ಬೆಂಗಳೂರು: ಬಿಬಿಎಂಪಿ ಮೇಯರ್-ಉಪ ಮೇಯರ್ ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್ಗೆ ಕೈ ಕೊಟ್ಟ ಲೆಕ್ಕಾಚಾರ ಹೊರಬಿದ್ದಿದೆ. ಕಡೇ ಗಳಿಗೆಯಲ್ಲಿ ಹಲವರು ಆಮಿಷಗಳನ್ನ ತೋರಿದ್ರು ಎನ್ನಲಾಗಿದೆ. ಮತ ಚಲಾಯಿಸುವ ವೇಳೆ ಹಾಜರಿದ್ದರೂ ಮತ ಹಾಕದೆ ಕೊನೆ ಗಳಿಗೆಯಲ್ಲಿ ಗೇಮ್ ಬದಲಾಯಿಸಲಾಗಿದೆ ಎನ್ನಲಾಗಿದೆ. ಮೈತ್ರಿ ಮುಂದುವರಿಸುತ್ತೇವೆ ಎಂದು ಹೇಳಿಯೂ ಕಾಂಗ್ರೆಸ್ಗೆ ಜೆಡಿಎಸ್ನ ಕೆಲ ನಾಯಕರು ಕೈಕೊಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ವಿಧಾನಸಭೆ ಸದಸ್ಯರಾದ ಶರವಣ, ಸಿ.ಆರ್.ಮನೋಹರ್, ರಮೇಶ್ಗೌಡ, ಮಾಜಿ ಉಪ ಮೇಯರ್ ಆನಂದ್, ಪದ್ಮಾವತಿ, ಗಂಗಮ್ಮ, ದೇವದಾಸ್ ಹಾಗೂ ಮಂಜುಳಾ ನಾರಾಯಣಸ್ವಾಮಿ ಕೈ ಕೊಟ್ಟರೆ, ಉಪ ಮೇಯರ್ ಮತದಾನದ ವೇಳೆ ಮಹಾದೇವ್, ಹೇಮಲತಾ, ದೇವದಾಸ್ ಹಾಗೂ ಮಂಜುಳಾ ನಾರಾಯಣಸ್ವಾಮಿ ಮತ ಹಾಕದೆ ತಟಸ್ಥರಾದರು. ಈ ಮೂಲಕ ಪರೋಕ್ಷವಾಗಿ ಬಿಜೆಪಿಗೆ ಜೆಡಿಎಸ್ ನೆರವಾಯಿತು. ಮತದಾನ ಆರಂಭಕ್ಕೂ ಮುನ್ನ ಜೆಡಿಎಸ್ ಮುಖಂಡರ ಬಳಿ ಮಾತನಾಡಿ, ಕಡೆ ಗಳಿಗೆಯಲ್ಲಿ ಹಲವರು ಆಮಿಷಗಳನ್ನ ತೋರಿಸಿದ್ದರೂ ಎನ್ನಲಾಗಿದೆ.
ಮೇಯರ್ ಚುನಾವಣೆಯಲ್ಲಿ ಒಟ್ಟು 257ರಲ್ಲಿ ಮತದಾರರಲ್ಲಿ 8 ಮಂದಿ ಗೈರಾಗಿದ್ದರು. ಉಳಿದ 249ರಲ್ಲಿ ಜೆಡಿಎಸ್ನ ಪಾಲಿಕೆ ಸದಸ್ಯರಾದ ಮಂಜುಳ ನಾರಾಯಣಸ್ವಾಮಿ, ದೇವದಾಸ್ ಹೊರ ನಡೆದರು. ಉಳಿದ 247ರಲ್ಲಿ 129 ಮಂದಿ ಬಿಜೆಪಿ ಪರ ಮತ ಚಲಾಯಿಸಿದರು. ಮೈತ್ರಿ ಅಭ್ಯರ್ಥಿಗೆ 118 ಮತ ಬರಬೇಕಿತ್ತು. ಆದರೆ, ಮತ್ತೆ ಆರು ಜನ ಕೈ ಕೊಟ್ಟಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿಗೆ ಕೇವಲ 112 ಮತ ಚಲಾವಣೆಗೊಂಡವು.
ಬಿಬಿಎಂಪಿ ಮೇಯರ್, ಉಪ ಮೇಯರ್ ಚುನಾವಣೆಗೆ ಕಾಂಗ್ರೆಸ್-ಬಿಜೆಪಿ ಪಕ್ಷದ ಮುಖಂಡರೂ ಗೈರಾಗಿದ್ದರು. ಬಿಜೆಪಿಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ದೋಸ್ತಿ ಪಡೆಯಿಂದ ಡಿ.ಕೆ.ಸುರೇಶ್, ಜೈರಾಮ್ ರಮೇಶ್, ಕೆ.ಸಿ.ರಾಮಮೂರ್ತಿ, ರಘು ಆಚಾರ್, ಜೆಡಿಎಸ್ ಶಾಸಕ ಮಂಜುನಾಥ್, ಕೆ.ವಿ.ನಾರಾಯಣಸ್ವಾಮಿ ಗೈರಾಗಿದ್ದರು.