆ ಸಾಲದು':
87 ಸಕ್ಕರೆ ಕಾರ್ಖಾನೆಗಳು ರಾಜ್ಯದಲ್ಲಿದ್ದು, ಅದರಲ್ಲಿ 22 ಕಾರ್ಖಾನೆಗಳನ್ನು ಮುಚ್ಚಲಾಗಿದೆ. ಉತ್ತರ ಕರ್ನಾಟಕದಲ್ಲಿ 33 ಸಕ್ಕರೆ ಕಾರ್ಖಾನೆಗಳು ಇವೆ. ಇಲ್ಲಿಯೇ ಶೇ.75 ರಷ್ಟು ಕಾರ್ಖಾನೆ ಇದ್ದು ಬೆಳಗಾವಿ, ಬಾಗಲಕೋಟೆ, ವಿಜಯಪುರದಲ್ಲಿ ಹೆಚ್ಚು ಕಾರ್ಖಾನೆಗಳಿವೆ. ಶೇ.80ರಷ್ಟು ಸಕ್ಕರೆ ಉತ್ಪಾದನೆ ಆಗುತ್ತದೆ. ಇಲ್ಲಿನ ಕಾರ್ಖಾನೆಗಳಲ್ಲಿ ಬರುವ ಆದಾಯ ಬ್ಯಾಂಕ್ ಸಾಲಕ್ಕೆ ಬಡ್ಡಿ ಕಟ್ಟಲು ವ್ಯಯ ಆಗುತ್ತಿದೆ. ಕೋವಿಡ್ ನಿಂದಾಗಿ ಸಾವಿರಾರು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಕೊಟ್ಯಂತರ ರೈತರು ರಸ್ತೆಗೆ ಬರಬೇಕಾಗುತ್ತದೆ. ಇದು ಆತಂಕದ ವಿಷಯವಾಗಿದ್ದು, ಸರ್ಕಾರ ಇವರ ಸಹಾಯಕ್ಕೆ ಧಾವಿಸಬೇಕು ಎಂದು ಒತ್ತಾಯಿಸಿದರು.
ಮಹಾರಾಷ್ಟ್ರದಲ್ಲಿ ಸಕ್ಕರೆ ಕಾರ್ಖಾನೆಗಳು ಲಾಭದಲ್ಲಿವೆ. ವಿದ್ಯುತ್ ಉತ್ಪಾದನೆಗೆ ಪ್ರಥಮ ಆದ್ಯತೆ ನೀಡುತ್ತಾರೆ. ಹೆಚ್ಚಿನ ಬೆಲೆ ನೀಡುತ್ತಾರೆ. ಕಾರ್ಖಾನೆ ಉಳಿವಿಗೆ ಶ್ರಮಿಸುತ್ತಾರೆ. ಆದರೆ ರಾಜ್ಯದಲ್ಲಿ ಅದು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಉತ್ತೇಜನ ನೀಡಿದರೆ ಮಾತ್ರ ಉಳಿಗಾಲ ಇರಲಿದೆ. ಕಾರ್ಖಾನೆಗೆ ಸಕಾಲಕ್ಕೆ ಹಣ ಬಿಡುಗಡೆ ಮಾಡಬೇಕು ಎಂದರು.
ಬಿಜೆಪಿ ಸದಸ್ಯ ಹನುಮಂತ ನಿರಾಣಿ, ಬಾಗಲಕೋಟೆ ಜಿಲ್ಲೆಯಲ್ಲೇ 13 ಸಕ್ಕರೆ ಕಾರ್ಖಾನೆ ಇದೆ. ಸಾವಿರಾರು ಮಂದಿಗೆ ಉದ್ಯೋಗ ನೀಡಿದೆ. ಇವು ಸುಸಜ್ಜಿತವಾಗಿ ನಡೆಯಬೇಕು. ಕಬ್ಬು ಹೊರತುಪಡಿಸಿ ಬೇರೆ ರೈತರೂ ಅಭಿವೃದ್ಧಿ ಹೊಂದಿಲ್ಲ. ಬ್ಯಾಂಕ್‌ಗಳು ನೀಡುವ ಬಡ್ಡಿದರಕ್ಕಿಂತ ಸಹಕಾರಿ ಬ್ಯಾಂಕುಗಳ ಬಡ್ಡಿದರ ಹೆಚ್ಚು. ಸರ್ಕಾರ ಬಡ್ಡಿ ದರ ಕಡಿತಗೊಳಿಸಬೇಕು. ಸಕ್ಕರೆ ಕಾರ್ಖಾನೆಗಳಲ್ಲಿ ಉತ್ಪಾದನೆ ಆಗುವ ವಿದ್ಯುತ್ ಖರೀದಿಗೆ ಮುಂದಾಗಬೇಕು ಎಂದು ಹೇಳಿದರು.
'ಆದಷ್ಟು ಬೇಗ ಸರ್ಕಾರ ಸಮಸ್ಯೆ ಬಗೆಹರಿಸಲಿ':
ಆರ್.ಬಿ. ತಿಮ್ಮಾಪೂರ್ ಮಾತನಾಡಿ, ರನ್ನ ಸಕ್ಕರೆ ಕಾರ್ಖಾನೆ ನಷ್ಟದಿಂದಾಗಿ ಮುಚ್ಚಿದೆ. 17 ವರ್ಷಗಳ ಅವಧಿಯಲ್ಲಿ ಆದ ನಷ್ಟ ಈಗ ಈ ಸ್ಥಿತಿಗೆ ತಂದಿದೆ. ಇದನ್ನು ಸುಸ್ಥಿತಿಗೆ ತರುವ ಅವಕಾಶ ಇದ್ದರೂ ಸರ್ಕಾರ ಮಾಡಿಲ್ಲ. 170 ಕೋಟಿ ರೂ. ನಷ್ಟದಲ್ಲಿದೆ. ಆದಷ್ಟು ಬೇಗ ಸರ್ಕಾರ ಇಲ್ಲಿನ ಸಮಸ್ಯೆ ಪರಿಹರಿಸಿ, ಕಾರ್ಖಾನೆ ಮರು ಆರಂಭವಾಗುವಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದರು.
ಬಸವರಾಜ್ ಇಟಗಿ ಮಾತನಾಡಿ, ನಿರ್ವಹಣೆ ಲೋಪವೇ ಇಂದು ಕಬ್ಬಿನ ಕಾರ್ಖಾನೆ ನಷ್ಟಕ್ಕೆ ಕಾರಣ. ವ್ಯವಸ್ಥಿತ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ಸಕಾಲಕ್ಕೆ ಯಾವುದೇ ಕಾರ್ಯ ಆಗುತ್ತಿಲ್ಲ. ಕ್ರಮಬದ್ಧವಾಗಿ ನಿರ್ವಹಣೆ ಆಗಬೇಕು. ಕಾರ್ಖಾನೆ ಮೇಲೆ ನಿಗಾ ಇಡುವ ಕಾರ್ಯವನ್ನು ಸಹಕಾರ ಇಲಾಖೆ ಮಾಡಬೇಕು ಎಂದರು.
'ಸಹಕಾರಿ ಸಂಘದಿಂದ ಸಾಲ ಪಡೆದವರು ತೀರಿಸಿಲ್ಲ':
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ರಾಜ್ಯ ಸಕ್ಕರೆ ಉತ್ಪಾದನೆಯಲ್ಲಿ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ಇಲ್ಲಿ ಸಹಕಾರಿ ಸಂಘದಿಂದ ಸಾಲ ಪಡೆದವರು ತೀರಿಸಿಲ್ಲ. 34 ಸಕ್ಕರೆ ಕಾರ್ಖಾನೆಗಳಲ್ಲಿ ಅರ್ಧದಷ್ಟು ಮಂದಿ ಮಾತ್ರ ಸರಿಯಾಗಿ ನಡೆದುಕೊಳ್ಳುತ್ತಾರೆ. ಉಳಿದವರಲ್ಲಿ ಕೆಲವರು ಬಡ್ಡಿ ಕಟ್ಟುತ್ತಾರೆ. ಕೆಲ ಶಾಸಕರು ಕಾರ್ಖಾನೆ ಹೊಂದಿದ್ದು, ಅವರು ಇದುವರೆಗೂ ಒಂದು ರೂಪಾಯಿ ಭರಿಸಿಲ್ಲ. ಸಾಲ ಪಡೆದು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಕ್ಕರೆ ಲಾಬಿ ರಾಜ್ಯದಲ್ಲಿ ಪ್ರಬಲವಾಗಿದೆ. ಈ ವಿಚಾರ ಪ್ರಸ್ತಾಪಿಸಲು ಸಹ ಬಿಡಲ್ಲ ಎಂದರು.
ಎಸ್.ಆರ್. ಪಾಟೀಲರು ಒಪ್ಪಿದರೆ, ಇಂಧನ, ಸಕ್ಕರೆ ಮತ್ತು ಸಹಕಾರ ಸಚಿವರ ಜತೆ ಅಗತ್ಯವಿರುವ ಎಲ್ಲಾ ಸಂಬಂಧಿಸಿದ ಅಧಿಕಾರಿಗಳ ಜತೆ ಅಕ್ಟೋಬರ್16ರ ನಂತರ ಸಭೆ ನಡೆಸಿ ಲೋಪ ಸರಿಪಡಿಸಲು ತೀರ್ಮಾನಿಸೋಣ ಎಂದರು. ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಸಹ ಇದಕ್ಕೆ ಸಮ್ಮತಿ ವ್ಯಕ್ತಪಡಿಸಿದರು.