ಬೆಂಗಳೂರು: ವಿವಿಧ ಅಪರಾಧ ಕೃತ್ಯಗಳನ್ನು ಎಸಗಿ ಹೊರಗಿನ ಪ್ರಪಂಚ ಕಾಣದೆ ಸೆರೆವಾಸ ಅನುಭವಿಸುತ್ತಿರುವ ಕೈದಿಗಳಿಗೆ ಕೊರೊನಾ ವೈರಸ್ ವಕ್ಕರಿಸಿದ್ದೇ ಅಚ್ಚರಿ. ಕೊರೊನಾ ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುತ್ತಿದೆ. ಹೊರಗಿನ ಯಾರ ಸಂಪರ್ಕವಿಲ್ಲದ ಕೈದಿಗಳಿಗೂ ಸೋಂಕು ಅಂಟುವ ಮೂಲಕ ಅಚ್ಚರಿ ಮೂಡಿಸಿದೆ. ಜೈಲಾಧಿಕಾರಿಗಳ ಮುಂಜಾಗ್ರತ ಕ್ರಮದಿಂದ ಸದ್ಯದ ಮಟ್ಟಿಗೆ ಸೋಂಕಿತ ಕೈದಿಗಳ ಸಂಖ್ಯೆ ಕಡಿಮೆಯಾಗಿದೆ.
ಕೊಲೆ, ದರೋಡೆ, ಕಳ್ಳತನ ಸೇರಿ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಆರೋಪಿಗಳನ್ನು ಪೊಲೀಸರು ಬಂಧಿಸುತ್ತಾರೆ. ಆಗ ಆರೋಪಿಗಳು ವಿವಿಧೆಡೆ ಓಡಾಡಿ, ಹಲವರ ಸಂಪರ್ಕ ಬೆಳೆಸಿರುತ್ತಾರೆ. ಬಂಧನದ ಬಳಿಕ ಪೊಲೀಸರು ಮತ್ತು ಕೈದಿಗಳು ಆರೋಪಿಗಳ ಸಂಪರ್ಕಕ್ಕೆ ಬರುತ್ತಾರೆ. ಅಲ್ಲದೆ, ಪೆರೋಲ್ ಮೇಲೆ ಹೋದವರು ಅವಧಿ ಮುಗಿದ ಬಳಿಕ ಮತ್ತೆ ಜೈಲಿಗೆ ಮರಳುತ್ತಾರೆ. ಅವರಿಂದಲೂ ಸೋಂಕು ಅಂಟಲಿದೆ. ಇತ್ತ ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಪೊಲೀಸರಿಂದಲೂ ಕೈದಿಗಳಿಗೆ ವೈರಸ್ ಭೀತಿ ಇದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು 3,500 ಕೈದಿಗಳ ಸಾಮರ್ಥ್ಯ ಹೊಂದಿದೆ. ಸದ್ಯ 4,953 ಪುರುಷರು, 197 ಮಹಿಳೆಯರು, 10 ಮಕ್ಕಳು ಸೇರಿ 5000ಕ್ಕೂ ಅಧಿಕ ಕೈದಿಗಳನ್ನು ಜೈಲಿನಲ್ಲಿಡಲಾಗಿದೆ. ರಾಜ್ಯದಲ್ಲಿ ಒಟ್ಟು 47 ಕಾರಾಗೃಹಗಳಿದ್ದು, ಅವುಗಳಲ್ಲಿ 9 ಕೇಂದ್ರ ಕಾರಾಗೃಹ, 21 ಜಿಲ್ಲಾ ಕಾರಾಗೃಹ, 1 ಬಯಲು ಕಾರಾಗೃಹ ಹಾಗೂ 13 ತಾಲೂಕು ಹಾಗೂ 3 ಕಂದಾಯ ಕಾರಾಗೃಹಗಳಿವೆ. ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಒಟ್ಟು 15,120 ಕೈದಿಗಳಿದ್ದಾರೆ. ಅದರಲ್ಲಿ ವಿಚಾರಣಾಧೀನ ಕೈದಿಗಳು 11,444, ಸಜಾ ಕೈದಿಗಳು 3,899 ಮಂದಿ ಇದ್ದಾರೆ.
ಈವರೆಗೆ ಸುಮಾರು 2,665 ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ. ಇದರಲ್ಲಿ ಒಟ್ಟು 303 ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಇವರ ಜೊತೆಗೆ ಸಂಪರ್ಕಿತ ಕೈದಿಗಳನ್ನ ಪ್ರತ್ಯೇಕ ಕೊಠಡಿಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಹೊಸ ಕೈದಿಗಳ ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದ್ರೆ ಮಾತ್ರ ಜೈಲಿನೊಳಗಡೆ ಸೇರಿಸಲು ಅನುಮತಿ ನೀಡಲಾಗ್ತಿದೆ. ಜೈಲಾಧಿಕಾರಿಗಳು ಮುಂಜಾಗ್ರತ ಕ್ರಮ ಕೈಗೊಂಡ ಕಾರಣ, ಸದ್ಯ ಕೊರೊನಾ ಕೇಸ್ಗಳು ಕಡಿಮೆಯಾಗ್ತಿವೆ. ಇಲ್ಲಿ 2 ಆ್ಯಕ್ಟೀವ್ ಕೇಸ್, ಕೋಲಾರ, ಮೈಸೂರು, ಕಲಬುರಗಿ, ಶಿವಮೊಗ್ಗ, ಧಾರವಾಡದಲ್ಲಿ ತಲಾ 1 ಪ್ರಕರಣ ಸಕ್ರಿಯವಾಗಿವೆ.
ಬೆಂಗಳೂರಿನ ಪಾದರಾಯನಪುರದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿಸಲಾಯ್ತು. ಕೆಲ ದಿನಗಳ ನಂತರ ಅವರಲ್ಲಿ ಕೊರೊನಾ ಕಾಣಿಸಿತ್ತು. ಬಳಿಕ ಜೈಲಿನ ಸಿಬ್ಬಂದಿಗೂ ಹರಡಿತ್ತು. ಅಷ್ಟೇ ಅಲ್ಲ, ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಸದ್ಯ 873 ಕೈದಿಗಳ ಪೈಕಿ 30 ಮಂದಿಗೆ ಸೋಂಕಿದೆ. ಹಾಸನದಲ್ಲಿ 207 ವಿಚಾರಣಾಧೀನ ಕೈದಿಗಳಿದ್ದು, ಯಾರೊಬ್ಬರಿಗೂ ಸೋಂಕು ಅಂಟಿಲ್ಲ.
ಜೈಲ್‌ಗಳಲ್ಲಿ ಕೊರೊನಾ ಪ್ರಕರಣ ಕಡಿಮೆಯಾಗಿವೆ. ಆದರೆ, ಕುಟುಂಬಸ್ಥರು, ಆಪ್ತೇಷ್ಠರ ಸಂಪರ್ಕ ಇಲ್ಲದೇ ಜೈಲು ಹಕ್ಕಿಗಳು ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ. ಮಾನಸಿಕವಾಗಿ ಕುಗ್ಗದಿರಲೆಂದು ಜೈಲುಗಳೊಳಗೆ ಮಾಸ್ಕ್ ತಯಾರಿ, ಬಟ್ಟೆ ತಯಾರಿ ಹೀಗೆ ಒಂದೊಂದು ಕೆಲಸ ಕೊಟ್ಟು ಚಟುವಟಿಕೆಯಿಂದ ಇರುವಂತೆ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ.