ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ಇರುವುದರಿಂದ ಸರ್ಕಾರಿ ನೌಕರರಿಗೂ ರಜೆ ಘೋಷಿಸುವಂತೆ ಸಚಿವಾಲಯದ ನೌಕರರ ಸಂಘ ಒತ್ತಾಯಿಸಿದೆ. ಅಲ್ಲದೆ ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಪತ್ರ ಸಲ್ಲಿಸಿದೆ.
ರಾಜ್ಯದಲ್ಲಿ ಕೊರೊನಾ ವೈರಸ್ ಭಿತಿಯಿಂದ ವಿಧಾನಸೌಧ, ವಿಕಾಸಸೌಧದ ಸಚಿವಾಲಯದ ನೌಕರರಿಗೂ ರಜೆ ನೀಡುವಂತೆ ಮುಖ್ಯಕಾರ್ಯದರ್ಶಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಮಹಾರಾಷ್ಟ್ರ ಹಾಗೂ ಒಡಿಶಾ ಸರ್ಕಾರಗಳು ಈಗಾಗಲೇ ರಜೆ ಘೋಷಣೆ ಮಾಡಿವೆ. ಹೀಗಾಗಿ ಕರ್ನಾಟಕದಲ್ಲೂ ಸರ್ಕಾರಿ ನೌಕರರಿಗೂ ರಜೆ ಘೋಷಿಸಬೇಕು ಎಂದು ಪತ್ರದ ಮೂಲಕ ಕೋರಲಾಗಿದೆ.
ಸರ್ಕಾರಿ ಕಚೇರಿಗಳು ತೆರೆದಿರುವುದರಿಂದ ಸಾರ್ವಜನಿಕರ ಸಂಪರ್ಕ ಹೆಚ್ಚಾಗುತ್ತಿದ್ದು, ಸರ್ಕಾರಿ ಕಚೇರಿಗಳಲ್ಲಿ ಇದರಿಂದ ಜನಸಂದಣಿ ಉಂಟಾಗುತ್ತಿದೆ. ಸರ್ಕಾರಿ ನೌಕರರಿಗೆ ಸೋಂಕು ತಗುಲುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರಿ ರಜೆ ಘೋಷಿಸುವಂತೆ ಮನವಿ ಮಾಡಲಾಗಿದೆ.