ಬೆಂಗಳೂರು: ನಗರದಲ್ಲಿ ದಿನೇ ದಿನೆ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ರೈಲು ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಅದು ಕೂಡ ಮಾರ್ಚ್ 23ರಿಂದಲೇ ವೇಳಾಪಟ್ಟಿ ಬದಲಾವಣೆ ಆಗಲಿದ್ದು, ಮಾರ್ಚ್ 31ರವರೆಗೆ ಜಾರಿಯಲ್ಲಿ ಇರಲಿದೆ.
ನಿಗದಿತ ವರ್ಗಕ್ಕೆ ಮಾತ್ರ ಪ್ರಯಾಣ. ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಸೇವೆ ಸ್ಥಗಿತ ಸೇರಿದಂತೆ ಮೆಟ್ರೋ ಸೇವೆಯ ಸ್ವರೂಪವನ್ನು ಸಂಪೂರ್ಣ ಬದಲಿಸಿ ಬಿಎಂಆರ್ಸಿಎಲ್ ಆದೇಶ ಹೊರಡಿಸಿದೆ. ಕೊರೊನಾ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಈ ಬಗೆಯ ಬದಲಾವಣೆ ತರಲಾಗಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಮೆಟ್ರೊ ಸೇವೆಗಳನ್ನು ಪ್ರಾಥಮಿಕವಾಗಿ ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರು, ಪೊಲೀಸ್ ಮತ್ತು ಇತರೆ ಭದ್ರತಾ ಸಿಬ್ಬಂದಿ, ವಿದ್ಯುತ್, ಸಾರಿಗೆ, ಪುರಸಭೆ ಹಾಗೂ ಸರಕಾರಿ ಸೇವೆಗಳಂತಹ ಅಗತ್ಯ ಸೇವೆಗಳನ್ನು ನೀಡುವವರು ಮಾತ್ರ ಬಳಸಬೇಕು. ಅಂತಹ ಎಲ್ಲಾ ಪ್ರಯಾಣಿಕರು ತಮ್ಮ ಇಲಾಖೆ ಒದಗಿಸಿದ ಗುರುತಿನ ಚೀಟಿಯನ್ನು ತೋರಿಸಿ ಪ್ರಯಾಣಿಸಬೇಕು ಎಂದು ನಿಗಮ ಸೂಚಿಸಿದೆ.
![corona effect namma metro time table has changed](https://etvbharatimages.akamaized.net/etvbharat/prod-images/6496279_818_6496279_1584814179782.png)
- ಬೆಳಗ್ಗೆ 6ರಿಂದ 8 ಗಂಟೆಯವರೆಗೆ 10 ನಿಮಿಷ ಅಂತರದಲ್ಲಿ ಅಗತ್ಯ ಸೇವೆಗಳಿಗೆ ಕೆಲಸ ಮಾಡುವ ವ್ಯಕ್ತಿಗಳಿಗೆ ಮಾತ್ರ.
- ಬೆಳಗ್ಗೆ 8 ಗಂಟೆಯಿಂದ 10 ಗಂಟೆಗೆ 5 ನಿಮಿಷದ ಅಂತರದಲ್ಲಿ ಅನಿವಾರ್ಯ ಮತ್ತು ಅಗತ್ಯವಿರುವ ಪ್ರಯಾಣಿಕರಿಗೆ
- ಬೆಳಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ಮತ್ತು ರಾತ್ರಿ 8ರಿಂದ ಮರುದಿನ ಬೆಳಗ್ಗೆ 6 ಗಂಟೆವರೆಗೆ ಸೇವೆ ಸ್ಥಗಿತ.
- ಸಂಜೆ 4 ರಿಂದ 5 ಗಂಟೆವರೆಗೆ 10 ನಿಮಿಷ ಅಂತರದಲ್ಲಿ ಸೇವೆ ಇರಲಿದೆ.
- ಸಂಜೆ 5 ರಿಂದ 7 ಗಂಟೆವರೆಗೆ 5 ನಿಮಿಷ ಅಂತರದಲ್ಲಿ ಸೇವೆ ಇರಲಿದೆ.
- ಸಂಜೆ 7 ರಿಂದ ರಾತ್ರಿ 8 ಗಂಟೆವರೆಗೆ 10 ನಿಮಿಷ ಅಂತರದಲ್ಲಿ ಸೇವೆ ಇರಲಿದೆ