ಬೆಂಗಳೂರು: ಲಾಕ್‌ಡೌನ್ ಸಂದರ್ಭದಲ್ಲಿ ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ನಷ್ಟ ಅನುಭವಿಸಿದ ರೈತರನ್ನು ಹೈನುಗಾರಿಕೆ ಕೈ ಹಿಡಿಯಿತು. ಈ ಮೂಲಕ ಕಾಮಧೇನು ನಂಬಿದವರ ಕೈ ಬಿಡುವುದಿಲ್ಲ ಎಂಬುದು ಸಾಬೀತಾಗಿದೆ. ಆರ್ಥಿಕತೆಗೂ ಯಾವುದೇ ತೊಂದ್ರೆಯಾಗದಂತೆ ನೋಡಿಕೊಂಡಿತು. ಅದರಲ್ಲೂ ಹಾಲಿನ ಪ್ರತಿ ಲೀಟರ್ಗೆ ಇಂತಿಷ್ಟು ಎಂದು ದರ ಕಡಿತಗೊಳಿಸಿದ ಕಾರಣ ರೈತರನ್ನು ಆತಂಕಕ್ಕೆ ತಳ್ಳುವಂತಾಗಿದೆ. ಅದಲ್ಲದೆ, ಹಾಲಿನ ಉತ್ಪನ್ನಗಳಿಗೂ ಮಾರುಕಟ್ಟೆ ಇಲ್ಲದಂತಾಗಿದೆ.
ಹೊರ ರಾಜ್ಯಗಳಿಗೆ ಹಾಲಿನ ಸರಬರಾಜು ನಿಂತರೂ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ರಾಜ್ಯದ ರೈತರ ಹಾಲನ್ನು ಖರೀದಿಸಿ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ಮಾದರಿಯಾಗಿದೆ. ಆದರೆ, ಲಾಕ್ಡೌನ್ನಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಹಾಲಿನ ದರ ಕಡಿತಗೊಳಿಸಿ ಹಾಲು ಉತ್ಪಾದಕರ ಒಕ್ಕೂಟಗಳು ಶಾಕ್ ನೀಡಿದ್ದವು.
ಇದ್ರಿಂದ ಕಂಗಾಲಾದ ರೈತರು ರಸ್ತೆಗಳಿಗೆ ಹಾಲು ಸುರಿದು ಪ್ರತಿಭಟಿಸಿದ್ರು. ಇತ್ತ ಹಾಲಿನಿಂದ ಉತ್ಪಾದನೆಯಾದ ತುಪ್ಪ, ಬೆಣ್ಣೆ ಸೇರಿ ಹಲವು ಉತ್ಪನ್ನಗಳು ಮಾರಾಟವಾಗದೇ ಉಳಿದವು. ಇದರಿಂದಾಗಿ ಒಕ್ಕೂಟಗಳ ಆಡಳಿತ ಮಂಡಳಿಗಳು ನಷ್ಟಕ್ಕೊಳಗಾಗಿವೆ. ಮಂಡ್ಯ, ಉತ್ತರ ಕನ್ನಡ ಜಿಲ್ಲೆಗಳು ಇದಕ್ಕೆ ಹೊರತಾಗಿಲ್ಲ.
ಮಂಡ್ಯ ಹಾಲು ಉತ್ಪಾದಕರ ಒಕ್ಕೂಟ ಪ್ರತ್ಯಕ್ಷವಾಗಿ ಜಿಲ್ಲೆಯ 1 ಲಕ್ಷ 15 ಸಾವಿರ ರೈತರಿಗೆ ಉದ್ಯೋಗ ನೀಡಿದೆ. ಒಟ್ಟು 1,236 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. 2 ಲಕ್ಷ 64,664 ಮಂದಿ ಸದಸ್ಯರಿದ್ದಾರೆ. ಇವರಲ್ಲಿ 1 ಲಕ್ಷ 1,820 ಮಂದಿ ಇಂದಿಗೂ ಹಾಲು ಸರಬರಾಜು ಮಾಡ್ತಿದ್ದಾರೆ. ನಿತ್ಯ 8 ಲಕ್ಷ 45,368 ಲೀಟರ್ ಹಾಲನ್ನು ಮನ್‌ಮುಲ್ ಖರೀದಿ ಮಾಡ್ತಿದೆ. ಅತ್ತ ಉತ್ತರಕನ್ನಡ ಜಿಲ್ಲೆಯಲ್ಲಿ 27,687 ಹಾಲು ಉತ್ಪಾದಕರಿದ್ದು, 246 ಡೈರಿಗಳಲ್ಲಿ ಪ್ರತಿ ದಿನ 41,659 ಲೀಟರ್ ಹಾಲು ಸಂಗ್ರಹಿಸಲಾಗ್ತಿದೆ.
ಹಾಲಿನಿಂದ ಬೆಣ್ಣೆ, ಹಾಲಿನ ಪುಡಿ, ತುಪ್ಪ, ಪನ್ನೀರು, ಪೇಡ, ಕೋವಾ, ಮಸಾಲ ಮಜ್ಜಿಗೆ, ಬರ್ಫಿ ತಯಾರಿಸಲಾಗ್ತಿದೆ. ಮನ್ಮುಲ್ನಲ್ಲಿ ದಾಸ್ತಾನುಗಾರದಲ್ಲಿ 3223 ಟನ್ ಹಾಲಿನ ಪುಡಿ, 1175 ಟನ್ ಬೆಣ್ಣೆ, 14 ಟನ್ ತುಪ್ಪ, ಕೆನೆಭರಿತ 40 ಟನ್ ಉತ್ಪನ್ನ ಮಾರಾಟವಾಗದೇ ಉಳಿದಿದೆ. ಮಾರುಕಟ್ಟೆ ಇಲ್ಲದ ಕಾರಣ ಕೆಲವರು ಉತ್ಪಾದಿಸಿದ ಉತ್ಪನ್ನಗಳನ್ನು ಉಚಿತವಾಗಿ ಹಂಚಿದ್ದರು. ಕೆಲ ಸಣ್ಣಪುಟ್ಟ ತಯಾರಕರು ಮಾತ್ರ ಹಾಲನ್ನು ಖರೀದಿಸಿ ಹಾಲಿನ ಉತ್ಪನ್ನಗಳನ್ನು ತಯಾರಿಸಿದ್ದು, ಇದ್ರಿಂದ ಲಾಕ್‌ಡೌನ್ ವೇಳೆ ಅಂತಹ ಒಂದಿಷ್ಟು ಮಂದಿಗೆ ತೊಂದರೆಯಾಗಿರೋದು ಹೊರತುಪಡಿಸಿದರೆ, ಹೆಚ್ಚಿನ ಸಮಸ್ಯೆಯಾಗಿಲ್ಲ ಅಂತಾರೆ ಅಧಿಕಾರಿಗಳು.
ಕೋಚಿಮುಲ್, ತುಮುಲ್, ಚಾಮುಲ್ನಲ್ಲಿ ತಲಾ 2 ರೂಪಾಯಿ, ಮನ್ಮುಲ್ನಲ್ಲಿ ಏಪ್ರಿಲ್‌ನಿಂದ ಜುಲೈ 10ರವರೆಗೆ 6 ರೂಪಾಯಿ ಕಡಿತ, ಮೈಮುಲ್ನಲ್ಲಿ 1 ರೂಪಾಯಿ 50 ಪೈಸೆ, ಬೆಮುಲ್ನಲ್ಲಿ 1 ರೂಪಾಯಿ ಹೀಗೆ ಎಲ್ಲಾ ಒಕ್ಕೂಟಗಳಲ್ಲಿ ಇಳಿಕೆ ಮಾಡಲಾಗಿದೆ. ಇದ್ರಿಂದ ಕುಪಿತಗೊಂಡ ರೈತರು ಹಾಲನ್ನು ರಸ್ತೆ, ಕಾಲುವೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ರು. ಕೂಡಲೇ ನಷ್ಟಕ್ಕೊಳಗಾಗಿರುವ ರೈತರ ಕೈಯನ್ನು ಸರ್ಕಾರ ಹಿಡಿಯಬೇಕು ಎಂದು ಹಾಲು ಉತ್ಪಾದಕರು ಒತ್ತಾಯಿಸಿದ್ದಾರೆ.