ಬೆಂಗಳೂರು: ಕೊರೊನಾ ಸೋಂಕಿನ ಕಾರಣಕ್ಕಾಗಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಿ, ಎಲ್ಲರನ್ನೂ ತೇರ್ಗಡೆ ಮಾಡಲಾಗಿತ್ತು. ಪದವಿ ಕಾಲೇಜುಗಳಿಗೆ ಪ್ರವೇಶಾತಿ ಪ್ರಕ್ರಿಯೆಯು ಶುರುವಾಗಬೇಕಿತ್ತು. ಆದರೆ ಇದೀಗ ಕಾಲೇಜು ಶಿಕ್ಷಣ ಇಲಾಖೆ ಪ್ರವೇಶಾತಿ ಪ್ರಕ್ರಿಯೆಯನ್ನು ಮುಂದೂಡಿ ಆದೇಶ ಹೊರಡಿಸಿದೆ. ಕೋವಿಡ್ ಮೂರನೇ ಅಲೆ ಕಾರಣಕ್ಕೆ ಮುಂದೂಡಿಕೆ ಮಾಡಲಾಗಿದೆಯಾ? ಎಂಬ ಅನುಮಾನ ಶುರುವಾಗಿದೆ.
ಈಗಾಗಲೇ ಖಾಸಗಿ ಪದವಿ ಕಾಲೇಜುಗಳಲ್ಲಿ ಪ್ರವೇಶಾತಿ ಶುರುವಾಗಿದೆ. ರಾಜ್ಯದ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆಯು ಆಗಸ್ಟ್ 4ರಿಂದ ಶುರುವಾಗಬೇಕಿತ್ತು. ಆದರೆ ಇದೀಗ ಕಾರಣಾಂತರಗಳಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ 2021-22ನೇ ಸಾಲಿನ ಪ್ರವೇಶಾತಿಯನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ಸೂಚಿಸಲಾಗಿದೆ. ಹಾಗೇ ಮುಂದಿನ ದಿನಾಂಕವನ್ನು ಶೀಘ್ರದಲ್ಲಿ ತಿಳಿಸಲಾಗುತ್ತದೆ ಅಂತ ಕಾಲೇಜು ಶಿಕ್ಷಣ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.
ಬೆಂಗಳೂರು, ಮೈಸೂರು, ಶಿವಮೊಗ್ಗ, ಮಂಗಳೂರು, ಧಾರವಾಡ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಅಗತ್ಯ ಕ್ರಮಕ್ಕೆ ಜಂಟಿ ನಿರ್ದೇಶಕರಿಂದ ಸೂಚಿಸಲಾಗಿದೆ. ಸದ್ಯ ಪ್ರವೇಶಾತಿ ಪ್ರಕ್ರಿಯೆ ಮುಂದೂಡಿಕೆಯಿಂದಾಗಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷಕ್ಕೆ ಪೆಟ್ಟು ಬಿದ್ದಂತಾಗಿದೆ.
ಇದನ್ನೂ ಓದಿ:ಬಿಎಸ್ವೈ ನಿವಾಸದೊಳಗೆ ಬಿರುಸುಗೊಂಡ ಸಚಿವಾಕಾಂಕ್ಷಿಗಳ ಲಾಬಿ.. ಹೊರಗಡೆ ಬೆಂಬಲಿಗರ ಪ್ರತಿಭಟನೆ